ಆರ್ಥಿಕ ಪ್ರಾಬಲ್ಯಕ್ಕಾಗಿ ಅಮೆರಿಕದ ಕುತಂತ್ರ; ತೈಲ ಟ್ಯಾಂಕರ್‌ಗಳ ವಿರುದ್ಧ ವಾಷಿಂಗ್ಟನ್ ಸಮರ: ರಷ್ಯಾ ಕಿಡಿ | Russia

ಆರ್ಥಿಕ ಪ್ರಾಬಲ್ಯಕ್ಕಾಗಿ ಅಮೆರಿಕದ ಕುತಂತ್ರ; ತೈಲ ಟ್ಯಾಂಕರ್‌ಗಳ ವಿರುದ್ಧ ವಾಷಿಂಗ್ಟನ್ ಸಮರ: ರಷ್ಯಾ ಕಿಡಿ
ಆರ್ಥಿಕ ಪ್ರಾಬಲ್ಯಕ್ಕಾಗಿ ಅಮೆರಿಕದ ಕುತಂತ್ರ; ತೈಲ ಟ್ಯಾಂಕರ್‌ಗಳ ವಿರುದ್ಧ ವಾಷಿಂಗ್ಟನ್ ಸಮರ: ರಷ್ಯಾ ಕಿಡಿ
Published on
ಮಾಸ್ಕೋ: ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತ ಸೇರಿದಂತೆ ಇತರ ದೇಶಗಳು ರಷ್ಯಾದಿಂದ(Russia) ಅಗ್ಗದ ದರದಲ್ಲಿ ತೈಲ ಖರೀದಿಸುವುದನ್ನು ತಡೆಯಲು ದಬ್ಬಾಳಿಕೆ ಕ್ರಮಗಳನ್ನು ಬಳಸುತ್ತಿದೆ ಎಂದು ರಷ್ಯಾ ಆರೋಪಿಸಿದೆ.
ಈ ಬಗ್ಗೆ ಟಿವಿ ಬ್ರಿಕ್ಸ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್, ಟ್ರಂಪ್ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ವಾಷಿಂಗ್ಟನ್ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತನ್ನ ಆರ್ಥಿಕ ಪ್ರಾಬಲ್ಯ ಸಾಧಿಸಲು ಸಂಚು ರೂಪಿಸಿದೆ ಎಂದು ಗುಡುಗಿದ್ದಾರೆ.

ಟ್ರಂಪ್ ಕೊಟ್ಟ ಮಾತು ತಪ್ಪಿದ್ದಾರೆ: ಲಾವ್ರೋವ್ ಕಿಡಿ

ಮುಂದುವೆರದು ಮಾತನಾಡಿದ ಲಾವ್ರೋವ್, ಕಳೆದ ವರ್ಷ ಅಲಾಸ್ಕಾದ ಆಂಕರೇಜ್‌ನಲ್ಲಿ ನಡೆದ ಮಾತುಕತೆಯಲ್ಲಿ ಯುಕ್ರೇನ್ ವಿಚಾರವಾಗಿ ಅಮೆರಿಕ ನೀಡಿದ್ದ ಪ್ರಸ್ತಾವನೆಗಳನ್ನು ರಷ್ಯಾ ಒಪ್ಪಿಕೊಂಡಿತ್ತು. ನಾವು ಅಮೆರಿಕದ ಷರತ್ತುಗಳನ್ನು ಒಪ್ಪಿಕೊಳ್ಳುವ ಮೂಲಕ ಯುಕ್ರೇನ್ ಸಮಸ್ಯೆಯನ್ನು ಬಗೆಹರಿಸಿ, ಪರಸ್ಪರ ಲಾಭದಾಯಕ ಸಹಕಾರದತ್ತ ಸಾಗಲು ಮುಂದಾಗಿದ್ದೆವು. ಆದರೆ, ವಾಷಿಂಗ್ಟನ್ ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಪ್ರಾಬಲ್ಯದ ಸಂಚು: ವಾಷಿಂಗ್ಟನ್ ತನ್ನ ಆರ್ಥಿಕ ಪ್ರಾಬಲ್ಯವನ್ನು ಸ್ಥಾಪಿಸಲು ಸುಂಕಗಳು, ನಿರ್ಬಂಧಗಳು ಮತ್ತು ನೇರ ನಿಷೇಧಗಳಂತಹ ಅನ್ಯಾಯದ ಮಾರ್ಗಗಳನ್ನು ಬಳಸುತ್ತಿದೆ. ಜಾಗತಿಕ ಇಂಧನ ಮಾರ್ಗಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಅಮೆರಿಕದ ಉದ್ದೇಶವಾಗಿದೆ ಎಂದು ಲಾವ್ರೋವ್ ಹೇಳಿದ್ದಾರೆ.
ದುಬಾರಿ ದರದ LNG ಒತ್ತಡ: ರಷ್ಯಾದ ಅಗ್ಗದ ಇಂಧನವನ್ನು ಬಿಟ್ಟು, ಅಮೆರಿಕದ ದ್ರವೀಕೃತ ನೈಸರ್ಗಿಕ ಅನಿಲವನ್ನು ಅತ್ಯಂತ ಹೆಚ್ಚಿನ ಬೆಲೆಗೆ ಖರೀದಿಸುವಂತೆ ಭಾರತದಂತಹ ದೇಶಗಳ ಮೇಲೆ ಅಮೆರಿಕ ಒತ್ತಡ ಹೇರುತ್ತಿದೆ ಎಂದು ಲಾವ್ರೋವ್ ಕಿಡಿಕಾರಿದ್ದಾರೆ.
ಕೃತಕ ಅಡೆತಡೆಗಳು: ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರಕ್ಕೆ ಅಮೆರಿಕವು ಕೃತಕ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಆದರೆ ರಷ್ಯಾ, ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳೊಂದಿಗೆ ಮುಕ್ತ ಸಹಕಾರಕ್ಕೆ ಸಿದ್ಧವಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವ ತಿಳಿಸಿದ್ದಾರೆ.

ಭಾರತದ ಸ್ಪಷ್ಟ ನಿಲುವು: ರಾಷ್ಟ್ರೀಯ ಹಿತಾಸಕ್ತಿಯೇ ಮೊದಲು

ರಷ್ಯಾದ ಈ ಹೇಳಿಕೆಯ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಭಾರತವು ತನ್ನ ಇಂಧನ ಅಗತ್ಯಗಳನ್ನು ಯಾವುದೇ ದೇಶದ ಒತ್ತಡಕ್ಕೆ ಮಣಿದು ನಿರ್ಧರಿಸುವುದಿಲ್ಲ ಎಂದು ತಿಳಿಸಿದೆ.
ಲಭ್ಯತೆ ಮತ್ತು ನ್ಯಾಯಯುತ ಬೆಲೆ: ಇಂಧನ ಲಭ್ಯತೆ, ನ್ಯಾಯಯುತ ಬೆಲೆ ಮತ್ತು ಪೂರೈಕೆಯ ವಿಶ್ವಾಸಾರ್ಹತೆ ಭಾರತದ ಇಂಧನ ನೀತಿಯ ಆಧಾರಸ್ತಂಭಗಳಾಗಿವೆ.
ಗ್ರಾಹಕರ ಹಿತಾಸಕ್ತಿ: ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ತನ್ನ 140 ಕೋಟಿ ಜನಸಂಖ್ಯೆಯ ಹಿತಾಸಕ್ತಿ ಮತ್ತು ಹಣದುಬ್ಬರದ ಮೇಲೆ ತೈಲ ಬೆಲೆಯ ಪ್ರಭಾವವನ್ನು ಗಣನೆಗೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net