ಸುಮಾರು ₹14,853 ಕೋಟಿ ಮೊತ್ತದ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಸಮೂಹ ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಇದೇ ವೇಳೆ ಜಯ್ ಅನ್ಮೋಲ್ ಅವರು ಸಾರ್ವಜನಿಕ ವಲಯದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವಂಚನೆ ಎಸಗಿ ₹228 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಬಿಐ ದೂರಿತ್ತು. ವರದಿಗಳ ಪ್ರಕಾರ, ಜಯ್ ಅನ್ಮೋಲ್ ಅಂಬಾನಿ ನಿರ್ದೇಶಕರಾಗಿದ್ದ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್‌ಎಚ್‌ಎಫ್‌ಎಲ್) ಭಾರಿ ಮೊತ್ತದ ಸಾಲ ಪಡೆದಿದ್ದರೂ ಅದನ್ನು ಮರುಪಾವತಿಸಿರಲಿಲ್ಲ. ವಿಶೇಷ ಲೆಕ್ಕ ಪರಿಶೋಧನೆ ವೇಳೆ ಹಣ ದುರುಪಯೋಗವಾಗಿರುವುದು ಕಂಡುಬಂದಿತ್ತು. ಪರಿಣಾಮ ಅವರ ಖಾತೆ ಅನುತ್ಪಾದಕ ಆಸ್ತಿ ಎಂದು ಘೋಷಿತವಾಯಿತು ಎಂದು ಸಿಬಿಐ ವಿವರಿಸಿತ್ತು. ತನಗೆ ₹228 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ಆರೋಪಿಸಿದ್ದ ಯೂನಿಯನ್ ಬ್ಯಾಂಕ್ ಅನಿಲ್ ಅವರ ಖಾತೆಯನ್ನು ವಂಚನೆ ಖಾತೆ ಎಂದು ವರ್ಗೀಕರಿಸಿತ್ತು. ನಂತರ, ಸಿಬಿಐ ಅನ್ಮೋಲ್ ಅಂಬಾನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು.(ಏಜನ್ಸೀಸ್).