ಒಂದು ಅಪ್ರಕಟಿತ ಕೃತಿ, ಹಲವು ಪ್ರಶ್ನೆಗಳು, ಕೊನೆ ಹೇಗೆ?

Rahul gandhi with Naravane book
Rahul gandhi with Naravane book
Published on
ಲಭ್ಯ ಮಾಹಿತಿಗಳ ಪ್ರಕಾರ ಆ ಅನುಮತಿ ಇನ್ನೂ ದೊರೆತಿಲ್ಲ. ಹೀಗಾಗಿ ಪೆಂಗ್ವಿನ್ ಪ್ರಕಾಶನ ಸಂಸ್ಥೆ ಅದನ್ನು ಪ್ರಕಟಿಸಿ ಮಾರಾಟಕ್ಕೆ ಬಿಡುಗಡೆ ಮಾಡುವಂತಿಲ್ಲ. ಇದೇನೂ ಹೊಸದಲ್ಲ. ಫೀಲ್ಡ್ ಮಾರ್ಷಲ್​ಗಳಾದ ಕಾರಿಯಪ್ಪ ಮತ್ತು ಮಾಣೆಕ್ ಶಾ ಸೇರಿದಂತೆ ಹಲವರು ಮಾಜಿ ರಕ್ಷಣಾ ಮುಖ್ಯಸ್ಥರ ಆತ್ಮಚರಿತ್ರೆಗಳು ಇನ್ನೂ ಬೆಳಕು ಕಂಡಿಲ್ಲ. ಯುಪಿಎ ಆಡಳಿತಾವಧಿಯಲ್ಲಿ ಅನುಮತಿಯಿಲ್ಲದೇ ತಮ್ಮ ಆತ್ಮಚರಿತ್ರೆ ಪ್ರಕಟಿಸಿದ ಮೇಜರ್ ಜನರಲ್ ಒಬ್ಬರು ಆ ಸಂಬಂಧದಲ್ಲಿ ಇಂದಿಗೂ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ.
1971ರ ಸಮರವೀರ ಫೀಲ್ಡ್ ಮಾರ್ಷಲ್ ಮಾಣೆಕ್ ಶಾ ಅವರ ಬಗ್ಗೆ ಹೇಳುವುದಾದರೆ, ತಮ್ಮ ಅಧಿಕಾರಾವಧಿಯಲ್ಲಿನ ಕೆಲವು ಪ್ರಕರಣಗಳ ಕುರಿತಾದ ಗೋಪ್ಯ ಮಾಹಿತಿಗಳನ್ನು ಬಹಿರಂಗಪಡಿಸಿದರೆಂಬ ಕಾರಣಕ್ಕೆ ಅವರ ಪಿಂಚಣಿಯನ್ನು ತಡೆ ಹಿಡಿಯಲಾಗಿತ್ತು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಅವರು ಕಿರಿಯ ಸೇನಾಧಿಕಾರಿಯೊಬ್ಬರ ಧನಸಹಾಯದಿಂದ ಬದುಕು ನಿರ್ವಹಿಸಿಕೊಳ್ಳುತ್ತಿದ್ದರು ಎಂದು ಸುದ್ದಿಯಿದೆ. ನಾಲ್ಕೂವರೆ ದಶಕಗಳ ಹಿಂದೆ ಅನಾರೋಗ್ಯಪೀಡಿತರಾಗಿ ಆಸ್ಪತ್ರೆಯಲ್ಲಿದ್ದ ಅವರು, ‘ನಮ್ಮ ದೇಶದಲ್ಲಿ ವಾಟರ್​ಗೇಟ್ ಪ್ರಕರಣದಂತಹ ಪ್ರಕರಣಗಳು ಘಟಿಸಿರು ವುದು ನನಗೆ ಗೊತ್ತಿದೆ. ಆದರೆ ಅವುಗಳನ್ನು ನಾನು ಬಹಿರಂಗಪಡಿಸಲಾಗದು.
ನನ್ನ ಮೃತ್ಯುವಿನ ನಂತರ ನನ್ನ ಮಗಳು ಅವುಗಳನ್ನು ಬಹಿರಂಗಪಡಿಸುತ್ತಾಳೆ’ ಎಂದು ಪತ್ರಕರ್ತರಿಗೆ ಹೇಳಿದ್ದಾಗಿ ವರದಿಯಾಗಿದ್ದುದು ನನಗೆ ನೆನಪಿದೆ. ಆದರೆ ಅಂತಹದೇನೂ ಬಹಿರಂಗಗೊಂಡ ವರದಿಯಿಲ್ಲ. ಬಹುಶಃ ಮಾಣೆಕ್ ಶಾರಿಗೆ ಅನ್ವಯವಾದ ನಿಯಮ ಅವರ ಮಗಳಿಗೂ ಅನ್ವಯವಾಗಿರಬಹುದೇನೋ.
ಈ ಹಿನ್ನೆಲೆಯಲ್ಲಿ ನರ್ವಾಣೆಯವರ ಕೃತಿಯೂ ರಕ್ಷಣಾ ಇಲಾಖೆಯಿಂದ ಪರಿಶೀಲನೆಗೊಳ್ಳುವುದು ಸಹಜವೇ. ಅಂತಹ ಅನುಮತಿ ಖಚಿತವಾಗಿ ಮತ್ತು ಶೀಘ್ರವಾಗಿ ದೊರಕುತ್ತದೆಂಬ ‘ನಂಬಿಕೆ’ಯಿಂದ ಪ್ರಕಾಶಕರು ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಎಂಬ ಆ ಕೃತಿಗಾಗಿ ಆಸಕ್ತರು ಅಮೆಝಾನ್​ನಲ್ಲಿ ಮುಂಗಡ ಬೇಡಿಕೆ ಸಲ್ಲಿಸಬಹುದಾದ ಅವಕಾಶವನ್ನು 2023ರ ಡಿಸೆಂಬರ್​ನಲ್ಲಿ ನೀಡಿದ್ದರು. ಆದರೆ ಕೃತಿಯ ಪ್ರಕಟಣೆಗೆ ಇಲಾಖೆಯ ಅನುಮತಿ ಸಿಗದ ಕಾರಣ ಆ ಅವಕಾಶವನ್ನು ಹಿಂತೆಗೆದುಕೊಳ್ಳಲಾಯಿತೆಂದು ಸುದ್ದಿ. ಆದರೆ ಆ ಕೃತಿ ಪ್ರಕಟವಾಗಿದೆ, ಇದೇ ಅದು ಎಂದು ರಾಹುಲ್ ಗಾಂಧಿ ಪುಸ್ತಕವೊಂದನ್ನು ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಪ್ರದರ್ಶಿಸಿದ್ದಲ್ಲದೇ, ಪ್ರಧಾನಮಂತ್ರಿ ಮೋದಿಯವರು ಲೋಕಸಭೆಗೆ ಬಂದರೆ ಅವರಿಗದನ್ನು ಕೊಡುವುದಾಗಿಯೂ ಹೇಳಿದರು. ಆದರೆ ಆ ಕೃತಿ ಪ್ರಕಟವಾಗಿಲ್ಲ ಎಂದು ಪ್ರಕಾಶಕರು ಮತ್ತು ಲೇಖಕರು ನಂತರ ಹೇಳಿಕೆ ನೀಡಿದರು. ಹಾಗಿದ್ದರೆ ರಾಹುಲ್ ಪ್ರದರ್ಶಿಸಿದ ಆ ಕೃತಿ ಯಾವುದು?
ಈ ಕುರಿತಾಗಿ ಡೆಲ್ಲಿ ಪೊಲೀಸ್ ತನಿಖೆ ನಡೆಸುತ್ತಿದೆ. ಅದರ ಫಲಿತಾಂಶಕ್ಕಾಗಿ ಜನ ಕಾಯುತ್ತಿದ್ದಾರೆ. ಅದು ಬರುವವರೆಗೆ, ರಕ್ಷಣಾ ಇಲಾಖೆ ಆಕ್ಷೇಪವೆತ್ತಬಹುದಾದ ಯಾವ ವಿಷಯಗಳು ಆ ಕೃತಿಯಲ್ಲಿವೆ ಎನ್ನುವುದನ್ನು ಸಾರ್ವಜನಿಕವಾಗಿ ಲಭ್ಯವಿರುವ ವಿವರಗಳಾಧಾರದಿಂದಲೇ ಪರಿಶೀಲಿಸಲು ಪ್ರಯತ್ನಿಸೋಣ.
ಗಲ್ವಾನ್ ಘರ್ಷಣೆಯಾದ ಎರಡೂವರೆ ತಿಂಗಳ ತರುವಾಯ ಆ. 30-31ರ ರಾತ್ರಿ ಕೈಲಾಶ್ ಶ್ರೇಣಿಯಲ್ಲಿ 4 ಚೀನಿ ಟ್ಯಾಂಕ್​ಗಳು ವಾಸ್ತವ ಹತೋಟಿಯನ್ನು ಸಮೀಪಿಸುತ್ತಿ ರುವ ಬಗ್ಗೆ ಮತ್ತು ಆ ಕುರಿತಾಗಿ ಭಾರತೀಯ ಸೇನೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವ ಬಗ್ಗೆ ಅಲ್ಲಿನ ಪ್ರಾದೇಶಿಕ ಸೇನಾಧಿಕಾರಿಯವರಿಂದ ಆರಂಭವಾಗಿ ಜ. ನರ್ವಾಣೆಯವರ ಮೂಲಕ ರಕ್ಷಣಾ ಮಂತ್ರಿ ಮತ್ತು ಪ್ರಧಾನಿ ನಡುವೆ ವಿನಿಮಯವಾದ ಮಾತುಗಳನ್ನು ಲೇಖಕ ಸುಶಾಂತ್ ಸಿಂಗ್, ಕಾರವಾನ್ ಪತ್ರಿಕೆ ಮತ್ತು ರಾಹುಲ್ ಗಾಂಧಿ ಹೊರಗೆಡಹಿದ್ದಾರೆ.
ಇವರೆಲ್ಲರ ಮುಖ್ಯ ಆಕ್ಷೇಪಣೆ ಯಿರುವುದು ಚೀನಿ ಟ್ಯಾಂಕ್​ಗಳು ವಾಸ್ತವ ಹತೋಟಿ ರೇಖೆ ಯತ್ತ ಮುಂದಡಿಯಿಡುತ್ತಿರುವ ಆತಂಕಕಾರಿ ಸನ್ನಿವೇಶದಲ್ಲಿ ಉನ್ನತ ರಾಜಕೀಯ ನಾಯಕತ್ವದಿಂದ ಮಾರ್ಗದರ್ಶನ ತ್ವರಿತ ವಾಗಿ ಸೇನೆಗೆ ಬರಲಿಲ್ಲ, ಬಂದರೂ ಅದು ಸೂಕ್ತವಾಗಿರಲಿಲ್ಲ ಎನ್ನುವುದು. ಪ್ರಧಾನಿ ಸಲಹೆ ಮೇರೆಗೆ ನಿಮಗೆ ಉಚಿತವೆನಿಸಿದ್ದನ್ನು ಮಾಡಿ ಎಂದು ರಕ್ಷಣಾ ಮಂತ್ರಿಗಳು ಸೇನಾ ಮುಖ್ಯಸ್ಥರಿಗೆ ಹೇಳಿದ್ದು ಸರಿಯಲ್ಲ ಎನ್ನುವುದು ರಾಹುಲ್ ಅಭಿಮತ. ಇದನ್ನೊಮ್ಮೆ ವಿಶ್ಲೇಷಿಸೋಣ.
ಮೊದಲಿಗೆ ಓದುಗರಿಗೆ ಒಂದು ವಿವರಣೆ- ಈ ಪ್ರಕರಣದಲ್ಲಿ ಉಲ್ಲೇಖಿತವಾಗಿರುವ ಕೈಲಾಶ್ ಶ್ರೇಣಿ ಅಂದರೆ ಶಿವನ ಆವಾಸ ಸ್ಥಾನ ಎಂದು ನಂಬಲಾಗುವ ಕೈಲಾಶ ಶಿಖರ ಅಲ್ಲ. ಇದು ಪೂರ್ವ ಲದಾಖ್​ನ ಪಂಗೊಂಗ್ ತ್ಸೊ ಸರೋವರದ ದಕ್ಷಿಣದಲ್ಲಿರುವ ಪರ್ವತ ಸಾಲು. ವರದಿಗಳ ಪ್ರಕಾರ ಗಲ್ವಾನ್ ಘರ್ಷಣೆಯ ನಂತರದ ದಿನಗಳಲ್ಲಿ ಭಾರತೀಯ ಸೇನೆ ಇಲ್ಲಿ ತನ್ನ ಹಾಜರಿಯನ್ನು ವೃದ್ಧಿಸಿಕೊಂಡಿತ್ತು. ಅದರಿಂದಾಗಿ ತನ್ನ ಮೋಲ್ದೋ ಗಡಿ ಠಿಕಾಣೆಗೆ ಅಪಾಯವಾಗುತ್ತದೆಂದು ಹೆದರಿದ ಚೀನೀ ಸೇನೆ ಭಾರತೀಯ ಸೇನೆಯನ್ನು ಅಲ್ಲಿಂದ ಕಾಲ್ತೆಗೆಸಲು ಟ್ಯಾಂಕ್​ಗಳನ್ನು ಕಳುಹಿಸಿ ಹೆದರಿಸಲು ನೋಡಿತು.
ಕೈಲಾಶ್ ಶ್ರೇಣಿ 6000 ಮೀಟರ್​ಗಳಿಗೂ ಉನ್ನತವಾದುದು. ಅಂದರೆ ಎವರೆಸ್ಟ್ ಶಿಖರದ ಮುಕ್ಕಾಲರಷ್ಟು ಎತ್ತರ! ಆ ಭೌಗೋಳಿಕ ಸ್ಥಿತಿಯಲ್ಲಿ ಅಲ್ಲಿ ಟ್ಯಾಂಕ್​ಗಳನ್ನು ಏರಿಸಿ ತರುವುದು ಸಾಧ್ಯವಿಲ್ಲ. ಒಂದು ವೇಳೆ ಚೀನೀಯರು ಅಂತಹ ಅಸಾಧ್ಯ ಕೆಲಸವನ್ನು ಸಾಧಿಸಿದರೂ, ಕೇವಲ ನಾಲ್ಕು ಟ್ಯಾಂಕ್​ಗಳಿಂದ ಅವರು ಅಗತ್ಯ ಪರಿಕರಗಳನ್ನು ಹೊಂದಿದ್ದ ಭಾರತೀಯ ಸೇನೆಯನ್ನು ಎದುರಿಸಿ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಗಲ್ವಾನ್​ನಲ್ಲಿ ಹೊಡೆತ ತಿಂದ ಹಿನ್ನೆಲೆಯಲ್ಲಿ ಅಂತಹ ಆತ್ಮಹತ್ಯೀಯ ಕೆಲಸಕ್ಕೆ ಅವರು ಮುಂದಾದದ್ದು ಪ್ರಶ್ನಾರ್ಹ. ಇರಲಿ, ಆ ಸಮಯದ ಉಪಗ್ರಹ ಚಿತ್ರಗಳನ್ನು ತೆಗೆದು ಪರಿಶೀಲಿಸಿದರೆ ಸತ್ಯ ತಿಳಿಯಬಹುದು.
ನಾಲ್ಕು ಟ್ಯಾಂಕ್​ಗಳಿಂದ ಚೀನೀಯರು ನಮ್ಮ ಸೈನಿಕರನ್ನು ಹೆದರಿಸಲು ನೋಡಿದರು ಎನ್ನುವುದೇ ನಿಜವಾದರೆ ಸೂಕ್ತ ಪ್ರತಿಕ್ರಿಯೆಗಾಗಿ ಜ. ನರ್ವಾಣೆ ರಕ್ಷಣಾ ಸಚಿವರು ಮತ್ತು ಪ್ರಧಾನಿಯ ಮಾರ್ಗದರ್ಶನ ಬಯಸಿದ್ದರಲ್ಲಿ ಅರ್ಥವಿದೆ. ದೇವೇಗೌಡರು ಮತ್ತು ಮನಮೋಹನ್​ಸಿಂಗ್​ರ ಅವಧಿಯಲ್ಲಿ ಭಾರತ-ಚೀನಾ ಮಾಡಿಕೊಂಡ ಒಪ್ಪಂದಗಳ ಪ್ರಕಾರ ವಾಸ್ತವ ಹತೋಟಿ ರೇಖೆಯಿಂದ ಆಚೀಚಿನ 2 ಕಿಮೀ ಪ್ರದೇಶದಲ್ಲಿ ಉಭಯ ಸೇನೆಗಳು ಶಸ್ತ್ರಾಸ್ತ್ರ ಬಳಸುವಂತಿಲ್ಲ. ಹೀಗಾಗಿಯೇ ಜೂನ್ 15, 2020ರ ರಾತ್ರಿ ಗಲ್ವಾನ್​ನಲ್ಲಿ ಭಾರತೀಯ ಸೈನಿಕರ ಮೇಲೆ ದಾಳಿ ಎಸಗಿದ್ದು ಕಲ್ಲು, ಲೋಹದ ಮುಳ್ಳು ಹೊಂದಿದ ದೊಣ್ಣೆಗಳ ಮೂಲಕ. ಹೀಗಾಗಿ ಕೈಲಾಶ್ ಶ್ರೇಣಿಯಲ್ಲಿ ಚೀನೀಯರು ಟ್ಯಾಂಕ್ ತಂದಾಗ ಅವರನ್ನು ಶಸ್ತ್ರಾಸ್ತ್ರಗಳ ಮೂಲಕ ಎದುರಿಸಬೇಕೇ ಬೇಡವೇ ಎಂಬ ಸಂದಿಗ್ಧಕ್ಕೆ ನಮ್ಮ ಸೇನಾಧಿಕಾರಿಗಳು ಒಳಗಾದದ್ದು, ಆ ಕುರಿತಾಗಿ ಮಾರ್ಗದರ್ಶನ ಬಯಸಿದ್ದು ಸಹಜವೇ.
ಆದರೆ ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಹಿಂದಿನ ಪ್ರಧಾನಿಗಳು ಮಾಡಿಕೊಂಡ ಒಪ್ಪಂದಗಳಿಂದಾಗಿ ಗಲ್ವಾನ್​ನಲ್ಲಿ ನಮ್ಮ ಸೈನಿಕರು ಮೊದಲಿಗೆ ಸಾವುನೋವು ಅನುಭವಿಸುವಂತಾಯಿತು ಎಂದರಿತ ಪ್ರಧಾನಿ ಮೋದಿ ಇನ್ನು ಮುಂದೆ ನಮ್ಮ ಸೈನಿಕರು ಆ ಒಪ್ಪಂದಗಳಿಗೆ ಬದ್ಧರಾಗಿರುವ ಅಗತ್ಯವಿಲ್ಲ, ಸನ್ನಿವೇಶಕ್ಕೆ ಸೂಕ್ತವೆನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಅವರಿಗಿದೆ ಎಂದು ಹೇಳಿದ್ದಾಗಿ ಮಾಧ್ಯಮಗಳು ಹೇಳಿದ್ದವು. ಹಾಗೆಯೇ ಇದ್ದರೆ ಆ. 30ರ ರಾತ್ರಿ 8.30ಕ್ಕೆ 4 ಚೀನಿ ಟ್ಯಾಂಕ್​ಗಳು ಕಾಣಿಸಿಕೊಂಡಾಗ ಭಾರತೀಯ ಸೇನೆ ತಾನೂ ಸೂಕ್ತ ಯುದ್ಧೋಪಕರಣಗಳನ್ನು ಬಳಸುವ ಸ್ವಾತಂತ್ರ್ಯ ಹೊಂದಿತ್ತು! ನಿಮಗೆ ಉಚಿತವೆನಿಸಿದ್ದನ್ನು ಮಾಡಿ ಎಂದು ಪ್ರಧಾನಿ ರಕ್ಷಣಾ ಮಂತ್ರಿಗಳ ಮೂಲಕ ಸಂದೇಶ ನೀಡಿದ್ದು ಅದನ್ನೇ ಸೂಚಿಸುತ್ತದೆ ಅಲ್ಲವೇ? ಏನು ಮಾಡಬೇಕೆಂದು ತೋಚದ ಸ್ಥಿತಿಯನ್ನು ಸೇನಾ ಮುಖ್ಯಸ್ಥರಿಗೆ ಪ್ರಧಾನಿ ಸೃಷ್ಟಿಸಿದರು ಎನ್ನುವ ಆಪಾದನೆ ಸಾಧುವೇ?
ಇನ್ನು ನರ್ವಾಣೆಯವರ ಕೃತಿಯಲ್ಲಿದೆ ಎಂದು ಹೇಳಲಾಗುವ ಸೇನಾ ಮುಖ್ಯಸ್ಥರು ಮತ್ತು ರಾಜಕೀಯ ನೇತಾರರ ನಡುವೆ ರವಾನೆಯಾದ ಸಂದೇಶಗಳ ಬಗ್ಗೆ ಹೇಳುವುದಾದರೆ ಅದು ಸೂಕ್ಷ್ಮ ಸನ್ನಿವೇಶಗಳಲ್ಲಿ ಸೇನಾ ನಾಯಕತ್ವದ ಮತ್ತು ರಾಜಕೀಯ ನಾಯಕತ್ವದ ನಡುವಿನ ಮಾತುಕಥೆಗಳು ಹೇಗೆ ನಡೆಯುತ್ತವೆಂಬ ಒಂದು ಉದಾಹರಣೆಯನ್ನು ನಮ್ಮ ಶತ್ರುಗಳಿಗೆ ನೀಡುತ್ತದೆ. ಎರಡೂ ನಾಯಕತ್ವದ ನಡುವೆ ಅಭಿಪ್ರಾಯಗಳು ಅಗತ್ಯವಾದಷ್ಟು ತ್ವರಿತವಾಗಿ ರವಾನೆಯಾಗುವ ವ್ಯವಸ್ಥೆ ಭಾರತದಲ್ಲಿಲ್ಲ, ಅದನ್ನು ತಾವು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಬಹುದು ಎಂಬ ನಂಬಿಕೆಯನ್ನು ಶತ್ರುಗಳು ಹೊಂದಲು ಸಹಕಾರಿಯಾಗಬಹುದು.
ಈ ಕೃತಿಯ ಪ್ರಕಟಣೆಗೆ ರಕ್ಷಣಾ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲದಿರಲು ಇದು ಕಾರಣವಿರಬಹುದೇ? ಅಲ್ಲದೇ ನರ್ವಾಣೆಯವರು ಹಾಗೆಯೇ ಬರೆದಿದ್ದಾರೆ ಎಂದು ಹೇಳಿದರೂ, ಅದು ಅವರ ಕಡೆಯದಷ್ಟೇ ವಿವರವಾಗಿರುತ್ತದೆ, ಆ ಎರಡು ತಾಸುಗಳಲ್ಲಿ ಪ್ರಧಾನಿಗಳು ವಿಷಮ ಪರಿಸ್ಥಿತಿಯನ್ನು ತಹಬಂದಿಗೆ ತರಲು, ದೊಡ್ಡ ಪ್ರಮಾಣದ ಸೇನಾ ಸಂಘರ್ಷವಾಗದಂತೆ ತಡೆಯಲು ಯಾರ ಜತೆ ಯಾವ ರಾಜತಾಂತ್ರಿಕ ಮಾತುಕಥೆಯಲ್ಲಿ ತೊಡಗಿದ್ದಿರಬಹುದು ಎಂಬುದನ್ನು ಸೇನಾ ಮುಖ್ಯಸ್ಥರು ಕಡೆಗಣಿಸಿದ್ದಾರೆ ಎಂದರ್ಥವೂ ಆಗುತ್ತದೆ ಎಂದೂ ನಾವು ಊಹಿಸಲು ಅವಕಾಶವಿದೆ.
ನರ್ವಾಣೆಯವರ ಕೃತಿಯೆಂದು ಹೇಳಲಾಗುವ ಡಿಜಿಟಲ್ ಆವೃತ್ತಿ ಇನ್ನೊಂದು ಮಹತ್ವದ ವಿಷಯದತ್ತ ಬೆರಳು ಮಾಡುತ್ತದೆ. ತಾನೂ ಕರೊನಾದ ಬೇಗುದಿಯಲ್ಲಿ ಬೇಯುತ್ತಿರುವ ವಿಷಮ ಸನ್ನಿವೇಶದಲ್ಲಿ ಚೀನಾ ಗಡಿಯಲ್ಲಿ ತಂಟೆ ತೆಗೆದದ್ದೇಕೆ? ತನ್ನ ಸಂಕಷ್ಟದ ನಡುವೆಯೂ ಭಾರತವನ್ನು ಮಣಿಸಲು ತನಗೊಂದು ಸುವರ್ಣಾವಕಾಶ ದೊರಕಿದೆ ಎಂದು ಚೀನಾ ಮೊದಲಿಗೆ ಗಲ್ವಾನ್​ನಲ್ಲಿ, ಅಲ್ಲಿ ಹೊಡೆತ ತಿಂದ ಮೇಲೂ ಕೈಲಾಶ್ ಶ್ರೇಣಿಯಲ್ಲಿ ಮತ್ತೆ ಟ್ಯಾಂಕ್​ಗಳನ್ನು ಮುಂದಿಟ್ಟದ್ದೇಕೆ? ನರ್ವಾಣೆಯವರದೆಂದು ಹೇಳಲಾಗುವ ಡಿಜಿಟಲ್ ಕೃತಿಯಲ್ಲಿ ಅವರಿನ್ನೂ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಪ್ರಧಾನಿಯ ಅಪಕೃಪೆಗೆ ಗುರಿಯಾಗುವಂತಹ ಸನ್ನಿವೇಶವೊಂದರ ಪ್ರಸ್ತಾಪವಿದೆ.
ಅದಾದಾಗ ತಮಗೆ ಸೇನಾ ಮುಖ್ಯಸ್ಥರ ಸ್ಥಾನ ಸಿಗಲಾರದು ಎಂದವರು ತಮ್ಮ ಪತ್ನಿಗೆ ಹೇಳಿದ್ದರಂತೆ. ಆದಾಗ್ಯೂ ತಮ್ಮ ವರಿಷ್ಠತೆಗೆ ಅನುಗುಣವಾಗಿ ಸೇನಾ ಮುಖ್ಯಸ್ಥರಾದರು. ಆದರೆ ಭಾರತದ ರಾಜಕೀಯ ನಾಯಕತ್ವ ಮತ್ತು ಸೇನಾ ನಾಯಕತ್ವದ ನಡುವೆ ಸಣ್ಣದೇನೋ ಬಿರುಕು ಇದೆ ಎಂದು ಚೀನಾ ತನ್ನ ಬೇಹುಗಾರಿಕಾ ಮೂಲಗಳಿಂದ ಅಥವಾ ಭಾರತದಲ್ಲಿರುವ ತನ್ನ ಪರವಾದ ಶಕ್ತಿಗಳಿಂದ ಅರಿತು, ಭಾರತವನ್ನು ಮಣಿಸಲು ಇದು ಸಕಾಲ ಎಂದೆಣಿಸಿತೇ? ಕರೊನಾ ಸಂಕಷ್ಟವನ್ನೂ ಬದಿಗಿಟ್ಟು ಗಡಿಯಲ್ಲಿ ತಂಟೆ ತೆಗೆಯಿತೇ? ಚೀನಾ ಅಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಅವಕಾಶ ನೀಡಿರಬಹುದಾದ ಆ ಪ್ರಕರಣದ ವಿವರಗಳನ್ನು, ತಮಗಾಗಿರಬಹುದಾದ ನಿರಾಸೆಯನ್ನು ತಮ್ಮ ಪತ್ನಿಯೊಂದಿಗೆ ಹಂಚಿಕೊಂಡದ್ದನ್ನೂ ಸೇರಿ, ಮಾಜಿ ಸೇನಾ ಮುಖ್ಯಸ್ಥರು ತಮ್ಮ ಕೃತಿಯಲ್ಲಿ ನಿಜವಾಗಿಯೂ ದಾಖಲಿಸಿದ್ದರೆ ಆ ಕೃತಿ ರಕ್ಷಣಾ ಇಲಾಖೆಯಿಂದ ಇನ್ನೂ ಪ್ರಕಟಣಾ ಅನುಮತಿ ಪಡೆಯದಿರಲು ಇದೂ ಒಂದು ಕಾರಣವಿರಬಹುದೇ?.
ನರ್ವಾಣೆಯವರ ಕೃತಿಯ ಕುರಿತಾಗಿ ಇಷ್ಟೆಲ್ಲಾ ಪ್ರಶ್ನೆಗಳು ಏಳಲು ರಾಹುಲ್ ವಿರೋಧಪಕ್ಷಗಳ ನೇತಾರರಾಗಿ ಕಾರಣರಾಗಿರುವುದು ಉಚಿತವೇ? ಅಲ್ಲದೇ ಆ ಮೂಲಕ ಪ್ರಧಾನಿಯನ್ನು ಅವಮಾನಿಸಲು ಪ್ರಯತ್ನಿಸಿ ಅದಕ್ಕಾಗಿ ಲೋಕಸಭೆಯ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು ಅವರಿಗೆ ರಾಜಕೀಯವಾಗಿ ಭಾರಿ ಹೊರೆಯಾಗಬಹುದೇ? ಇದನ್ನು ವಿಶ್ಲೇಷಿಸಲು ಲೇಖನಸರಣಿ ಇನ್ನೊಂದು ಕಂತಿಗೆ ಮುಂದುವರೆಯಲೇಬೇಕಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net