ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಮತಾ ಬ್ಯಾನರ್ಜಿ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಿ; ಬುಡಕಟ್ಟು ಜನರಿಗೆ ಅಮಿತ್ ಶಾ ಮನವಿ | Amit Shah

ಅಮಿತ್ ಶಾ
ಅಮಿತ್ ಶಾ
Published on
ಕೋಲ್ಕತ್ತಾ: ಕಳೆದ ತಿಂಗಳು ಪಶ್ಚಿಮ ಬಂಗಾಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಂದಾಗ ಸಿಎಂ ಮಮತಾ ಬ್ಯಾನರ್ಜಿ ಅವರು ಮಾಡಿದ ಅವಮಾನಕ್ಕೆ ಮತ ಹಾಕುವ ಮೂಲಕ ಸೇಡು ತೀರಿಸಿಕೊಳ್ಳಿ ಎಂದು ಶನಿವಾರ(ಏ. 11) ಬುಡಕಟ್ಟು ಸಮುದಾಯಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ.
ಬಂಕುರಾದ ಛತ್ನಾದಲ್ಲಿ ಚುನಾವಣಾ ಪ್ರಚಾರವನ್ನುದ್ದೇಶಿಸಿ ಮಾತನಾಡಿರುವ ಅವರು, ಮುರ್ಮು ಜಿ ಬಂಗಾಳದಲ್ಲಿ ಬುಡಕಟ್ಟು ಸಮುದಾಯದ ಸದಸ್ಯರನ್ನು ಭೇಟಿ ಮಾಡಲು ಬಂದಿದ್ದರು. ಆದರೆ ಮಮತಾ ಜಿ ಅವರನ್ನು ಅವಮಾನಿಸಿದ್ದಾರೆ. ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವಂತೆ ನಾನು ಪ್ರತಿಯೊಬ್ಬ ಬುಡಕಟ್ಟು ಸಹೋದರ ಸಹೋದರಿಯರಿಗೂ ಮನವಿ ಮಾಡ್ತೇನೆ ಎಂದಿದ್ದಾರೆ.
ಕಳೆದ 15 ವರ್ಷಗಳಲ್ಲಿ ಟಿಎಂಸಿ ಸರ್ಕಾರ ಬುಡಕಟ್ಟು ಜನಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಸಂತಾಲರು ಮತ್ತು ಕುರ್ಮಿಗಳನ್ನು ವಿಭಜಿಸುತ್ತಿದೆ. ಕಾಂಗ್ರೆಸ್ ದಶಕಗಳಿಂದ ಬುಡಕಟ್ಟು ಸಮುದಾಯಗಳನ್ನು ನಿರ್ಲಕ್ಷಿಸಿದೆ. ಮಮತಾ ಅಥವಾ ಕಾಂಗ್ರೆಸ್ ಎಂದಿಗೂ ಬುಡಕಟ್ಟು ಸಮುದಾಯದ ಸದಸ್ಯರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿಲ್ಲ. ಮೋದಿ ಜಿ ಸಂತಾಲ ಸಹೋದರಿಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸಂವಿಧಾನದ ಎಂಟನೇ ವೇಳಾಪಟ್ಟಿಯಲ್ಲಿ ಕುರ್ಮಾಲಿ ಮತ್ತು ರಾಜ್‌ಬನ್ಶಿಯನ್ನು ಸೇರಿಸುವುದಾಗಿ ಭರವಸೆ ನೀಡಿದ ಅವರು, ಒಳನುಸುಳುಕೋರರಿಂದ ಲವ್ ಜಿಹಾದ್ ಮತ್ತು ಭೂಕಬಳಿಕೆ ಆಗ್ತಿದೆ. ಬಿಜೆಪಿ ಅಧಿಕಾರ ವಹಿಸಿಕೊಂಡ ನಂತರ ಅಕ್ರಮ ವಲಸಿಗರನ್ನು ಹೊರಹಾಕಲಿದೆ. ಸಿಎಂ ಮಮತಾ ಜಿ ಬಲಿಪಶು ಕಾರ್ಡ್ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕಳೆದ ತಿಂಗಳು ಸಂತಾಲ್ ಸಮ್ಮೇಳನಕ್ಕೆ ನಿಗದಿ ಪಡಿಸಿದ ಸ್ಥಳವನ್ನು ಟಿಎಂಸಿ ಸರ್ಕಾರ ಬದಲಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಸ್ವತಃ ರಾಷ್ಟ್ರಪತಿ ಮುರ್ಮು ಅವರು ಕಾರ್ಯಕ್ರಮದಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿಲ್ಲ. ಸಹೋದರಿ ಸಿಎಂ ಯಾಕೆ ಹೀಗೆ ಮಾಡ್ತಿದ್ದಾರೋ ಎಂದು ಕಿಡಿಕಾರಿದ್ದರು. ಮತ್ತು ಸಿಎಂ ಕಾರ್ಯಕ್ರಮಕ್ಕೆ ಬರದೇ ಶಿಷ್ಟಾಚಾರ ಉಲ್ಲಂಘನೆ ಆರೋಪವು ಕೇಳಿ ಬಂದಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net