ಭಾರೀ ವಿವಾದ, ಅಸಮಾಧಾನ ಬೆನ್ನಲ್ಲೇ ಉದ್ಯೋಗಿಗಳಿಗೆ ಸಿಹಿ ಸುದ್ದಿ ಕೊಟ್ಟ ದೈತ್ಯ ಟೆಕ್​ ಕಂಪನಿ​! | TCS

 TCS ಟೆಕ್​ ಕಂಪನಿ
TCS ಟೆಕ್​ ಕಂಪನಿ
Published on

ಪ್ರಮುಖ ಮುಖ್ಯಾಂಶಗಳು

  • ಟಿಸಿಎಸ್ ನಾಸಿಕ್ ಕಚೇರಿಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ
  • ಕಂಪನಿಯಲ್ಲಿ ನಡೆದ ಘಟನೆಗೆ ವ್ಯಾಪಕ ಆಕ್ರೋಶ
  • ವಿವಾದ, ಆಕ್ರೋಶಗಳ ಮಧ್ಯೆ ವಜಾ ಪ್ರಕ್ರಿಯೆ ನಿಲ್ಲಿಸಿದ ಸಂಸ್ಥೆ
  • ಉದ್ಯೋಗಿಗಳ ಸಂಬಳ ಹೆಚ್ಚಳಕ್ಕೆ ಅವಕಾಶ
ನವದೆಹಲಿ: ಇತ್ತೀಚೆಗಷ್ಟೇ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯ ನಾಸಿಕ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣ ಸದ್ಯ ದೇಶವ್ಯಾಪಿ ಭಾರೀ ಸಂಚಲನ ಹುಟ್ಟುಹಾಕಿದೆ. ಟೆಕ್​ ದೈತ್ಯ ಕಂಪನಿಯಲ್ಲಿ ಇಂತಹದ್ದೊಂದು ಪ್ರಕರಣ ಬಯಲಿಗೆ ಬಂದಿರುವುದು ಇದೀಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ವಿವಾದ, ಅಸಮಾಧಾನಗಳ ನಡುವೆಯೇ ತನ್ನ ಉದ್ಯೋಗಿಗಳಿಗೆ ಸಂಸ್ಥೆ ವಜಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದೆ.  
ಭವಿಷ್ಯದ ಎಐ ಟೆಕ್ನಾಲಜಿ ಮೇಲೆ ಹೆಚ್ಚಿನ ಬಂಡಾವಳ ಹೂಡುತ್ತಿರುವ ಕಾರಣ, ಹಲವು ರೌಂಡ್​ಗಳ ಉದ್ಯೋಗ ಮತ್ತು ಉದ್ಯೋಗಿಗಳ ವಜಾ ಪ್ರಕ್ರಿಯೆಯಲ್ಲಿ ಮುಂದಾಗಿದ್ದ ಟಿಸಿಎಸ್​, ಈಗ ಆ ಪ್ರಕ್ರಿಯೆಯನ್ನು ನಿಲ್ಲಿಸಿದೆ. ಈ ಕುರಿತಾಗಿ ಹೇಳಿಕೊಂಡಿರುವ ಕಂಪನಿ, ಉದ್ಯೋಗಿಗಳಿಗೆ ಅವರ ಸಂಬಳ ಮತ್ತು ಉದ್ಯೋಗ ಭದ್ರತೆಯ ಭರವಸೆಯನ್ನು ಗಟ್ಟಿಯಾಗಿಸಿದೆ. ತನ್ನ ವಾರ್ಷಿಕ ವೇತನ ಪರಿಷ್ಕರಣೆ ಪ್ರಕ್ರಿಯೆಯನ್ನು ಪುನರಾರಂಭಿಸುವುದಾಗಿಯೂ ಹೇಳಿದೆ. 
ಉನ್ನತ ಪ್ರದರ್ಶನ ನೀಡುವ ಉದ್ಯೋಗಿಗಳಿಗೆ ಎರಡಂಕಿಯ (ಶೇ.10ರಷ್ಟು) ಹೆಚ್ಚಳ ಸಿಗುವ ಸಾಧ್ಯತೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ. ಆದಾಗ್ಯೂ, ಅಧಿಕ ಸಂಖ್ಯೆಯ ಉದ್ಯೋಗಿಗಳು ಅವರವರ ರೇಟಿಂಗ್ ಮತ್ತು ದರ್ಜೆಯನ್ನು ಅವಲಂಬಿಸಿ ಶೇ.4.5ರಿಂದ ಶೇ.7ರಷ್ಟು ಹೆಚ್ಚಳ ಪಡೆಯುವ ಸಾಧ್ಯತೆಯಿದೆ ಎಂದು ವಿವರಿಸಲಾಗಿದೆ. ಹಿಂದಿನದಕ್ಕೆ ಹೋಲಿಸಿದರೆ, ನೇಮಕಾತಿಗಳ ಸಂಖ್ಯೆ ಕಡಿಮೆಯಿದ್ದರೂ ನೇಮಕಾತಿ ಮುಂದುವರೆದಿದೆ ಎಂದು ಕಂಪನಿ ಹೇಳಿದೆ. 
ಟಿಸಿಎಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸುದೀಪ್ ಕುನ್ನಮ್ಮಾಳ್ ಅವರ ಪ್ರಕಾರ, ಟಿಸಿಎಸ್ ಈ ವರ್ಷ ಸುಮಾರು 40,000 ಹೊಸಬರನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು 25,000 ಕ್ಯಾಂಪಸ್ ಸೆಲೆಕ್ಷನ್​ ಈಗಾಗಲೇ ನಡೆಸಲಾಗಿದೆ ಎಂದು ತಿಳಿಸಲಾಗಿದೆ. 

ಅಷ್ಟಕ್ಕೂ ಏನಿದು ನಾಸಿಕ್​ ಕೇಸ್​?

ಅಂದಹಾಗೆ, ಟಿಸಿಎಸ್‌ನ ನಾಸಿಕ್ ಘಟಕದ ಎಂಟು ಮಹಿಳಾ ಉದ್ಯೋಗಿಗಳು ಹಿರಿಯ ಸಹೋದ್ಯೋಗಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದ್ದು, ದೂರು ನೀಡಿದರೂ ಮಾನವ ಸಂಪನ್ಮೂಲ (HR) ವಿಭಾಗ ಸರಿಯಾಗಿ ಸ್ಪಂದಿಸದಿರುವುದು ಐಟಿ ಕ್ಷೇತ್ರದಲ್ಲಿ ಆತಂಕ ಮೂಡಿಸಿದೆ. ಸದ್ಯ ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದು, ಒಬ್ಬ ಮಹಿಳಾ ಎಚ್‌ಆರ್ ಮ್ಯಾನೇಜರ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಕೆಲಸದ ಕಾರ್ಯಕ್ಷಮತೆಯ ನೆಪದಲ್ಲಿ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿರುವುದು ಮತ್ತು ಅವಮಾನಿಸಿರುವುದು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಐಟಿ ಉದ್ಯೋಗಿಗಳ ಹಿತರಕ್ಷಣಾ ಸಂಘಗಳು (NITES ನಂತಹವು) ಇದನ್ನು ತೀವ್ರವಾಗಿ ಖಂಡಿಸಿ ಕಾರ್ಮಿಕ ಸಚಿವಾಲಯಕ್ಕೆ ದೂರು ನೀಡಿದವು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಸಿಎಸ್ ಸಂಸ್ಥೆಯು, ತನ್ನ ನೀತಿ ಸಂಹಿತೆಯ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಘಟನೆಯಲ್ಲಿ ಭಾಗಿಯಾದ ಸಂಬಂಧಿತ ಉದ್ಯೋಗಿಗಳನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net