ಬದರಿನಾಥ ದೇವಸ್ಥಾನದಲ್ಲೂ ದೇಣಿಗೆ ಕಳ್ಳತನ ಆರೋಪ; ಅಮಾನತುಗೊಂಡ ಬಿಕೆಟಿಸಿ ಉದ್ಯೋಗಿ ವಿರುದ್ಧ ಎಫ್​ಐಆರ್ | Badrinath Temple

ಬದರಿನಾಥ ದೇವಾಲಯ
ಬದರಿನಾಥ ದೇವಾಲಯ
Published on
Badrinath Temple: ಉತ್ತರಾಖಂಡ್​ದ ಬದರಿನಾಥ ದೇವಾಲಯದಲ್ಲೂ ದೇಣಿಗೆ ಕಳ್ಳತನವಾಗಿ ಎಂದು ಆರೋಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ(ಬಿಕೆಟಿಸಿ) ಅಮಾನತುಗೊಂಡ ಉದ್ಯೋಗಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬುಧವಾರ(ಜು. 08) ವರದಿಯಾಗಿದೆ.
ಬಿಕೆಟಿಸಿ ಅಧ್ಯಕ್ಷರ ಖಾಸಗಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪ್ರಮೋದ್ ನೌಟಿಯಾಲ್ ವಿರುದ್ಧ ಮಂಗಳವಾರ ತಡರಾತ್ರಿ ಬದರಿನಾಥ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎನ್​ಎಸ್​ ಸೆಕ್ಷನ್ 306 (ಗುಮಾಲೀಕ ಅಥವಾ ಸೇವಕನಿಂದ ಉದ್ಯೋಗದಾತರ ವಶದಲ್ಲಿರುವ ಆಸ್ತಿಯ ಕಳ್ಳತನ) ಮತ್ತು 316(5) (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎನ್ನಲಾಗಿದೆ. 
ದೇವಾಲಯ ಸಮಿತಿಯು ರಚಿಸಿದ್ದ ನಾಲ್ವರು ಸದಸ್ಯರ ತನಿಖಾ ಸಮಿತಿಯು ದೇವಾಲಯದ ದೇಣಿಗೆ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬುದಕ್ಕೆ ಪ್ರಾಥಮಿಕ ಪುರಾವೆಗಳನ್ನು ಪತ್ತೆ ಹಚ್ಚಿದ ಬಳಿಕ ಅದೇ, ನೌಟಿಯಾಲ್ ಅವರನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿತ್ತು.
ಬದರಿನಾಥ ದೇವಾಲಯದಲ್ಲಿ ದೇಣಿಗೆ ಎಣಿಕೆಯ ಸಮಯದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ನಂತರ ವಿವಾದ ಭುಗಿಲೆದ್ದಿತು. ಭೈರವ ಸೇನಾ ಎಂಬ ಗುಂಪು ನಂತರ ದೂರು ದಾಖಲಿಸಿ, ತನಿಖೆ ನಡೆಸಿ ಎಫ್‌ಐಆರ್ ದಾಖಲಿಸುವಂತೆ ಕೋರಿತು.  ಆರೋಪಗಳ ತನಿಖೆಗಾಗಿ ಉತ್ತರಾಖಂಡ ಸರ್ಕಾರವು ಪ್ರತ್ಯೇಕವಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. 15 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. 
ಬಿಕೆಟಿಸಿ ಉತ್ತರಾಖಂಡದಲ್ಲಿರುವ ಬದರಿನಾಥ ದೇವಸ್ಥಾನ ಮತ್ತು ಇತರ ಹಲವಾರು ದೇವಾಲಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಶಾಸನಬದ್ಧ ಸಂಸ್ಥೆಯಾಗಿದೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net