50 ಲಕ್ಷ ಸದಸ್ಯರೇ ಟಾರ್ಗೆಟ್, ರಾಜಕಾರಣಿಗಳಿಗೆ ಟರ್ಮ್ ಲಿಮಿಟ್!.. ಅಣ್ಣಾಮಲೈ ಹೊಸ ಪಕ್ಷದ ರೋಡ್‌ಮ್ಯಾಪ್ ರೆಡಿ | Annamalai

Annamalai | ಕೆ. ಅಣ್ಣಾಮಲೈ
Annamalai | ಕೆ. ಅಣ್ಣಾಮಲೈ
Published on
ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿ ವಿ ದಿ ಲೀಡರ್ಸ್ (We the Leaders) ಎಂಬ ಸಾಮಾಜಿಕ ಆಂದೋಲನ ಆರಂಭಿಸಿರುವ ಕೆ. ಅಣ್ಣಾಮಲೈ (Annamalai) ಅವರ ಚಳವಳಿಯು, ಅಧಿಕೃತವಾಗಿ ರಾಜಕೀಯ ಪಕ್ಷವಾಗಿ ಬದಲಾಗಲು ಕ್ಷಣಗಣನೆ ಆರಂಭಿಸಿದೆ. ನಮ್ಮ ಆಂದೋಲನವು ಜುಲೈ ವೇಳೆಗೆ ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲಿದ್ದು, ಸರಿಯಾದ ಹಾದಿಯಲ್ಲೇ ಸಾಗುತ್ತಿದೆ ಎಂದು ಅಣ್ಣಾಮಲೈ ಬುಧವಾರ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಪಕ್ಷದ ಸಂಘಟನೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ಹಲವು ರೋಚಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

18 ಲಕ್ಷ ಜನ ಸೇರ್ಪಡೆ!

ವಿಡಿಯೋದಲ್ಲಿ ಮಾತನಾಡಿರುವ ಅಣ್ಣಾಮಲೈ, ಸದ್ಯಕ್ಕೆ ಯಾವುದೇ ವೈಯಕ್ತಿಕ ಲಾಭ ಅಥವಾ ನಿರೀಕ್ಷೆಯಿಲ್ಲದೆ ಬರೋಬ್ಬರಿ 18 ಲಕ್ಷ ಸದಸ್ಯರು ನಮ್ಮ ಸಂಘಟನೆಯನ್ನು ಸೇರಿಕೊಂಡಿದ್ದಾರೆ. ಇದು ಕೇವಲ ಆನ್‌ಲೈನ್ ಮೂಲಕ ಮಾತ್ರವಲ್ಲ, ತಳಮಟ್ಟದಲ್ಲಿ ಜನರನ್ನು ಖುದ್ದಾಗಿ ಭೇಟಿಯಾಗುವ ಮೂಲಕವೂ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಈ ಚಳವಳಿಯು ತಮಿಳುನಾಡಿನಲ್ಲಿ ದೊಡ್ಡ ಬದಲಾವಣೆ ತರಲಿದೆ ಎಂಬ ನಂಬಿಕೆ ಜನರಲ್ಲಿದೆ. ಜುಲೈನಲ್ಲಿ ನಮ್ಮ ಸಂಘಟನೆ ರಾಜಕೀಯ ಪಕ್ಷವಾಗಿ ರೂಪಾಂತರಗೊಂಡ ನಂತರ, ಇದರ ಕಾರ್ಯವೈಖರಿ ಮತ್ತು ಚಟುವಟಿಕೆಗಳ ಸ್ವರೂಪವೇ ಬದಲಾಗಲಿದೆ. ಅದನ್ನು ಇಡೀ ರಾಜ್ಯದ ಜನತೆ ನೋಡಲಿದ್ದಾರೆ ಎಂದಿರುವ ಸಿಂಗಂ, ನಮ್ಮ ಮುಂದಿನ ಗುರಿ 50 ಲಕ್ಷ ಸದಸ್ಯರನ್ನು ತಲುಪುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಣ್ಣಾಮಲೈ ಪಕ್ಷದ ಮುಖ್ಯ ಸಿದ್ಧಾಂತ

ಎಲ್ಲಾ ಧರ್ಮಗಳಿಗೂ ಸಮಾನ ಗೌರವ: ನಮ್ಮ ಈ ರಾಜಕೀಯ ಪಕ್ಷವು ಜನರ ನಿರೀಕ್ಷೆ ತಲುಪುವುದರಲ್ಲಿ ವಿಫಲವಾಗುವುದಿಲ್ಲ, ಜನರಿಗೆ ಸುಳ್ಳು ಹೇಳುವುದಿಲ್ಲ ಮತ್ತು ಅವರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ. ನಮಗೆ ಎಲ್ಲಾ ಧರ್ಮಗಳು ಸಮಾನ, ಇದರಲ್ಲಿ ಯಾವುದೇ ಎರಡನೇ ಮಾತಿಲ್ಲ ಎಂದು ಅಣ್ಣಾಮಲೈ ಸಾರಿದ್ದಾರೆ.
ರಾಜಕಾರಣಿಗಳಿಗೆ ಅವಧಿ ಮಿತಿ (Term Limit): ರಾಜಕೀಯ ವ್ಯವಸ್ಥೆಯನ್ನು ಶುದ್ಧೀಕರಿಸಲು ಅಣ್ಣಾಮಲೈ ಹೊಸ ಸೂತ್ರವನ್ನು ಮುಂದಿಟ್ಟಿದ್ದಾರೆ. ಅವರ ಪಕ್ಷದಲ್ಲಿ ರಾಜಕಾರಣಿಗಳ ಅಧಿಕಾರಾವಧಿಗೆ ಮಿತಿ ಇರಲಿದ್ದು, ಹಳಬರನ್ನು ಬದಿಗಿಟ್ಟು ಹೊಸಬರಿಗೆ ನಿರಂತರವಾಗಿ ಅವಕಾಶ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ.
ತಂತ್ರಜ್ಞರು ಮತ್ತು ಎನ್‌ಆರ್‌ಐಗಳಿಗೆ ರಾಜಕೀಯಕ್ಕೆ ಎಂಟ್ರಿ: ವಿದೇಶಗಳಲ್ಲಿ (ಅಮೆರಿಕ, ಲಂಡನ್ ಸೇರಿದಂತೆ) ಭಾರಿ ಸಾಧನೆ ಮಾಡಿರುವ 40 ರಿಂದ 50 ವರ್ಷ ವಯಸ್ಸಿನ ತಮಿಳು ತಂತ್ರಜ್ಞರು ಮತ್ತು ಬುದ್ಧಿಜೀವಿಗಳಿಗೆ ರಾಜಕೀಯಕ್ಕೆ ಬರಲು ಸರಿಯಾದ ವೇದಿಕೆ ಇಲ್ಲದಂತಾಗಿದೆ. ಅಂತಹ ಪ್ರತಿಭೆಗಳನ್ನು ರಾಜಕೀಯಕ್ಕೆ ತರಲು ಈ ಪಕ್ಷ ಮುಂದೆ ಬರಲಿದೆ.

ಮಾದಕ ದ್ರವ್ಯ ಮುಕ್ತ ತಮಿಳುನಾಡಿಗೆ ಜನಾಂದೋಲನ

ತಮಿಳುನಾಡಿನ ಯುವ ಪೀಳಿಗೆಯನ್ನು ಕಾಡುತ್ತಿರುವ ಮಾದಕ ದ್ರವ್ಯ (Drug Menace) ಪಿಡುಗಿನ ವಿರುದ್ಧ ಅಣ್ಣಾಮಲೈ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ನಮ್ಮ ಸಂಘಟನೆಯನ್ನು ಕೇವಲ ರಾಜಕೀಯಕ್ಕೆ ಸೀಮಿತಗೊಳಿಸದೆ, ರಾಜ್ಯದ ಪ್ರಮುಖ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಜನಾಂದೋಲನವನ್ನಾಗಿ ಮಾಡುತ್ತೇವೆ. ತಳಮಟ್ಟದಲ್ಲಿ ಮಾದಕ ದ್ರವ್ಯಗಳ ವಿರುದ್ಧ ಬೃಹತ್ ಸಾರ್ವಜನಿಕ ಚಳವಳಿಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಅಣ್ಣಾಮಲೈ ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net