ಜೀವನ ನಾವು ಅಂದುಕೊಂಡಂತೆ ನಡೆಯುವುದಿಲ್ಲ... ಅವತ್ತು ಕ್ಲಾಸ್ ಟಾಪರ್, ಇವತ್ತು ರಾಪಿಡೋ ರೈಡರ್! | Rapido

Rapido
Rapido
Published on

ಪ್ರಮುಖ ಮುಖ್ಯಾಂಶಗಳು

  • "ಒಂದೇ ಬೆಂಚ್‌ನಲ್ಲಿ ಕೂತಿದ್ದ ಗೆಳೆಯರು.. ಒಬ್ಬ ಕಸ್ಟಮರ್, ಇನ್ನೊಬ್ಬ ರೈಡರ್; ಇದು ವಿಧಿಯ ಆಟ!"
  • "ರ್ಯಾಂಕ್ ಮುಖ್ಯವೋ ಅಥವಾ ಬದುಕು ಮುಖ್ಯವೋ? ಹಳೆಯ ಗೆಳೆಯರ ಈ ಭೇಟಿ ಕಣ್ಣಾಲಿ ತುಂಬಿಸುತ್ತೆ."
  • "ನಾವು ಅಂದುಕೊಂಡಂತೆ ಬದುಕು ಸಾಗಲ್ಲ.. 'ಕ್ಲಾಸ್ ಟಾಪರ್' ಕೈಯಲ್ಲಿ ರಾಪಿಡೋ ಹ್ಯಾಂಡಲ್!"
ಬೆಂಗಳೂರು: ನಾವಂದುಕೊಂಡಂತೆ ಬದುಕು ಸಾಗುವುದಿಲ್ಲ ಎಂಬ ಮಾತಿಗೆ ಸಾಕ್ಷಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಅಪರೂಪದ ಕಥೆ ವೈರಲ್ ಆಗುತ್ತಿದೆ. ಅವಸರದಲ್ಲಿ ರಾಪಿಡೋ (Rapido) ಬುಕ್ ಮಾಡಿದ ವ್ಯಕ್ತಿಗೆ, ತನ್ನ ಶಾಲಾ ದಿನಗಳ 'ಕ್ಲಾಸ್ ಟಾಪರ್' ರೈಡರ್ ಆಗಿ ಸಿಕ್ಕಿದ ಘಟನೆ ಈಗ ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸುತ್ತಿದೆ.
ಹೌದು.. ಉಮರ್ ಎಂಬ ಯುವಕ ತಡವಾಗುತ್ತಿದೆ ಎಂಬ ಕಾರಣಕ್ಕೆ ಆತುರದಲ್ಲಿ ರಾಪಿಡೋ ಬೈಕ್ ಬುಕ್ ಮಾಡಿದ್ದನು. ಬುಕ್ಕಿಂಗ್ ವಿವರಗಳಲ್ಲಿ ರೈಡರ್ ಹೆಸರು 'ಚಂದನ್' ಎಂದು ಕಂಡಾಗ ಉಮರ್ ಗೆ ಒಂದು ಕ್ಷಣ ಹಳೆಯ ನೆನಪು ಮರುಕಳಿಸಿತು. ತನ್ನ ಶಾಲೆಯಲ್ಲಿ ಸದಾ ಮೊದಲ ಸ್ಥಾನದಲ್ಲಿರುತ್ತಿದ್ದ ಚಂದನ್ ಇವನೇ ಇರಬಹುದೇ ಎಂಬ ಕುತೂಹಲ ಮೂಡಿತು. ಬೈಕ್ ಹತ್ತಿರ ಬಂದಾಗ ಉಮರ್ ಗೆ ಅಚ್ಚರಿ ಕಾಯುತ್ತಿತ್ತು. ಅದು ನಿಜಕ್ಕೂ ಅದೇ ಚಂದನ್ ಆಗಿದ್ದನು!
ಬೈಕ್ ಏರುತ್ತಿದ್ದಂತೆ ಉಮರ್ ತಮಾಷೆಯಾಗಿ "ಹೇ ರಾಪಿಡೋ ಭಯ್ಯಾ!" ಎಂದು ಕರೆದಾಗ, ಚಂದನ್ ನಗುತ್ತಲೇ "ಮೊದಲು ಒಟಿಪಿ (OTP) ಹೇಳು" ಎಂದು ಉತ್ತರಿಸಿದನು. ಪ್ರಯಾಣದ ಅವಧಿಯಲ್ಲಿ ಉಮರ್, "ನೀನು ಯಾವಾಗ ಈ ಕೆಲಸ ಆರಂಭಿಸಿದೆ?" ಎಂದು ಕೇಳಿದಾಗ, ಚಂದನ್ ನೀಡಿದ ಉತ್ತರ ಬದುಕಿನ ಪಾಠದಂತಿತ್ತು. "ಜೀವನ ನಾವು ಅಂದುಕೊಂಡಂತೆ ನಡೆಯುವುದಿಲ್ಲ, ಆದರೆ ನಾನು ಚೆನ್ನಾಗಿದ್ದೇನೆ. ಹಳೆಯ ಗೆಳೆಯನಿಂದ ನಾನು ಹಣ ಪಡೆಯುವುದಿಲ್ಲ" ಎಂದು ಚಂದನ್ ಹಾಸ್ಯ ಚಟಾಕಿ ಹಾರಿಸಿದನು.

ಅಂಕಗಳಿಗಿಂತ ಜೀವನ ದೊಡ್ಡದು

ಒಂದಾನೊಂದು ಕಾಲದಲ್ಲಿ ಇಡೀ ಕ್ಲಾಸ್‌ಗೆ ಟಾಪರ್ ಆಗಿದ್ದ ವಿದ್ಯಾರ್ಥಿ ಇಂದು ಬೈಕ್ ರೈಡರ್ ಆಗಿರುವುದನ್ನು ಕಂಡು ಉಮರ್ ಭಾವುಕನಾದನು. ಇದಕ್ಕೆ ಪ್ರತಿಕ್ರಿಯಿಸಿದ ಚಂದನ್, "ಬದುಕು ಅನಿರೀಕ್ಷಿತ, ನನ್ನ ಕ್ಲಾಸ್‌ಮೇಟ್ ನನ್ನ ಗ್ರಾಹಕನಾಗಿ ಸಿಗುತ್ತಾನೆ ಎಂದು ನಾನು ಎಂದು ಊಹಿಸಿರಲಿಲ್ಲ" ಎಂದು ಬದುಕಿನ ಏರಿಳಿತಗಳನ್ನು ಮೆಲುಕು ಹಾಕಿದನು.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

'ಭಾರತ್ ಮಾತಾ ಕೆ ಸೇವಕ್' ಎಂಬ ಎಕ್ಸ್ (X) ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಕಥೆ ಈಗ ಸಾವಿರಾರು ಜನರ ಮನ ಗೆದ್ದಿದೆ. "ಕೇವಲ ಪರೀಕ್ಷೆಯ ಅಂಕಗಳು ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಪ್ರಾಮಾಣಿಕವಾಗಿ ಮಾಡುವ ಯಾವುದೇ ಕೆಲಸವೂ ಗೌರವಕ್ಕೆ ಅರ್ಹ" ಎಂಬ ಸಂದೇಶವನ್ನು ಈ ಘಟನೆ ಸಾರುತ್ತಿದೆ. ಅನೇಕರು ತಮ್ಮದೇ ಜೀವನದ ಇಂತಹ ಕಹಿ ನೆನಪುಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net