ವಿಮಾ ಕ್ಷೇತ್ರದಲ್ಲಿ ವಾರ್ಷಿಕ 10,000 ಕೋಟಿ ರೂ. ಸೋರಿಕೆ

insurance
insurance
Published on

ಪ್ರಮುಖ ಮುಖ್ಯಾಂಶಗಳು

  • ವಂಚನೆ, ದುರ್ಬಳಕೆ ಕಾರಣ
  • ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ
  • ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ವರದಿ
ನವದೆಹಲಿ: ದೇಶದ ವಿಮಾ ವ್ಯವಸ್ಥೆಯಲ್ಲಿ ವಂಚನೆ ಮತ್ತು ದುರ್ಬಳಕೆಯಿಂದಾಗಿ ಪ್ರತಿ ವರ್ಷ ಸುಮಾರು 10,000 ಕೋಟಿ ರೂ.ನಷ್ಟು ಮೊತ್ತ ವ್ಯವಸ್ಥಿತವಾಗಿ ಸೋರಿಕೆ ಆಗುತ್ತಿದ್ದು, ಇದರಿಂದ ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಆಗುತ್ತಿದೆ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ವರದಿ ತಿಳಿಸಿದೆ. ವಂಚನೆಯ ಮನೋಭಾವ, ಪ್ರಕ್ರಿಯೆಯಲ್ಲಿನ ಲೋಪಗಳು, ಉದ್ದೇಶಪೂರ್ವಕ ನಿಯಮ ಉಲ್ಲಂಘನೆ ಪ್ರಕರಣಗಳು ಕ್ರಮೇಣ ಹೆಚ್ಚಾಗುತ್ತಿವೆ. ಇದನ್ನು ತಡೆಯಲು ವಿಮಾ ಕಂಪನಿಗಳು, ಕಾರ್ಪೆರೇಟ್ ಸಂಸ್ಥೆಗಳು, ಸರ್ಕಾರ ಮತ್ತು ನಿಯಂತ್ರಣ ಸಂಸ್ಥೆಗಳು ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸೋರಿಕೆ ತಡೆಗೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಜನರೇಟಿವ್ ಎಐನಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಬೇಕು. ಘಟನೆ ನಡೆದ ನಂತರ ಪೊಲೀಸ್ ವ್ಯವಸ್ಥೆಯನ್ನು ಬಳಸಿ ಕ್ರಮ ಕೈಗೊಳ್ಳುವುದಕ್ಕಿಂತ, ತಂತ್ರಜ್ಞಾನ ಬಳಸುವ ಮೂಲಕ ಘಟನೆ ನಡೆಯುವುದನ್ನೇ ತಡೆಯಬಹುದು ಎಂದು ವರದಿ ತಿಳಿಸಿದೆ. ಆರೋಗ್ಯ ವಿಮಾ ಉದ್ಯಮ ಪ್ರಸಕ್ತ ವರ್ಷದಲ್ಲಿ 1.27 ಲಕ್ಷ ಕೋಟಿ ರೂ.ಗೆ ತಲುಪಿದೆ. ಕಳೆದ 5 ವರ್ಷಗಳಲ್ಲಿ ಸುಮಾರು ಶೇ. 17ರಷ್ಟು ವಾರ್ಷಿಕ ಬೆಳವಣಿಗೆ ದರ ತೋರಿದೆ. ಮುಂದಿನ 5 ವರ್ಷದಲ್ಲಿ ಶೇ. 16-18ರಷ್ಟು ಬೆಳವಣಿಗೆ ಆಗಲಿದೆ. 2030ಕ್ಕೆ 2.6-3 ಲಕ್ಷ ಕೋಟಿ ರೂ.ಗೆ ತಲುಪಲಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆರೋಗ್ಯ ವಿಮಾ ಕ್ಷೇತ್ರದಲ್ಲಿ ಶೇ. 90ರಷ್ಟು ಕ್ಲೇಮ್ಳಲ್ಲಿ ಯಾವುದೇ ಸಮಸ್ಯೆ ಕಂಡುಬರುತ್ತಿಲ್ಲ. ಶೇ. 2ರಷ್ಟು ಪ್ರಕರಣಗಳಲ್ಲಿ ವಂಚನೆ ಪತ್ತೆಯಾಗುತ್ತಿದೆ. ಉಳಿದ ಶೇ. 8ರಷ್ಟು ಪ್ರಕರಣಗಳಲ್ಲಿ ಕ್ಷಮತೆಯ ಕೊರತೆ, ದುರ್ಬಳಕೆ ಮತ್ತಿತರ ವ್ಯವಸ್ಥಿತ ಸೋರಿಕೆ ಕಂಡುಬರುತ್ತಿದೆ. ಪ್ರತಿ ವರ್ಷ ಅಂದಾಜು 8,000-10,000 ಕೋಟಿ ರೂ.ನಷ್ಟು ಮೌಲ್ಯದ ಕ್ಲೇಮ್ಳಿಗೆ ತೊಂದರೆ ಆಗುತ್ತಿದ್ದು, ಇದರಿಂದ ವಿಮಾ ಕಂಪನಿಗಳ ಲಾಭಾಂಶವೂ ಕಡಿಮೆ ಆಗುತ್ತಿದೆ. ಗ್ರಾಹಕರ ಪ್ರೀಮಿಯಂ ಹೆಚ್ಚಳವಾಗಿ ಅವರಲ್ಲಿ ಒತ್ತಡ ಸೃಷ್ಟಿಸುತ್ತಿದೆ ಎಂದು ಬಿಸಿಜಿ ವ್ಯವಸ್ಥಾಪಕ ನಿರ್ದೇಶಕ ಸ್ವಯಂಜಿತ್ ಮಿಶ್ರಾ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net