Bihar Exit Poll | ಹತ್ತನೇ ಎಕ್ಸಿಟ್​ ಪೋಲ್​​ನಲ್ಲೂ ಎನ್​ಡಿಎ ಮೇಲುಗೈ; ಆದರೆ..!

Bihar Exit Poll | ನಿತೀಶ್​-ಮೋದಿ ಜೋಡಿ (ಸಂಗ್ರಹ ಚಿತ್ರ)
Bihar Exit Poll | ನಿತೀಶ್​-ಮೋದಿ ಜೋಡಿ (ಸಂಗ್ರಹ ಚಿತ್ರ)
Published on
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಹತ್ತನೇ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಅದು ಉಳಿದ ಸಂಸ್ಥೆಗಳಂತೆ ಎನ್‌ಡಿಎಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 125 ರಿಂದ 145 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ವೋಟ್ ವೈಬ್ ಭವಿಷ್ಯ ನುಡಿದಿದ್ದು, ಬಹುಮತಕ್ಕೆ 122 ಸದಸ್ಯರ ಅವಶ್ಯಕತೆ ಇದ್ದು, ಮಹಾಘಟಬಂಧನ್ 95-115 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಪ್ರಶಾಂತ್ ಕಿಶೋರ್​ರ ಜನ್ ಸುರಾಜ್ ಪಕ್ಷ ಖಾತೆ ತೆರೆಯುವುದೇ ಅನುಮಾನ ಎಂದಿದೆ.
ಮಂಗಳವಾರ ( ನವೆಂಬರ್​ 11) ತಮ್ಮ ಸಂಖ್ಯೆಗಳನ್ನು ಪ್ರಕಟಿಸಿದ ಇತರ ಒಂಬತ್ತು ಎಕ್ಸಿಟ್​ ಪೋಲ್​ಗಳಲ್ಲಿ ಎನ್​ಡಿಎಗೆ ಅತ್ಯಂತ ಕಡಿಮೆ ಸ್ಥಾನ ನೀಡಿದ್ದು ಚಾಣಕ್ಯ ಸ್ಟ್ರಾಟಜೀಸ್. ಇದು ಆಡಳಿತರೂಢ ಮೈತ್ರಿಕೂಟಕ್ಕೆ 130-138 ಸ್ಥಾನಗಳನ್ನು ನೀಡಿದೆ. ಪೀಪಲ್ಸ್ ಇನ್‌ಸೈಟ್ ಮತ್ತು ಪೀಪಲ್ಸ್ ಪಲ್ಸ್, 133 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ನೀಡಿದ್ದು, ಮ್ಯಾಟ್ರಿಜ್ 147 ರಿಂದ 167 ಎಂದಿದೆ.
ಎನ್‌ಡಿಟಿವಿ ನಡೆಸಿದ ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 146 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆಯಿದೆ, ಇತ್ತ ಮಹಾಘಟಬಂಧನ್ 91 ಕ್ಷೇತ್ರಗಳಿಗೆ ಸೀಮಿತವಾಗಿದೆ. ಜನ ಸುರಾಜ್ ಪಕ್ಷವು ಒಂದು ಸ್ಥಾನ ಪಡೆದರೆ ಹೆಚ್ಚು ಎಂದಿದೆ.
2025 ರ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಿತು. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, 2 ನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಈಗ ಬಿಡುಗಡೆಯಾಗಿರುವ ಎಂಟು ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದು. ದೈನಿಕ್ ಭಾಸ್ಕರ್ ಸಮೀಕ್ಷೆಯು ಎನ್‌ಡಿಎ 145 ರಿಂದ 160 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದೆ, ಇತ್ತ ಮ್ಯಾಟ್ರಿಜ್ 147 ರಿಂದ 167 ಸ್ಥಾನಗಳ ಭವಿಷ್ಯ ನುಡಿದಿದೆ.
ಸಮೀಕ್ಷೆಗಳ ಭವಿಷ್ಯವಾಣಿ
ಸಮೀಕ್ಷಾ ಸಂಸ್ಥೆಗಳು ಎನ್​ಡಿಎ ಮಹಾಘಟಬಂದನ್​
ದೈನಿಕ್​ ಭಾಸ್ಕರ್​ 145-160 73-91
ಚಾಣಕ್ಯ ಸ್ಟ್ರ್ಯಾಟರ್ಜೀಸ್​ 130-138 100-108
ಮ್ಯಾಟ್ರಿಜ್ 147-167 70-90
ಪಿ-ಮಾರ್ಕ್​ 142-162 80-98
ಪೀಪಲ್​ ಇನ್​ಸೈಟ್​ 133-148 87-102
ಟಿಐಎಫ್​ ರೀಸರ್ಚ್​​ 145-163 76-95
ಡಿವಿ ರೀಸರ್ಚ್​​ 137-152 83-98
ಜೆವಿಸಿ 135-150 88-103
ಬಿಹಾರದಲ್ಲಿ ಎನ್‌ಡಿಎ, ಮಹಾಘಟಬಂಧನ್ ಮತ್ತು ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರಿಂದ, ಪ್ರಚಾರವು ತೀವ್ರ ತುರುಸಿನಿಂದ ಕೂಡಿತ್ತು. ಎನ್‌ಡಿಎ ತನ್ನ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಎದುರಿಸಿ, ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅಭಿವೃದ್ಧಿ ಕಾರ್ಯಗಳನ್ನು ನೆಚ್ಚಿಕೊಂಡಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ, ಆರ್‌ಜೆಡಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜಂಗಲ್ ರಾಜ್ ಆಡಳಿತ ನಡೆಯಲಿದೆ ಎಂದು ಎಚ್ಚರಿಸಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net