ಬಿಜೆಪಿ ತೊರೆದ 24 ಗಂಟೆಯಲ್ಲೇ ಅಣ್ಣಾಮಲೈ ಹೊಸ ದಾಖಲೆ: ಕಮಲ ಬಿಟ್ಟ ಸಿಂಗಂ ಕೈಹಿಡಿದ 15 ಲಕ್ಷ ಜನ! ತಮಿಳುನಾಡಿನಲ್ಲಿ ಶುರುವಾಯ್ತು ‘ನಮ್ಮ ನಾಯಕರು’ ಅಲೆ! Annamalai New Movement

ಬಿಜೆಪಿ ತೊರೆದ 24 ಗಂಟೆಯಲ್ಲೇ ಅಣ್ಣಾಮಲೈ ಹೊಸ ದಾಖಲೆ: ಕಮಲ ಬಿಟ್ಟ ಸಿಂಗಂ ಕೈಹಿಡಿದ 15 ಲಕ್ಷ ಜನ! ತಮಿಳುನಾಡಿನಲ್ಲಿ ಶುರುವಾಯ್ತು ‘ನಮ್ಮ ನಾಯಕರು’ ಅಲೆ!
ಬಿಜೆಪಿ ತೊರೆದ 24 ಗಂಟೆಯಲ್ಲೇ ಅಣ್ಣಾಮಲೈ ಹೊಸ ದಾಖಲೆ: ಕಮಲ ಬಿಟ್ಟ ಸಿಂಗಂ ಕೈಹಿಡಿದ 15 ಲಕ್ಷ ಜನ! ತಮಿಳುನಾಡಿನಲ್ಲಿ ಶುರುವಾಯ್ತು ‘ನಮ್ಮ ನಾಯಕರು’ ಅಲೆ!
Published on
ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಬಿಜೆಪಿಗೆ ರಾಜೀನಾಮೆ ನೀಡಿದ ಕೇವಲ 24 ಗಂಟೆಗಳ ಅವಧಿಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ(Annamalai New Movement) ಅವರ ಹೊಸ ರಾಜಕೀಯ ಆಂದೋಲನಕ್ಕೆ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಜನರು ಕೈಜೋಡಿಸಿದ್ದಾರೆ. ಜೂನ್ 5 ರಂದು ಅಧಿಕೃತವಾಗಿ ಕಮಲದಿಂದ ಹೊರಬಂದ ಸಿಂಗಂ, ಶೀಘ್ರದಲ್ಲೇ ಸ್ವಂತ ರಾಜಕೀಯ ಹಾದಿ ತುಳಿಯುವುದಾಗಿ ಪ್ರಕಟಿಸಿದ್ದರು. ಇದೀಗ ಅವರ ಬೆಂಬಲಕ್ಕೆ ಜನಸಾಗರವೇ ಹರಿದುಬಂದಿದೆ.
ಕಳೆದ ಕೆಲವು ವಾರಗಳಿಂದಲೇ ಅಣ್ಣಾಮಲೈ ಹಾಗೂ ಬಿಜೆಪಿ ಹೈಕಮಾಂಡ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದವು. ಶುಕ್ರವಾರ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಿದ್ದು, ಪಕ್ಷದ ಮುಖಂಡ ನಿತಿನ್ ನಬಿನ್ ಅದನ್ನು ಅಂಗೀಕರಿಸಿದ್ದಾರೆ. ಇದರೊಂದಿಗೆ ಬಿಜೆಪಿಯಲ್ಲಿನ ಅಣ್ಣಾಮಲೈ ಅವರ ಆರು ವರ್ಷಗಳ ಪಯಣ ಅಧಿಕೃತವಾಗಿ ಮುಕ್ತಾಯಗೊಂಡಿದೆ.
ℹ️

18 ತಿಂಗಳ ಭಿನ್ನಾಭಿಪ್ರಾಯ: ರಾಜೀನಾಮೆ ಪತ್ರದಲ್ಲೇನಿದೆ?
ತಮ್ಮ ರಾಜೀನಾಮೆ ಪತ್ರದಲ್ಲಿ ಹೈಕಮಾಂಡ್ ವಿರುದ್ಧದ ಅಸಮಾಧಾನವನ್ನು ಅಣ್ಣಾಮಲೈ ಬಹಿರಂಗಪಡಿಸಿದ್ದಾರೆ. ಕಳೆದ 18 ತಿಂಗಳುಗಳಿಂದ ತಮಿಳುನಾಡಿನಲ್ಲಿ ಪಕ್ಷದ ಬೆಳವಣಿಗೆ ಮತ್ತು ಸಂಸ್ಕೃತಿ ಆಧಾರಿತ ರಾಜಕಾರಣದ ವಿಚಾರವಾಗಿ ಹೈಕಮಾಂಡ್ ಜೊತೆ ಹಲವು ಭಿನ್ನಾಭಿಪ್ರಾಯಗಳಿದ್ದವು. ಈ ಬಗ್ಗೆ ಉನ್ನತ ನಾಯಕರೊಂದಿಗೆ ಹಲವು ಬಾರಿ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಪಕ್ಷವನ್ನು ಮುನ್ನಡೆಸುವ ನನ್ನ ಆಲೋಚನೆಗಳಿಗೂ, ಕೇಂದ್ರ ನಾಯಕರ ದೃಷ್ಟಿಕೋನಕ್ಕೂ ಹೊಂದಾಣಿಕೆ ಆಗುತ್ತಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಹಾಗಾಗಿಯೇ ಯಾರಿಗೂ ಹೊರೆಯಾಗಬಾರದು ಎಂದು ಪಕ್ಷ ತೊರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
2020ರಲ್ಲಿ ನಾಗರಿಕ ಸೇವೆಗೆ (ಐಪಿಎಸ್) ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಅಣ್ಣಾಮಲೈ, ಕೇವಲ 37ನೇ ವಯಸ್ಸಿಗೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕಗೊಂಡು ಇಡೀ ದೇಶದ ಗಮನ ಸೆಳೆದಿದ್ದರು.

ಸಾಮಾನ್ಯ ಜನರ ‘ನಮ್ಮ ನಾಯಕರು’ ಆಂದೋಲನ

ತಮ್ಮ ಮುಂದಿನ ರಾಜಕೀಯ ನಡೆ ಸ್ವಾರ್ಥಕ್ಕಾಗಿ ಅಲ್ಲ, ಬದಲಿಗೆ ಯುವಕರು ಮತ್ತು ಸಾಮಾನ್ಯ ಜನರಿಗಾಗಿ ಎಂದು ಅಣ್ಣಾಮಲೈ ಘೋಷಿಸಿದ್ದಾರೆ. ರಾಜಕೀಯವನ್ನು ಶ್ರೀಮಂತರ ಮತ್ತು ವಂಶಪಾರಂಪರ್ಯ ರಾಜಕಾರಣಿಗಳ ಹಿಡಿತದಿಂದ ಮುಕ್ತಗೊಳಿಸುವುದೇ ನನ್ನ ಗುರಿ ಎಂದಿದ್ದಾರೆ. ಸಾಮಾನ್ಯ ಮನುಷ್ಯ ರಾಜಕೀಯಕ್ಕೆ ಬರುವುದು ದೊಡ್ಡ ಸವಾಲು. ನಾವು ಖಾಯಂ ಶಾಸಕರು ಮತ್ತು ಸಂಸದರ ಸಂಸ್ಕೃತಿಯನ್ನು ಕೊನೆಗಾಣಿಸಿ, ರಾಜಕೀಯವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಲಿದ್ದೇವೆ ಎಂದು ಕರೆ ನೀಡಿದ್ದಾರೆ.
ಅಣ್ಣಾಮಲೈ ಆರಂಭಿಸಿರುವ ಹೊಸ ಆಂದೋಲನಕ್ಕೆ ವೀ ದಿ ಲೀಡರ್ಸ್ (We The Leaders - ನಮ್ಮ ನಾಯಕರು) ಎಂದು ಹೆಸರಿಡಲಾಗಿದ್ದು, ಅದರ ವೆಬ್‌ಸೈಟ್‌ಗೆ ಕೇವಲ ಒಂದೇ ದಿನದಲ್ಲಿ 15 ಲಕ್ಷಕ್ಕೂ ಹೆಚ್ಚು ಸಕ್ರಿಯ ಸದಸ್ಯರು ನೋಂದಾಯಿಸಿಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ, ಪರಿಸರ ಮತ್ತು ಯುವ ನಾಯಕತ್ವದ ಮೂಲಕ ತಳಮಟ್ಟದಲ್ಲಿ ಬದಲಾವಣೆ ತರಲು ಈ ವೇದಿಕೆ ಸಿದ್ಧವಾಗಿದೆ.

ಮುಂದಿನ ಟಾರ್ಗೆಟ್ ಲೋಕಸಭೆ ಚುನಾವಣೆ!

ಈ ಹೊಸ ಆಂದೋಲನವು ಕೇವಲ ಜನಸೇವೆಗಷ್ಟೇ ಸೀಮಿತವಾಗಿರದೆ, ತಮಿಳುನಾಡಿನ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಎನ್ನುವುದು ಕೇವಲ ಆಯ್ದ ಕೆಲವರ ಸ್ವತ್ತಲ್ಲ, ಸಾಮಾನ್ಯ ಜನರಿಗೂ ಇದರಲ್ಲಿ ಹಕ್ಕಿದೆ ಎಂಬ ಬದಲಾವಣೆಯನ್ನು ತರಲು ನಾನು ಬಂದಿದ್ದೇನೆ. ಭವಿಷ್ಯದ ಹೊಸ ನಾಯಕರನ್ನು ಸೃಷ್ಟಿಸಲು ಈ ವೇದಿಕೆ ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೊಸ ಪ್ರಾದೇಶಿಕ ಶಕ್ತಿಯ ಉದಯದಿಂದಾಗಿ ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಕುತೂಹಲ ಮನೆಮಾಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net