ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್..! ಆಯ್ಕೆಯಾದ ಕೇವಲ ಒಂದೇ ತಿಂಗಳಲ್ಲಿ ರಾಜೀನಾಮೆ ನೀಡಿದ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ | Chandrima Bhattacharya

Chandrima Bhattacharya | ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್..! ಆಯ್ಕೆಯಾದ ಕೇವಲ ಒಂದೇ ತಿಂಗಳಲ್ಲಿ ರಾಜೀನಾಮೆ ನೀಡಿದ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ
Chandrima Bhattacharya | ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್..! ಆಯ್ಕೆಯಾದ ಕೇವಲ ಒಂದೇ ತಿಂಗಳಲ್ಲಿ ರಾಜೀನಾಮೆ ನೀಡಿದ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ
Published on
ಕೋಲ್ಕತ್ತಾ: ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಶನಿವಾರ ಮತ್ತೊಂದು ಭಾರೀ ಹಿನ್ನಡೆಯುಂಟಾಗಿದ್ದು, ದೀದಿಯ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷೆ ಹಾಗೂ ಮಾಜಿ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಪಕ್ಷದ ಎಲ್ಲಾ ಜವಾಬ್ದಾರಿಗಳಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಜೂನ್ 3 ರಂದು ಮಮತಾ ಬ್ಯಾನರ್ಜಿ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ ಪಕ್ಷವನ್ನು ಪುನರ್​ ರಚಿಸಿದ್ದರು ಈ ವೇಳೆ ಸುಬ್ರತಾ ಬಕ್ಷಿ ಅವರ ಬದಲಿಗೆ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ರಾಜ್ಯಾಧ್ಯಕ್ಷೆಯನ್ನಾಗಿ ನೇಮಿಸಲಾಗಿತ್ತು.

ರಾಜೀನಾಮೆ ಪತ್ರದಲ್ಲಿ ಏನಿದೆ..?

ಕಳೆದ ಜೂನ್ 3 ರಂದು ಕಾಳೀಘಾಟ್‌ನಲ್ಲಿ ನಡೆದ ಸಭೆಯಲ್ಲಿ ನನಗೆ ನೀಡಲಾಗಿದ್ದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಇದರೊಂದಿಗೆ ನಾನು ಪ್ರಸ್ತುತ ಹೊಂದಿರುವ ಇತರ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಚಂದ್ರಿಮಾ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ವಿವಿಧ ಬ್ಯಾಂಕ್‌ ಖಾತೆಗಳಿಗೆ ಸಂಬಂಧಿಸಿದಂತೆ ಟಿಎಂಸಿ ಮತ್ತು ಅದಕ್ಕೆ ಸಂಯೋಜಿತವಾಗಿರುವ ಇತರ ಸಂಸ್ಥೆಗಳ ಅಧಿಕೃತ ಸಹಿದಾರರ ಸ್ಥಾನದಿಂದ ಹಾಗೂ ಭಾರತೀಯ ಚುನಾವಣಾ ಆಯೋಗದ ಮುಂದೆ ಪಕ್ಷದ ಅಧಿಕೃತ ಪ್ರತಿನಿಧಿಯಾಗಿದ್ದ ಜವಾಬ್ದಾರಿಯಿಂದಲೂ ನಾನು ಹಿಂದೆ ಸರಿಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಪತ್ರದ ಕೊನೆಯಲ್ಲಿ ಮಮತಾ ಬ್ಯಾನರ್ಜಿ ಅವರ ಮೇಲಿರುವ ಗೌರವ ಸದಾ ಇರಲಿದೆ ಎಂದು ಉಲ್ಲೇಖಿಸಿದ್ದಾರೆ.
ಚುನಾವಣಾ ಸೋಲಿನ ಬೆನ್ನಲ್ಲೇ ಟಿಎಂಸಿ ಪಕ್ಷವು ಇತಿಹಾಸದಲ್ಲೇ ಕಾಣದಂತಹ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಕ್ಷದ ಒಟ್ಟು 80 ಶಾಸಕರ ಪೈಕಿ ಬಹುಪಾಲು ಶಾಸಕರು ಈಗಾಗಲೇ ಬಂಡಾಯವೆದ್ದು, ರಿತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಪ್ರತ್ಯೇಕ ಬಣವನ್ನು ರಚಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ 20 ಸಂಸದರು ಸಹ ದೀದಿ ವಿರುದ್ಧ ದಂಗೆ ಎದ್ದು, ಎನ್‌ಸಿಪಿಐ ಎಂಬ ಅಷ್ಟಾಗಿ ಪರಿಚಿತವಲ್ಲದ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎಗೆ ಬೆಂಬಲ ಘೋಷಿಸಿದ್ದಾರೆ.

ನಾವೇ ಅಸಲಿ ಟಿಎಂಸಿ ಎಂದ ಬಂಡಾಯಗಾರರು!

ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆಗೂ ಒಂದು ದಿನ ಮುಂಚೆ, ಅಂದರೆ ಶುಕ್ರವಾರ ಕೋಲ್ಕತ್ತಾದ ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ ನಡೆದಿತ್ತು. ಬಂಡಾಯ ಬಣವು ಕೋಲ್ಕತ್ತಾದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ತೃಣಮೂಲ ಭವನವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಕಚೇರಿಯ ಬೀಗಗಳನ್ನು ಬದಲಾಯಿಸಿದ ಬಂಡಾಯಗಾರರು, ಅರೂಪ್ ರಾಯ್ ಅವರನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸುವ ಸೈನ್‌ಬೋರ್ಡ್ ಅನ್ನು ಅಲ್ಲಿ ಅಳವಡಿಸಿದ್ದರು. ಅಷ್ಟೇ ಅಲ್ಲದೆ, ತಾವೇ ಅಸಲಿ ಟಿಎಂಸಿ ಎಂದು ಚುನಾವಣಾ ಆಯೋಗದ ಮುಂದೆ ಹಕ್ಕು ಮಂಡಿಸಿದ್ದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ ನಿಷ್ಠ ನಾಯಕರು ತಕ್ಷಣವೇ ಕಚೇರಿಗೆ ಧಾವಿಸಿ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂದ ಕಚೇರಿಯ ಸುತ್ತಲೂ ಸಿಆರ್‌ಪಿಎಫ್ ಮತ್ತು ಕೋಲ್ಕತ್ತಾ ಪೊಲೀಸರನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿದೆ. ಪಕ್ಷದ ಕಚೇರಿಗಾಗಿ ಒಳಜಗಳ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಾಧ್ಯಕ್ಷೆ ರಾಜೀನಾಮೆ ನೀಡಿರುವುದು ಮಮತಾ ಬ್ಯಾನರ್ಜಿ ಅವರ ಕೋಟೆಯನ್ನು ಸಂಪೂರ್ಣವಾಗಿ ನಡುಗಿಸಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net