ದೀದಿಗೆ ಮತ್ತೊಂದು ಮಹಾ ಆಘಾತ!...ಟಿಎಂಸಿಯ 12 ಲೋಕಸಭಾ ಸದಸ್ಯರು ಶೀಘ್ರದಲ್ಲೇ ಬಿಜೆಪಿ ಪಾಳಯಕ್ಕೆ..? | TMC Internal Crisis

TMC Internal Crisis
TMC Internal Crisis
Published on
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಭಾರಿ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್‌ನಲ್ಲಿ ತೀವ್ರ ಆಂತರಿಕ ಕಲಹ (TMC Internal Crisis) ಸೃಷ್ಟಿಯಾಗಿದ್ದು, ಟಿಎಂಸಿಯ ಅನೇಕ ಹಾಲಿ ಸಂಸದರು ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ದೊಡ್ಡ ಗುಂಪೊಂದು ಪಕ್ಷ ತೊರೆಯಲಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿವೆ.
ಮೂಲಗಳ ಪ್ರಕಾರ, ಲೋಕಸಭೆಯಲ್ಲಿರುವ ಟಿಎಂಸಿಯ ಒಟ್ಟು 29 ಸಂಸದರ ಪೈಕಿ ಸುಮಾರು 12 ಸಂಸದರು ಈಗಾಗಲೇ ಬಿಜೆಪಿಗೆ ಸೇರಲು ಅಥವಾ ಬೆಂಬಲಿಸಲು ನಿರ್ಧರಿಸಿದ್ದಾರೆ. ಇದರೊಂದಿಗೆ ಮತ್ತೊಂದು 5 ರಿಂದ 6 ಸಂಸದರ ಜೊತೆಯೂ ಮಾತುಕತೆ ಪ್ರಗತಿಯಲ್ಲಿದೆ ಎನ್ನಲಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಪಾರಾಗಲು ಕನಿಷ್ಠ 19 ರಿಂದ 20 ಸಂಸದರನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ತೃಣಮೂಲ ಕಾಂಗ್ರೆಸ್‌ನ ನಾಯಕತ್ವಕ್ಕೂ ಈ ಪಕ್ಷಾಂತರದ ಸುಳಿವು ಸಿಕ್ಕಿದ್ದು, ಪಕ್ಷವನ್ನು ಒಗ್ಗಟ್ಟಾಗಿಡಲು ಕಸರತ್ತು ಆರಂಭಿಸಿದೆ. ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಗೆ ಅತ್ಯಂತ ಆಪ್ತರೆನ್ನಲಾದ ಕೆಲವು ಸಂಸದರೇ ಈ ಬಂಡಾಯ ಗುಂಪಿನಲ್ಲಿದ್ದಾರೆ ಎಂಬುದು ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿದೆ.
ಪ್ರಸ್ತುತ ಲೋಕಸಭೆಯಲ್ಲಿ 240 ಸಂಸದರನ್ನು ಹೊಂದಿರುವ ಬಿಜೆಪಿ, ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತಿದೆ. ಒಂದು ವೇಳೆ ಟಿಎಂಸಿಯ ದೊಡ್ಡ ಸಂಖ್ಯೆಯ ಸಂಸದರು ಬಿಜೆಪಿಗೆ ಬಂದರೆ, ಕೇಂದ್ರದಲ್ಲಿ ಪಕ್ಷದ ಬಲ ಹೆಚ್ಚಾಗುವುದರ ಜೊತೆಗೆ ಮಿತ್ರಪಕ್ಷಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದರ ಬೆನ್ನಲ್ಲೇ ರಾಜ್ಯಸಭೆಯ ಟಿಎಂಸಿ ಸಂಸದರ ಮೇಲೂ ಬಿಜೆಪಿ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಸುವೇಂದು ಅಧಿಕಾರಿ ಸಭೆಯಲ್ಲಿ ಟಿಎಂಸಿ ಸಂಸದೆ ಕಾಕೊಳಿ ಭಾಗಿ

ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮಂಗಳವಾರ ಮತ್ತೊಂದು ಭಾರಿ ತಿರುವು ಸಿಕ್ಕಿದ್ದು, ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕರೆದಿದ್ದ ಆಡಳಿತಾತ್ಮಕ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಕಾಕೊಳಿ ಘೋಷ್ ದಸ್ತಿದಾರ್ ಭಾಗವಹಿಸಿದ್ದಾರೆ. ಕಲ್ಯಾಣಿ ವಿಶ್ವವಿದ್ಯಾಲಯದ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆದ ಮೂರು ಜಿಲ್ಲೆಗಳ ಪ್ರಮುಖ ಸಭೆಯಲ್ಲಿ ಕಾಕೊಳಿ ಅವರೊಂದಿಗೆ ಟಿಎಂಸಿಯ ಇತರ ಕೆಲವು ಶಾಸಕರು ಕೂಡ ಉಪಸ್ಥಿತರಿದ್ದುದು ರಾಜಕೀಯ ಚರ್ಚೆಯನ್ನು ತೀವ್ರಗೊಳಿಸಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಕೊಳಿ ಘೋಷ್ ದಸ್ತಿದಾರ್, ಆಡಳಿತ ಎಂಬುದು ಎಲ್ಲರಿಗೂ ಸೇರಿದ್ದು ಎಂದು ಹೇಳುವ ಮೂಲಕ ತಾವೂ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆಯೇ ಎಂಬ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಆದರೆ ಅವರು ಈ ಬಗ್ಗೆ ನೇರ ಪ್ರತಿಕ್ರಿಯೆ ನೀಡಿಲ್ಲ. ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾದ ಬಳಿಕ ಆಡಳಿತಾತ್ಮಕ ಸಭೆಗಳಿಗೆ ವಿರೋಧ ಪಕ್ಷದ ಸಂಸದರು ಮತ್ತು ಶಾಸಕರನ್ನು ಆಹ್ವಾನಿಸುವ ನಿರ್ಧಾರ ಕೈಗೊಂಡಿದ್ದು, ಅದರಂತೆ ಟಿಎಂಸಿ ಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪರಾಭವಗೊಂಡ ಬಳಿಕ, ಕಾಕೊಳಿ ಘೋಷ್ ದಸ್ತಿದಾರ್​​ರನ್ನು ಲೋಕಸಭೆಯ ಚೀಫ್ ವ್ಹಿಪ್ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ತದನಂತರ ಅವರು ಬಾರಾಸತ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಹೀಗಾಗಿ ಅವರು ಶೀಘ್ರದಲ್ಲೇ ಕಮಲ ಮುಡಿಯಲಿದ್ದಾರೆ ಎಂಬ ಚರ್ಚೆ ಜೋರಾಗಿದೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net