ಅರ್ಧ ಶತಮಾನ ಸಂಸಾರ ನಡೆಸಿ ವಿಚ್ಛೇದನ ಕೇಳಿದ ವೃದ್ಧ ದಂಪತಿ! ಅರ್ಜಿ ವಜಾ ಮಾಡಿ ಹೈಕೋರ್ಟ್ ಹೇಳಿದ್ದೇನು ಗೊತ್ತಾ? Divorce

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 58 ವರ್ಷಗಳ ಕಾಲ ದಾಂಪತ್ಯ ನಡೆಸಿ ವಿಚ್ಛೇದನ ಕೋರಿದ ದಂಪತಿ
  • ರಾಜಸ್ಥಾನ ಹೈಕೋರ್ಟ್​ ಅಂಗಳಕ್ಕೆ ಬಂದ ವಿಭಿನ್ನ ಪ್ರಕರಣ
  • ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದ ಹೈಕೋರ್ಟ್​
ಜೈಪುರ: ಬರೋಬ್ಬರಿ 58 ವರ್ಷಗಳ ಕಾಲ ದಾಂಪತ್ಯ ನಡೆಸಿದ ವೃದ್ಧ ದಂಪತಿಗಳು ಸಲ್ಲಿಸಿದ್ದ ವಿಚ್ಛೇದನ (Divorce) ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಕ್ರೌರ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದೆ.

ಪ್ರಕರಣವೇನು?

ಈ ದಂಪತಿಗಳು ಮದುವೆಯಾಗಿದ್ದು ಜೂನ್ 29, 1967 ರಂದು,ಅಂದರೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಇವರು ಒಟ್ಟಿಗೆ ಬದುಕಿದ್ದಾರೆ. 2013 ರ ವರೆಗೆ (46 ವರ್ಷಗಳು) ಇವರ ದಾಂಪತ್ಯ ಜೀವನ ಸರಾಗವಾಗಿ ಸಾಗಿದೆ. ಆದರೆ, 2014ರಲ್ಲಿ ಪತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಪತ್ನಿ ವರದಕ್ಷಿಣೆ ಕಿರುಕುಳದ ಸುಳ್ಳು ಕೇಸ್ ಹಾಕಿದ್ದಾರೆ ಮತ್ತು ಆಸ್ತಿ ವಿಷಯದಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂಬುದು ಪತಿಯ ವಾದವಾಗಿತ್ತು.

ಆಸ್ತಿ ಮತ್ತು ಅಕ್ರಮ ಸಂಬಂಧದ ಆರೋಪ!

ಆದರೆ ಪತ್ನಿಯ ವಾದವೇ ಬೇರೆಯಾಗಿತ್ತು. ತನ್ನ ಪತಿ ಕೌಟುಂಬಿಕ ಆಸ್ತಿಯನ್ನು ವ್ಯರ್ಥ ಮಾಡುತ್ತಿದ್ದಾರೆ ಮತ್ತು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಪತಿ ತನ್ನ ತಮ್ಮನ ಪ್ರಭಾವಕ್ಕೆ ಒಳಗಾಗಿ ವಿಚ್ಛೇದನ ಕೇಳುತ್ತಿದ್ದಾರೆ ಎಂಬುದು ಪತ್ನಿಯ ದೂರಾಗಿತ್ತು. ಆಸ್ತಿಯನ್ನು ಇಬ್ಬರು ಗಂಡು ಮಕ್ಕಳಿಗೆ ಸಮಾನವಾಗಿ ಹಂಚಬೇಕು ಎಂಬ ವಿಷಯವೇ ಈ ಎಲ್ಲ ಜಗಳಕ್ಕೆ ಮೂಲಕಾರಣ ಎನ್ನುವುದು ಪತ್ನಿಯ ವಾದವಾಗಿತ್ತು.

ನ್ಯಾಯಾಲಯ ಹೇಳಿದ್ದೇನು?

ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಮತ್ತು ನ್ಯಾಯಮೂರ್ತಿ ಅನಿಲ್ ಕುಮಾರ್ ಉಪ್ಮಾನ್ ಅವರಿದ್ದ ನ್ಯಾಯಪೀಠವು ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ದಶಕಗಳ ಕಾಲ ಒಟ್ಟಿಗೆ ಬಾಳಿದ ಮೇಲೆ ದಂಪತಿಗಳಲ್ಲಿ ಮಾನಸಿಕ ಸಹಿಷ್ಣುತೆ ಮತ್ತು ತಿಳುವಳಿಕೆ ಹೆಚ್ಚಿರಬೇಕು. ಆಸ್ತಿ ವಿಚಾರದಲ್ಲಿ ಜಗಳ ನಡೆಯುವುದು ಸಹಜ, ಆದರೆ ಅದನ್ನು ಕ್ರೌರ್ಯ ಎಂದು ಕರೆದು ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಈ ವಯಸ್ಸಿನಲ್ಲಿ ವಿಚ್ಛೇದನ ನೀಡಿದರೆ ಅದು ಕೇವಲ ಪತ್ನಿಗಲ್ಲದೆ, ಇಡೀ ಕುಟುಂಬದ ಖ್ಯಾತಿಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವೈವಾಹಿಕ ಜೀವನದಲ್ಲಿ ಏರಿಳಿತಗಳು ಅನಿವಾರ್ಯ, ಅವುಗಳನ್ನು ಪ್ರೀತಿ ಮತ್ತು ತಾಳ್ಮೆಯಿಂದ ಸರಿಪಡಿಸಿಕೊಳ್ಳಬೇಕೇ ಹೊರತು ಕೋರ್ಟ್ ಮೆಟ್ಟಿಲೇರುವುದಲ್ಲ ಎಂದು ಹೈಕೋರ್ಟ್ ಕಿವಿಮಾತು ಹೇಳಿದೆ. ಕೊನೆಗೂ 58 ವರ್ಷಗಳ ಹಳೆಯ ಈ ದಾಂಪತ್ಯವನ್ನು ಮುರಿಯಲು ಒಪ್ಪದ ನ್ಯಾಯಾಲಯ, ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದು ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net