2025ರಲ್ಲಿ 14,000​! ಈಗ 16,000 ಉದ್ಯೋಗಿಗಳಿಗೆ ಗೇಟ್​ಪಾಸ್ ಕೊಡಲು ಅಮೇಜಾನ್​ ಸಜ್ಜು, ಕಾರಣ ಬಹಿರಂಗ ​| Amazon Layoffs

ಅಮೇಜಾನ್​ ವಜಾ ಪ್ರಕ್ರಿಯೆ
ಅಮೇಜಾನ್​ ವಜಾ ಪ್ರಕ್ರಿಯೆ
Published on
Amazon Layoffs: ಇ-ಕಾಮರ್ಸ್ ಪ್ರಮುಖ ಸಂಸ್ಥೆಯಾದ ಅಮೆಜಾನ್, 2025ರ ಆರಂಭದಲ್ಲೇ 14,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಟ್ರಿಲಿಯನ್ ಡಾಲರ್ ಕಂಪನಿಯು ಇದೀಗ ತನ್ನ ವೆಚ್ಚದಲ್ಲಿ ಉಳಿತಾಯ ಕಾಣುವ ಮಹತ್ವದ ಗುರಿಯನ್ನು ಹೊಂದಿದ್ದು, ಉದ್ಯೋಗಿಗಳಿಗೆ ಗುಡ್​ಬೈ ಹೇಳುವ ಪ್ರಕ್ರಿಯೆಯೇ ಇದಕ್ಕೆ ಉತ್ತಮ ಮಾರ್ಗ ಎಂಬುದನ್ನು ಕಂಡುಕೊಂಡಿದೆ ಎಂಬುದಕ್ಕೆ ಈಗಿನ 16 ಸಾವಿರ ಜಾಬ್​ ಕಟ್​ಆಫ್​ ನಿರ್ಧಾರವೇ ಜ್ವಲಂತ ಸಾಕ್ಷಿ. 

ಅಂದು 14 ಸಾವಿರ ಉದ್ಯೋಗಿಗಳಿಗೆ ಗೇಟ್​ಪಾಸ್​

2025ರ ಆರಂಭದಲ್ಲಿ 14 ಸಾವಿರ ಉದ್ಯೋಗಿಗಳಿಗೆ ಗೇಟ್​ಪಾಸ್​ ಕೊಟ್ಟಿದ್ದ ಟೆಕ್ ದೈತ್ಯ ಕಂಪನಿ ಅಮೇಜಾನ್​, 2026ರಲ್ಲಿ 16,000 ಮಂದಿಯನ್ನು ಕೆಲಸದಿಂದ ಕಿತ್ತುಬಿಸಾಡಲು ನಿರ್ಧರಿಸಿರುವುದು ನಿಜಕ್ಕೂ ಬೇಸರದ ಸಂಗತಿ.  ಈ ವಾರದಲ್ಲೇ ವಜಾಗೊಳಿಸುವ ಪ್ರಕ್ರಿಯೆಗೆ ಸಂಸ್ಥೆ ಸಜ್ಜಾಗಿದೆ. ಸಿಯಾಟಲ್‌ನಲ್ಲಿರುವ ಪ್ರಧಾನ ಕಚೇರಿಯು ಮಂಗಳವಾರ (ಜ.27) ಜಾಗತಿಕವಾಗಿ ಸುಮಾರು 16,000 ಉದ್ಯೋಗಿಗಳಿಗೆ ಗುಡ್​ಬೈ ಹೇಳಲಿದೆ.

ಭಾರತಕ್ಕೂ ತಟ್ಟಲಿದೆ ಲೇ-ಆಫ್ಸ್​ ಬಿಸಿ

ವರದಿಗಳ ಪ್ರಕಾರ, ಈ ವರ್ಷದ ಮಧ್ಯದೊಳಗೆ ಸುಮಾರು 30,000 ಕಾರ್ಪೊರೇಟ್ ಹುದ್ದೆಗಳನ್ನು ತೆಗೆದುಹಾಕುವ ಸಾಧ್ಯತೆಯಿದೆ ಎನ್ನಲಾಗಿದೆ. ಅಸಲಿಗೆ, 16 ಸಾವಿರ ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯ ಬಿಸಿ ಭಾರತಕ್ಕೂ ತಟ್ಟಲಿದೆ. ಈ ಲೇ-ಆಫ್ಸ್, ​ಅಮೆಜಾನ್ ವೆಬ್ ಸರ್ವೀಸಸ್ (AWS) ಮತ್ತು ಪ್ರೈಮ್ ವಿಡಿಯೋ ಸೇರಿ ಹಲವಾರು ಇಲಾಖೆಗಳಲ್ಲಿನ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಂತಹ ಮಹಾ ನಗರಗಳಲ್ಲಿ ನೆಲೆಸಿರುವ ಭಾರತೀಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. 

ಅಮೆಜಾನ್ ಸಿಇಒ ಮಾತು

ಇನ್ನು ವಜಾ ಪ್ರಕ್ರಿಯೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಜಾನ್ ಸಿಇಒ ಆ್ಯಂಡಿ ಜಾಸ್ಸಿ, "ಅಲ್ಪಾವಧಿಯ ವೆಚ್ಚ ಉಳಿತಾಯಕ್ಕಿಂತ ಬದಲಾವಣೆಯತ್ತ ಹೆಚ್ಚು ಗಮನಹರಿಸುತ್ತಿದ್ದೇವೆ. ಉದ್ಯೋಗ ಕಡಿತವು ಆರ್ಥಿಕತೆಯ ಕಾರಣದಿಂದ ಮಾಡುತ್ತಿಲ್ಲ. ಬದಲಿಗೆ ಕಂಪನಿಯ ಸಂಸ್ಕೃತಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ಉದ್ದೇಶದಿಂದ" ಎಂದು ಸಮರ್ಥಿಸಿಕೊಂಡಿದ್ದಾರೆ. ಆದ್ರೆ, ವಜಾಗೊಳಿಸುವಿಕೆಯ ಹಿಂದೆ ಎಐ ಟೆಕ್ನಾಲಜಿಯೇ ಮೂಲ ಕಾರಣ ಎಂಬುದಂತು ಇಲ್ಲಿ ಸ್ಪಷ್ಟ. 

ಎಐ ವಿರುದ್ಧ ಜನರು ಕಿಡಿ

ನಮಗೆ ಆಧುನಿಕ ಟೆಕ್ನಾಲಜಿಯ ಅವಶ್ಯ ಹಾಗೂ ಅಗತ್ಯವಿದೆ. ಆದರೆ, ಕೃತಕ ಬುದ್ಧಿಮತ್ತೆ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳುತ್ತಿದೆ. ನಮ್ಮ ಜನರಲ್ಲಿ ಕಣ್ಣೀರು ತರಿಸುವಂತ ಇಂತಹ ಎಐ ಸಂಪೂರ್ಣ ನಿಷ್ಪ್ರಯೋಜಕ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net