ಡಿಎಂಕೆ-ಕಾಂಗ್ರೆಸ್ ಮೈತ್ರಿ ಗಟ್ಟಿಯಾಗಿದೆ... ಬಿರುಕಿನ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟ ಕೈ ನಾಯಕ ಸೆಲ್ವಪೆರುಂತಗೈ | Congress-DMK Alliance

Congress-DMK Alliance | ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಮತ್ತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
Congress-DMK Alliance | ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಮತ್ತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
Published on
ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) (Congress-DMK Alliance) ನಡುವಿನ ಸೀಟು ಹಂಚಿಕೆ ಮಾತುಕತೆಗಳು ಮುರಿದುಬಿದ್ದಿವೆ ಎಂದು ವರದಿಗಳನ್ನು ರಾಜ್ಯದ ಕಾಂಗ್ರೆಸ್​ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ತಳ್ಳಿ ಹಾಕಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೆಲ್ವಪೆರುಂಥಗೈ, ಮೈತ್ರಿಕೂಟ ಸುಗಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂಡಿಯಾ ಒಕ್ಕೂಟದಲ್ಲಿ ಯಾವುದೇ ರೀತಿಯ ಬಿರುಕುಗಳಿಲ್ಲ ಎಂದು ಹೇಳಿದರು.
ಚುನಾವಣೆಯ ವಿಷಯವಾಗಿ ಡಿಎಂಕೆ ಜೊತೆ ಪಕ್ಷದ ನಾಯಕರು ಮಾತುಕತೆ ನಡೆಸಿದ್ದಾರೆ ಮತ್ತು ಕಾಂಗ್ರೆಸ್ ಕೇಳಿರುವ ಸ್ಥಾನಗಳನ್ನು ನೀಡುತ್ತಾರೆ ಎಂಬ ವಿಶ್ವಾಸವಿದ್ದು, ಈ ಕುರಿತಾದ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಇತರ ಹಿರಿಯ ನಾಯಕರು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನ ಮೈತ್ರಿ ಸಂದಿಗ್ಧತೆ

ಡಿಎಂಕೆ ಜೊತೆಗಿನ ಮೈತ್ರಿಯನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ನಾಯಕರ ಒಂದು ವರ್ಗವು ಹಿರಿಯ ನಾಯಕರನ್ನು ಒತ್ತಾಯಿಸಿದೆ. ನಟ ವಿಜಯ್​ರ ಟಿವಿಕೆ ಜೊತೆ ಪಕ್ಷ ಮೈತ್ರಿ ಮಾಡಿಕೊಳ್ಳಬೇಕೆನ್ನುವುದು ಕೆಲವರ ವಾದವಾಗಿದೆ. ಇತ್ತ ತಮಿಳುನಾಡಿನ ಸ್ಕ್ರೀನಿಂಗ್ ಸಮಿತಿಯ ಪಕ್ಷದ ಅಧ್ಯಕ್ಷರಾಗಿರುವ ಟಿಎಸ್ ಸಿಂಗ್ ಡಿಯೋ ಸೇರಿದಂತೆ ಹಿರಿಯ ನಾಯಕರು , ಡಿಎಂಕೆ ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಮುಂದುವರಿಸುತ್ತದೆ ಮತ್ತು ಅವರ ನಡುವೆ ಯಾವುದೇ ಬಿರುಕುಗಳಿಲ್ಲ ಎಂದು ಹೇಳಿದ್ದಾರೆ.
2021 ರ ವಿಧಾನಸಭಾ ಚುನಾವಣೆಯಲ್ಲಿ, ಡಿಎಂಕೆ ಕಾಂಗ್ರೆಸ್‌ಗೆ 25 ಸ್ಥಾನಗಳನ್ನು ನೀಡಿತು. ಈ ಪೈಕಿ ಪಕ್ಷವು 18 ಸ್ಥಾನಗಳಲ್ಲಿ ಜಯಗಳಿಸಿತ್ತು. ಡಿಎಂಕೆ 188 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 133 ಕ್ಷೇತ್ರಗಳಲ್ಲಿ ಗೆದ್ದಿತ್ತು.

ಕಾಂಗ್ರೆಸ್, ಡಿಎಂಕೆ ವಿರುದ್ಧ ಬಿಜೆಪಿ ವಾಗ್ದಾಳಿ

ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದು, ಐದು ವರ್ಷಗಳ ಕಾಲ ಒಟ್ಟಿಗೆ ಅಧಿಕಾರದಲ್ಲಿದ್ದರೂ ಸೀಟು ಹಂಚಿಕೆಗೆ ಇಂಡಿಯಾ ಒಕ್ಕೂಟ ಏಕೆ ಹಿಂಜರಿಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net