ಆಸ್ಟ್ರೇಲಿಯಾ ಹಾದಿಯಲ್ಲಿ ಆಂಧ್ರ ಪ್ರದೇಶ: ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿರ್ಬಂಧ

Andhra Pradesh on the path to Australia
Andhra Pradesh on the path to Australia
Published on
ಅಮರಾವತಿ: ಕೆಲವು ಸಾಮಾಜಿಕ ಮಾಧ್ಯಮಗಳು 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಕೈಗೆಟುಕದಂತೆ ಮಾಡುವ ಮಾಗೋಪಾಯಗಳನ್ನು ಪರಿಶೀಲಿಸಲು ಆಂಧ್ರ ಪ್ರದೇಶ ಸರ್ಕಾರ ಶುಕ್ರವಾರ ಸಮಿತಿಯೊಂದನ್ನು ರಚಿಸಿದೆ. ಅದರಲ್ಲಿ ಸಚಿವರ ಒಂದು ಗುಂಪು ಕೂಡ ಇದೆ.
ಈ ವಿಚಾರದಲ್ಲಿ ಆಸ್ಟ್ರೇಲಿಯಾ ಸರ್ಕಾರ ರೂಪಿಸಿರುವ ನಿಯಮಗಳಿಂದ ಪ್ರೇರಿತಗೊಂಡು ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಲಭ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಆಂಧ್ರ ಸರ್ಕಾರ ಮುಂದಾಗಿದೆ. ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಈ ಸಮಿತಿಯ ಮುಖ್ಯಸ್ಥರಾಗಿರುತ್ತಾರೆಂದು ಗೃಹ ಸಚಿವೆ ವಂಗಲಪುಡಿ ಅನಿತಾ ತಿಳಿಸಿದ್ದಾರೆ. ನಾನಾ ರಾಜ್ಯಗಳು ಹಾಗೂ ದೇಶಗಳು ಅನುಸರಿಸುತ್ತಿರುವ ಮಾದರಿಗಳನ್ನು ಅಧ್ಯಯನ ನಡೆಸಲಿರುವ ಸಮಿತಿಯಲ್ಲಿ ತಾವು ಹಾಗೂ ಆರೋಗ್ಯ ಸಚಿವ ಸತ್ಯ ಕುಮಾರ್ ಕೂಡ ಇರಲಿದ್ದಾರೆ ಎಂದು ಅನಿತಾ ಹೇಳಿದರು. ಆ ಪೈಕಿ ಉತ್ತಮ ಮಾದರಿಯನ್ನು ಅಳವಡಿಸಿ ಕೊಳ್ಳಲಾಗುವುದೆಂದು ತಿಳಿಸಿದರು.
ಮಾದರಿ ಏನು?: ಸಾಮಾಜಿಕ ಮಾಧ್ಯಮ ಬಳಕೆಯ ಆರಂಭಕ್ಕೆ ಕನಿಷ್ಠ ವಯಸ್ಸನ್ನು 16 ವರ್ಷಕ್ಕೆ ನಿಗದಿಪಡಿಸುವ ಕಾನೂನನ್ನು ಆಸ್ಟ್ರೇಲಿಯಾ ಸರ್ಕಾರ ಇತ್ತೀಚೆಗೆ ರೂಪಿಸಿತ್ತು. ಆ ಕಾನೂನಿನ ಪ್ರಕಾರ ನಿಯಮವನ್ನು ಪಾಲಿಸುವುದು ಆಯಾ ವೇದಿಕೆಗಳ ಹೊಣೆಯಾಗಿದೆ. ನಿಯಮ ಉಲ್ಲಂಘನೆಗೆ ಮಕ್ಕಳು ಅಥವಾ ಪಾಲಕರಿಗೆ ಯಾವುದೇ ಶಿಕ್ಷೆ ವಿಧಿಸಲಾಗುವುದಿಲ್ಲ. ಆಸ್ಟ್ರೇಲಿಯಾ ಮಾತ್ರವಲ್ಲದೆ ದೇಶಾದ್ಯಂತ ಹಾಗೂ ಜಗತ್ತಿನ ಹಲವು ಭಾಗಗಳಲ್ಲಿ ಅನುಷ್ಠಾನ ಗೊಳಿಸಲಾಗಿರುವ ವಿವಿಧ ಮಾದರಿಗಳ ಅಧ್ಯಯನ ನಡೆಸಲಾಗುತ್ತಿದೆ ಎಂದು ಅನಿತಾ ತಿಳಿಸಿದರು.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಜತೆ ರ್ಚಚಿಸಿ ಒಂದು ತಿಂಗಳೊಳಗೆ ಸಮಿತಿಯ ಶಿಫಾರಸುಗಳನ್ನು ಸಲ್ಲಿಸಲಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net