ದೇಣಿಗೆ ಕಳ್ಳತನ ಆರೋಪ: ಚಂಪತ್ ರಾಯ್ ರಾಜೀನಾಮೆ ಅಂಗೀಕರಿಸಿದ ರಾಮಮಂದಿರ ಟ್ರಸ್ಟ್: ಭಜರಂಗ್ ಭಾಗ್ರಾ ಉತ್ತರಾಧಿಕಾರಿ | Ram Mandir Trust

ಚಂಪತ್ ರಾಯ್
ಚಂಪತ್ ರಾಯ್
Published on
ಲಖನೌ: ದೇಣಿಗೆ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಇಂದು(ಜು. 06) ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ(Ram Mandir Trust) ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ರಾಜೀನಾಮೆಯನ್ನು ಟ್ರಸ್ಟ್ ಅಂಗೀಕರಿಸಿದ್ದು, ಅವರ ಉತ್ತರಾಧಿಕಾರಿಯಾಗಿ ಭಜರಂಗ್ ಬಾಗ್ರಾ ಅವರನ್ನು ನೇಮಿಸಿದೆ ಎಂದು ವರದಿಯಾಗಿದೆ.
2020ರಲ್ಲಿ ರಚನೆಯಾದ ಬಳಿಕ ಶ್ರೀರಾಮ ಮಂದಿರ ಟ್ರಸ್ಟ್ ಇಂದು ಅತ್ಯಂತ ಮಹತ್ವದ ಸಭೆ ನಡೆಸಿದೆ. ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್, ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಸೇರಿದಂತೆ ಹಿರಿಯ ಟ್ರಸ್ಟಿಗಳು, ಸರ್ಕಾರಿ ಪ್ರತಿನಿಧಿಗಳು ಮತ್ತು ಕಾನೂನು ತಜ್ಞರು ಸಭಯಲ್ಲಿ ಭಾಗವಹಿಸಿದ್ದರು. ಆಪಾದಿತ ದೇಣಿಗೆ ಕಳ್ಳತನ, ಆಡಳಿತ ಸುಧಾರಣೆಗಳು ಮತ್ತು ದೇವಾಲಯದ ಭವಿಷ್ಯದ ನಿರ್ವಹಣೆಯ ಕುರಿತು ಚರ್ಚೆ ನಡೆಸಿದೆ.
ದೇಣಿಗೆ ಕಳ್ಳತನ ಆರೋಪ ಬಯಲಿಗೆ ಬರುತ್ತಿದ್ದಂತೆ ಜೂ. 26ರಂದು ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಕೂಡ ರಾಜೀನಾಮೆ ನೀಡಿದ್ದರು. ಭಕ್ತರು ದಾನ ಮಾಡಿದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ ರಾಯ್ ಅವರ ಚಾಲಕ ಟಿನ್ನು ಯಾದವ್ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇನ್ನೂ ಕಳ್ಳತನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು ಎಸ್​ಐಟಿ ಚಂಪತ್ ರಾಯ್ ಮತ್ತು ಮಿಶ್ರಾ ಅವರನ್ನು ಪ್ರಶ್ನಿಸಿದ್ದು, ಅವರಿಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಆದರೆ ಅವರಿಬ್ಬರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಕ್ರಿಮಿನಲ್ ಪ್ರಕರಣ ದಾಖಲಿಸಿಲ್ಲ.

ಭಜರಂಗ್ ಬಾಗ್ರಾ ಅಧಿಕಾರ ಸ್ವೀಕಾರ

ಚಂಪತ್​ ರಾಯ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ ಬಳಿಕ ಟ್ರಸ್ಟ್​, ಭಜರಂಗ್ ಬಾಗ್ರಾ ಅವರನ್ನು ತನ್ನ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದೆ. ವಿಶ್ವ ಹಿಂದೂ ಪರಿಷತ್​​​ನ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಬಾಗ್ರಾ, ದೇಣಿಗೆ ನಿರ್ವಹಣೆ ಮತ್ತು ಆಡಳಿತದ ಬಗ್ಗೆ ಸಾರ್ವಜನಿಕರ ತೀವ್ರ ಟೀಕೆಯನ್ನು ಎದುರಿಸುತ್ತಿರುವ ಸಮಯದಲ್ಲಿ ಟ್ರಸ್ಟ್‌ನ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net