ವೋಟ್ ಬ್ಯಾಂಕ್‌ಗಾಗಿ ಗಡಿ ಭದ್ರತೆ ಬಲಿ ಕೊಟ್ಟ ಕಾಂಗ್ರೆಸ್.. ಬಿಜೆಪಿ ಸರ್ಕಾರದಿಂದ ಅಕ್ರಮ ವಲಸಿಗರ ಗಡಿಪಾರು ಖಚಿತ ಅಂದ್ರು ಷಾ! | Amit Shah

Amit Shah |  ಕಚಾರ್ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ
Amit Shah | ಕಚಾರ್ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ
Published on
ದಿಸ್ಪೂರ್​​: ಅಸ್ಸಾಂ ವಿಧಾನಸಭೆ ಚುನಾವಣೆಯ ಘೋಷಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಹಗ್ಗಜಗ್ಗಾಟ ತಾರಕಕ್ಕೇರಿದೆ. ಇಂದು ಕಚಾರ್ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಸ್ಸಾಂನ ಪ್ರಮುಖ ಸಮಸ್ಯೆಯಾದ ಒಳನುಸುಳುವಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಷಾ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗಡಿಗಳು ಅಸುರಕ್ಷಿತವಾಗಿದ್ದವು ಎಂದು ಅರೋಪಿಸಿದರು.

ಕಾಂಗ್ರೆಸ್ ಅವಧಿಯಲ್ಲಿ ಅರಾಜಕತೆ

ದಶಕಗಳ ಕಾಲ ಅಸ್ಸಾಂ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ವೋಟ್ ಬ್ಯಾಂಕ್ ರಾಜಕೀಯದ ಕಾರಣಕ್ಕಾಗಿ ದೇಶದ ಗಡಿಗಳನ್ನು ಅಕ್ರಮ ನುಸುಳುಕೋರರಿಗಾಗಿ ತೆರೆದಿಟ್ಟಿತ್ತು. ಬಾಂಗ್ಲಾದಿಂದ ದೊಡ್ಡ ಪ್ರಮಾಣದಲ್ಲಿ ವಲಸೆ ಬರುವವರಿಗೆ ಕಾಂಗ್ರೆಸ್ ನಾಯಕರು ಕಾವಲಾಗಿದ್ದರು. 
ಒಳನುಸುಳುವಿಕೆ ಎನ್ನುವುದು ಕೇವಲ ಅಸ್ಸಾಂನ ಅಸ್ಮಿತೆಗೆ ಮಾತ್ರವಲ್ಲ, ಇಡೀ ಭಾರತದ ಆಂತರಿಕ ಭದ್ರತೆಗೆ ತಂದೊಡ್ಡಿದ ಕುತ್ತು, ಅಕ್ರಮ ವಲಸಿಗರು ಅಸ್ಸಾಂಗೆ ಪ್ರವೇಶಿಸುತ್ತಲೇ ಇದ್ದರು. ಇಲ್ಲಿನ ಯುವಕರ ಉದ್ಯೋಗಗಳು, ಬಡವರ ಆಹಾರ ಧಾನ್ಯಗಳು ಮತ್ತು ಭೂಮಿಯನ್ನು ಕಸಿದುಕೊಳ್ಳುವ ಮೂಲಕ ರಾಜ್ಯದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸುವ ಪ್ರಯತ್ನ ಮಾಡಲಾಯಿತು ಎಂದು ಷಾ ಆರೋಪಿಸಿದರು.

ಬಿಜೆಪಿ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಿದೆ. ನಾವು ಒಳನುಸುಳುವಿಕೆಯನ್ನು ಹಿಮ್ಮೆಟ್ಟಿಸಿದ್ದೇವೆ. ಕಾಂಗ್ರೆಸ್ ಅವಧಿಯಲ್ಲಿ ನಡೆದ ಅಕ್ರಮ ವಲಸೆಯ ಹರಿವನ್ನು ನಾವು ತಡೆದಿದ್ದೇವೆ. ಈಗ ಅಸ್ಸಾಂನ ಪ್ರತಿಯೊಬ್ಬ ನಾಗರಿಕನೂ ಸುರಕ್ಷಿತವಾಗಿದ್ದಾನೆ ಎಂದು ಹೇಳಿದರು.
ದಶಕಗಳ ಹಿಂದೆ ಅಸ್ಸಾಂನ ಮತದಾರರು ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿದರು, ಮೊದಲ ಐದು ವರ್ಷಗಳಲ್ಲಿ ನಾವು ಒಳನುಸುಳುವಿಕೆಯನ್ನು ನಿಲ್ಲಿಸಲು ಕೆಲಸ ಮಾಡಿದ್ದು, ಎರಡನೇ ಅವಧಿಯಲ್ಲಿ, ವಲಸಿಗರು ಆಕ್ರಮಿಸಿಕೊಂಡಿದ್ದ ಲಕ್ಷಾಂತರ ಎಕರೆ ಭೂಮಿ ತೆರವುಗೊಳಿಸುವ ಕಾರ್ಯವನ್ನು ನಮ್ಮ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಡಿದ್ದಾರೆ ಎಂದು ಹೇಳಿದರು.
ಅಸ್ಸಾಂನಲ್ಲಿ ಬಿಜೆಪಿ 10 ವರ್ಷಗಳಲ್ಲಿ ಸಾಧಿಸಿದ್ದು, ಕಾಂಗ್ರೆಸ್ 50 ವರ್ಷಗಳಲ್ಲೂ ಮಾಡಿಲ್ಲ ಎಂದಿರುವ ಗೃಹ ಸಚಿವ ಷಾ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಅಸ್ಸಾಂಗೆ ಪ್ರವೇಶಿಸಿದ ಪ್ರತಿಯೊಬ್ಬ ನುಸುಳುಕೋರರನ್ನು ವಾಪಸ್ ಕಳುಹಿಸಲು ಮತ್ತೊಮ್ಮೆ ಅಧಿಕಾರ ನೀಡುವಂತೆ ನೆರದಿರುವವರಲ್ಲಿ ಮನವಿ ಮಾಡಿದರು.

ಅಭಿವೃದ್ಧಿಯ ಮಂತ್ರ

ಕೇವಲ ಭದ್ರತೆ ಮಾತ್ರವಲ್ಲದೆ, ಅಸ್ಸಾಂನಲ್ಲಿ ನಡೆದಿರುವ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆಯೂ ಷಾ ಮಾತನಾಡಿದ್ದು, ಬ್ರಹ್ಮಪುತ್ರ ನದಿಗೆ ನಿರ್ಮಿಸಿರುವ ಸೇತುವೆಗಳು, ಹೆದ್ದಾರಿಗಳು ಮತ್ತು ತೈಲ ಸಂಸ್ಕರಣಾಗಾರಗಳ ಉನ್ನತೀಕರಣದ ಬಗ್ಗೆ ಮಾಹಿತಿ ನೀಡಿ, ಇದು ಡಬಲ್ ಇಂಜಿನ್ ಸರ್ಕಾರದ ನೈಜ ಶಕ್ತಿ ಎಂದು ಬಣ್ಣಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net