

ವಿಜಯನಗರಂ: ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಮಿಗಿಲಾದ ಬಂಧುವಿಲ್ಲ ಎಂಬ ಮಾತಿದೆ. ಮಗುವಿನ ಪ್ರಾಣಕ್ಕೆ ಆಪತ್ತು ಎದುರಾದಾಗ ತಾಯಿ ಯಾವ ಹಂತಕ್ಕೂ ಹೋಗಬಲ್ಲಳು ಎಂಬುದಕ್ಕೆ ಆಂಧ್ರಪ್ರದೇಶದಲ್ಲಿ ನಡೆದ ಈ ಮನಕಲಕುವ ಘಟನೆಯೇ ಸಾಕ್ಷಿಯಾಗಿದೆ.
ಅನಾರೋಗ್ಯದಿಂದ ನರಳುತ್ತಿದ್ದ 12 ವರ್ಷದ ಮಗಳನ್ನು ಉಳಿಸಿಕೊಳ್ಳಲು, ಆಸ್ಪತ್ರೆಗೆ ಕೊಂಡೊಯ್ಯಲು ಯಾವುದೇ ವಾಹನ ಸಿಗದೆ ಕಂಗಾಲಾದ ತಾಯಿಯೊಬ್ಬಳು, ಕೊನೆಗೆ ಮಗಳನ್ನು ತನ್ನ ಹೆಗಲ ಮೇಲೆಯೇ ಹೊತ್ತುಕೊಂಡು ಬರೋಬ್ಬರಿ 7 ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ ಘಟನೆ ಈಗ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ಈ ಘಟನೆಯು ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿರುವ ಬುಡಕಟ್ಟು ಗ್ರಾಮ ಪಲ್ಲಪು ದುಂಗಡದಲ್ಲಿ ವರದಿಯಾಗಿದೆ. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಈ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಕೊಚ್ಚಿಹೋಗಿ, ಇಡೀ ಗ್ರಾಮವೇ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿತ್ತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸ್ಥಳೀಯ ನಿವಾಸಿ ಜನ್ನಿ ಸುಕರಮ್ಮ ಎಂಬಾಕೆಯ 12 ವರ್ಷದ ಮಗಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾಳೆ.
ಮಗಳ ಆರೋಗ್ಯ ದಿನಕಳೆದಂತೆ ಹದಗೆಡುತ್ತಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮದಲ್ಲಿ ಯಾವುದೇ ವಾಹನ ಸೌಲಭ್ಯವಿರಲಿಲ್ಲ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂ, ರಸ್ತೆ ಇಲ್ಲದ ಕಾರಣ ಹಳ್ಳಿಯೊಳಗೆ ವಾಹನ ಬರಲು ಸಾಧ್ಯವಿರಲಿಲ್ಲ.
ಇತ್ತ ಮಗಳು ಕಣ್ಣೆದುರೇ ನರಳಾಡುತ್ತಿರುವುದನ್ನು ನೋಡಿದ ತಾಯಿಗೆ ದಿಕ್ಕುತೋಚದಂತಾಗಿದೆ. ಕೊನೆಗೆ ಸಮಯ ವ್ಯರ್ಥ ಮಾಡದೆ, ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಗುಡ್ಡಗಾಡು ಹಾದಿಯಲ್ಲೇ ಸುಮಾರು 7 ಕಿಲೋಮೀಟರ್ ದೂರ ಸಾಗಿದ್ದಾಳೆ.
ಕಾಡುಮೇಡು, ಹಳ್ಳ-ಕೊಳ್ಳಗಳನ್ನು ಲೆಕ್ಕಿಸದೆ ಮಗಳ ಜೀವ ಉಳಿಸಲು ತಾಯಿ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ದೃಶ್ಯ ಕಂಡ ನೆಟ್ಟಿಗರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಲ್ಲದೆ, ಆ ತಾಯಿಯ ಅಪ್ರತಿಮ ಪ್ರೀತಿಗೆ ತಲೆಬಾಗಿದ್ದರು.
ಈ ಮನಕಲಕುವ ಘಟನೆ ಸಚಿವ ನಾರಾ ಲೋಕೇಶ್ ಗಮನಕ್ಕೆ ಬರುತ್ತಿದ್ದಂತೆಯೇ ಅವರು ತೀವ್ರವಾಗಿ ಮರುಗಿದ್ದಾರೆ. ಹಳ್ಳಿಯ ಜನರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ತಕ್ಷಣವೇ ಸ್ಪಂದಿಸಿದ ಅವರು, ಆ ಪ್ರದೇಶಕ್ಕೆ ತುರ್ತು ವೈದ್ಯಕೀಯ ಸಾರಿಗೆ ಒದಗಿಸಲು ಮುಂದಾಗಿದ್ದಾರೆ. ಅವರ ಮನವಿಗೆ ತಕ್ಷಣ ಸ್ಪಂದಿಸಿದ ರಾಜ್ಯಸಭಾ ಸಂಸದ ವಿಜಯ್ ಚಿಂತಕಾಯಲ, ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಮೂಲಕ ಪಲ್ಲಪು ದುಂಗಡ ಗ್ರಾಮಕ್ಕೆ ಆಂಬ್ಯುಲೆನ್ಸ್ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ, (ಏಜೆನ್ಸೀಸ್).