ನೂರಾರು ಜೇನುನೊಣ ದಾಳಿ ಮಾಡ್ತಿದ್ರೂ ಸ್ವಲ್ಪವೂ ಹಿಂಜರಿಯದೇ 20 ಮಕ್ಕಳನ್ನು ರಕ್ಷಿಸಿ ಪ್ರಾಣ ಬಿಟ್ಟ ಮಹಿಳೆ! Anganwadi Cook

ಮಕ್ಕಳಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಮಹಿಳೆಯನ್ನು ಕಾಂಚನ್​ ಬಾಯಿ ಮೇಘವಾಲ್
ಮಕ್ಕಳಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಮಹಿಳೆಯನ್ನು ಕಾಂಚನ್​ ಬಾಯಿ ಮೇಘವಾಲ್
Published on

ಪ್ರಮುಖ ಮುಖ್ಯಾಂಶಗಳು

  • ಜೇನುನೊಣಗಳ ದಾಳಿಯಿಂದ 20 ಮಕ್ಕಳನ್ನು ರಕ್ಷಣೆ ಮಾಡಿದ ಅಂಗನವಾಡಿಯ ಅಡುಗೆ ಸಹಾಯಕಿ
  • ಮಕ್ಕಳನ್ನು ರಕ್ಷಿಸಿದ ಜೇನುನೊಣಗಳ ದಾಳಿಯಿಂದಲೇ ಪ್ರಾಣ ತ್ಯಾಗ ಮಾಡಿದ ಕಾಂಚನ್​ ಬಾಯಿ
  • ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯ ರಣಪುರ ಗ್ರಾಮದಲ್ಲಿ ನಡೆದ ಕರುಣಾಜನಕ ಘಟನೆ
ಭೋಪಾಲ್​: ಜೇನುನೊಣಗಳ ದಾಳಿಯಿಂದ ಸುಮಾರು 20 ಮಕ್ಕಳನ್ನು ರಕ್ಷಣೆ ಮಾಡಿದ ಅಂಗನವಾಡಿಯ ಅಡುಗೆ ಸಹಾಯಕಿ ( Anganwadi Cook  ) , ಅದೇ ಜೇಣುನೊಣಗಳ ನಿರಂತರ ದಾಳಿಗೆ ಪ್ರಾಣ ಕಳೆದುಕೊಂಡಿರುವ ಕರುಣಾಜನಕ ಘಟನೆ ಮಧ್ಯಪ್ರದೇಶದ ನೀಮುಚ್​ ಜಿಲ್ಲೆಯ ರಣಪುರ ಗ್ರಾಮದಲ್ಲಿ ನಡೆದಿದೆ.
ಮಕ್ಕಳಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಮಹಿಳೆಯನ್ನು ಕಾಂಚನ್​ ಬಾಯಿ ಮೇಘವಾಲ್ ಎಂದು ಗುರುತಿಸಲಾಗಿದೆ. ಈ ಘಟನೆ ಮದವಾಡ ಪಂಚಾಯಿತಿ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. 

ಅಷ್ಟಕ್ಕೂ ನಡೆದಿದ್ದೇನು?

ಸುಮಾರು 20 ಮಕ್ಕಳು ಅಂಗನವಾಡಿಯ ಆವರಣದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಮಕ್ಕಳ ಮೇಲೆ ಏಕಾಏಕಿ ಜೇನುನೊಣಗಳ ಹಿಂಡು ದಾಳಿ ಮಾಡಿತು. ಆ ಕ್ಷಣದಲ್ಲಿ, ಅದನ್ನು ಗಮನಿಸಿದ ಅಡುಗೆ ಸಹಾಯಕಿ ಕಾಂಚನ್ ಬಾಯಿ, ತನ್ನ ಸುರಕ್ಷತೆಯ ಬಗ್ಗೆ ಕೊಂಚವೂ ಯೋಚನೆ ಮಾಡದೇ, ಹತ್ತಿರದಲ್ಲೇ ಬಿದ್ದಿದ್ದ ಟಾರ್ಪಲ್‌ಗಳು ಮತ್ತು ಚಾಪೆಗಳನ್ನು ಎತ್ತಿಕೊಂಡರು. ಬಳಿಕ, ಮಕ್ಕಳನ್ನು ಅದರಲ್ಲಿ ಸುತ್ತಿ, ತನ್ನ ದೇಹದಿಂದ ರಕ್ಷಿಸಿಕೊಂಡು, ಅಂಗನವಾಡಿ ಕೇಂದ್ರದೊಳಗೆ ನುಗ್ಗಿದರು. ಈ ವೇಳೆ ಜೇನುನೊಣಗಳು ಮತ್ತು ಮಕ್ಕಳ ನಡುವೆ ಕಾಂಚನ್​ ಅವರು ಅಡ್ಡಗೋಡೆಯಾಗಿ ನಿಂತರು. ಈ ವೇಳೆ ಜೇನುನೋಣಗಳು ಆಕೆಯ ಮೇಲೆಯೇ ಎರಗಿದವು.
ನೂರಾರು ಜೇನುನೊಣಗಳು ಕಾಂಚನ್​ ಬಾಯಿ ಮೇಲೆ ದಾಳಿ ಮಾಡಿ, ಮನಸೋ ಇಚ್ಛೆ ಕಚ್ಚಿದವು. ಆದರೆ, ಮಕ್ಕಳು ಸುರಕ್ಷಿತವಾಗುವವರೆಗೂ ಆಕೆ ಹಿಂದೆ ಸರಿಯಲಿಲ್ಲ. ನೋವಿನಿಂದ ನರಳಿದರು ಕೂಡ ಮಕ್ಕಳಿಗಾಗಿ ಅಲ್ಲಿಂದ ಅಲುಗಾಡಲೇ ಇಲ್ಲ. ಗ್ರಾಮಸ್ಥರು ಸಹಾಯಕ್ಕೆ ಧಾವಿಸುವ ಹೊತ್ತಿಗೆ ಕಾಂಚನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಕಾನ್‌ಸ್ಟೆಬಲ್ ಕಲುನಾಥ್ ಮತ್ತು ಪೈಲಟ್ ರಾಜೇಶ್ ರಾಥೋಡ್ ಎಂಬುವರು ಕಾಂಚನ್​ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಆಕೆ ಆಸ್ಪತ್ರೆಗೆ ಬರುವಷ್ಟರಲ್ಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಣೆ ಮಾಡಿದರು. ಆಕೆಯ ದೇಹದಲ್ಲಿ ಲೆಕ್ಕವಿಲ್ಲದಷ್ಟು ಜೇನುನೊಣಗಳ ಕೊಂಡಿಗಳಿದ್ದವು. ಈ ಒಂದು ಘಟನೆ ಆಕೆಯ ಧೈರ್ಯ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದೆ.
ಅಂದಹಾಗೆ, ಕಾಂಚನ್ ಬಾಯಿ ಕೇವಲ ಅಂಗನವಾಡಿಯ ಅಡುಗೆ ಸಹಾಯಕಿ ಆಗಿರಲಿಲ್ಲ. ಅದಕ್ಕಿಂತ ಹೆಚ್ಚಿನ ಒಡೆನಾಟವನ್ನು ಆ ಊರಿನಲ್ಲಿ ಹೊಂದಿದ್ದರು. ಹಳ್ಳಿಯ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸುತ್ತಿದ್ದರು. ಅಲ್ಲದೆ, ಜೈ ಮಾತಾ ದಿ ಸ್ವ-ಸಹಾಯ ಗುಂಪಿನ ಅಧ್ಯಕ್ಷರಾಗಿದ್ದರು ಮತ್ತು ಅವರ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದರು. ಅವರ ಪತಿ ಶಿವಲಾಲ್ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಕಾಂಚನ್​ ಅವರು ಓರ್ವ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಮಂಗಳವಾರ ಮರಣೋತ್ತರ ಪರೀಕ್ಷೆಯ ಬಳಿಕ ಆಕೆಯ ಮೃತದೇಹವನ್ನು ರಣಪುರ ಗ್ರಾಮಕ್ಕೆ ತರಲಾಯಿತು. ಈ ವೇಳೆ ಗ್ರಾಮಸ್ಥರು ಮೌನವಾಗಿ ನಿಂತು, ಸೆಲ್ಯೂಟ್​ ಹೊಡೆಯುವ ಮೂಲಕ ಕಾಂಚನ್​ ಅವರಿಗೆ ಗೌರವ ನಮನ ಸಲ್ಲಿಸಿದರು. 
ಇನ್ನು ಹಳ್ಳಿಯಲ್ಲಿ ಜೇನುನೋಣಗಳ ದಾಳಿಯ ಭಯ ಇನ್ನೂ ಆವರಿಸಿದೆ. ಏಕೆಂದರೆ, ಅಂಗನವಾಡಿ ಕೇಂದ್ರದ ಬಳಿಯ ಮರಕ್ಕೆ ದೊಡ್ಡ ಜೇನುಗೂಡೊಂದು ನೇತಾಡುತ್ತಿದೆ. ಅಲ್ಲದೆ, ಆ ಜಾಗ ಗ್ರಾಮದ ಏಕೈಕ ಕೈಪಂಪ್ ಇರುವ ಸ್ಥಳ. ಹೀಗಾಗಿ, ಮತ್ತೊಂದು ದಾಳಿಯ ಭೀತಿಯಿಂದ ನಿವಾಸಿಗಳು ನೀರು ತರುವುದನ್ನೇ ನಿಲ್ಲಿಸಿದ್ದಾರೆ. ಜೇನುಗೂಡನ್ನು ತಕ್ಷಣ ತೆಗೆದುಹಾಕಬೇಕು ಮತ್ತು ಕಾಂಚನ್ ಬಾಯಿ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net