ನಮ್ಮ ನಡುವೆ ಈಗ ಎಲ್ಲವೂ ಸರಿ ಇದೆ!.. ಇಪಿಎಸ್ ಭೇಟಿ ಬಳಿಕ ಒಗ್ಗಟ್ಟಿನ ಮಂತ್ರ ಜಪಿಸಿದ ಮಾಜಿ ಸಚಿವ ವೇಲುಮಣಿ ತಂಡ | AIADMK Crisis

AIADMK Crisis |  ಎಐಎಡಿಎಂಕೆಯಲ್ಲಿ ಕೊನೆಗೂ ಮುಗಿಯಿತು ಹೈಡ್ರಾಮಾ (ಸಂಗ್ರಹ ಚಿತ್ರ)
AIADMK Crisis | ಎಐಎಡಿಎಂಕೆಯಲ್ಲಿ ಕೊನೆಗೂ ಮುಗಿಯಿತು ಹೈಡ್ರಾಮಾ (ಸಂಗ್ರಹ ಚಿತ್ರ)
Published on
ಚೆನ್ನೈ: ತಮಿಳುನಾಡಿನ ಪ್ರತಿಪಕ್ಷವಾದ ಎಐಎಡಿಎಂಕೆಯಲ್ಲಿ ತೀವ್ರಗೊಂಡಿದ್ದ ಭಿನ್ನಮತ ಕೊನೆಗೂ (AIADMK Crisis) ಶಮನಗೊಂಡಿದ್ದು, ಬಂಡಾಯ ಎದ್ದಿದ್ದ ಮಾಜಿ ಸಚಿವ ಎಸ್.ಪಿ. ವೇಲುಮಣಿ ನೇತೃತ್ವದ ಶಾಸಕರ ತಂಡ ಮಾಜಿ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸಭೆಯ ಬಳಿಕ ಜಂಟಿ ಹೇಳಿಕೆ ನೀಡಿರುವ ವೇಲುಮಣಿ ಬಣ, ಪಕ್ಷದಲ್ಲಿ ಕೇವಲ ಸಣ್ಣ ವೈಚಾರಿಕ ಭಿನ್ನಾಭಿಪ್ರಾಯಗಳು ಮಾತ್ರ ಇದ್ದು, ಯಾವುದೇ ಬಿರುಕು ಉಂಟಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಪ್ರಮುಖ ಸಭೆಯಲ್ಲಿ ಹಿರಿಯ ನಾಯಕ ಸಿ.ವಿ. ಷಣ್ಮುಗಂ ಎಲ್ಲೂ ಕಾಣಿಸಿಕೊಳ್ಳದಿದ್ದರೂ, ವೇಲುಮಣಿ, ಷಣ್ಮುಗಂ ಸಹ ತಮ್ಮ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಎಂದು ಒತ್ತಿ ಹೇಳಿದರು. ಇಪಿಎಸ್ ಭೇಟಿಗೂ ಮುನ್ನ ತಾವು ಷಣ್ಮುಗಂ ಕಚೇರಿಯಿಂದಲೇ ಬಂದಿರುವುದಾಗಿ ತಿಳಿಸಿದ ಅವರು, ತಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.
ವೇಲುಮಣಿ ಅವರೊಂದಿಗೆ ಹಿರಿಯ ನಾಯಕ ಕೆ ಸಿ ವೀರಮಣಿ ಸೇರಿದಂತೆ ಸುಮಾರು 13 ಶಾಸಕರು ಈ ಮಾತುಕತೆಯಲ್ಲಿ ಭಾಗವಹಿಸಿದ್ದು, ಮಾಜಿ ಸಚಿವ ಡಿ. ಜಯಕುಮಾರ್ ಈ ವೇಳೆ ಗೈರಾಗಿದ್ದರು ಎನ್ನಲಾಗಿದೆ.

ಪರಸ್ಪರ ಅರ್ಜಿಗಳನ್ನು ಹಿಂಪಡೆದ ಉಭಯ ಬಣಗಳು

ಇಪಿಎಸ್ ಅವರೊಂದಿಗೆ ಯಶಸ್ವಿ ಮಾತುಕತೆ ನಡೆಸಿದ ಬೆನ್ನಲ್ಲೇ, ಮಾಜಿ ಸಚಿವ ಎಸ್.ಪಿ. ವೇಲುಮಣಿ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರನ್ನು ಭೇಟಿಯಾದರು. ಎಐಎಡಿಎಂಕೆ ಶಾಸಕಾಂಗ ಪಕ್ಷಕ್ಕೆ ಹೊಸ ನಾಯಕ ಹಾಗೂ ಹೊಸ ಚೀಫ್ ವಿಪ್​ರನ್ನು (ಮುಖ್ಯ ಸಚೇತಕ) ನೇಮಿಸಬೇಕೆಂದು ಬಂಡಾಯ ಶಾಸಕರು ನೀಡಿದ್ದ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಮತ್ತು ಅವರನ್ನು ಅನರ್ಹಗೊಳಿಸಬೇಕು ಎಂದು ಇಪಿಎಸ್ ನೇತೃತ್ವದ ಅಧಿಕೃತ ಬಣ ನೀಡಿದ್ದ ದೂರನ್ನು ಸಹ ಹಿಂಪಡೆಯಲಾಯಿತು. ಉಭಯ ಬಣಗಳಾದ ಎಸ್.ಎಸ್. ಕೃಷ್ಣಮೂರ್ತಿ ಕಡೆಯವರು ಹಾಗೂ 22 ಬಂಡಾಯ ಶಾಸಕರ ತಂಡ ನೀಡಿದ್ದ ದೂರುಗಳನ್ನು ಪರಸ್ಪರ ಹಿಂತೆಗೆದುಕೊಳ್ಳಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಪ್ರಭಾಕರ್, ಎರಡೂ ಕಡೆಯಿಂದ ಅರ್ಜಿಗಳು ಲಭ್ಯವಾಗಿದ್ದು, ಇವುಗಳನ್ನು ಪರಿಶೀಲಿಸಿ ಗುರುವಾರದಂದು ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಬಿರುಕಿನ ಆರೋಪ ತಳ್ಳಿಹಾಕಿದ ವೇಲುಮಣಿ

ಕೊಯಮತ್ತೂರು ಭಾಗದ ಎಐಎಡಿಎಂಕೆ ಪ್ರಭಾವಿ ನಾಯಕರಾಗಿರುವ ಎಸ್ ಪಿ ವೇಲುಮಣಿ, ತಾವೇ ಮುಂಚೂಣಿಯಲ್ಲಿ ನಿಂತು ಪಕ್ಷವನ್ನು ಒಡೆಯಲು ಸಂಚು ರೂಪಿಸಿದ್ದರು ಎಂಬ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಮೇ 13 ರಂದು ನಡೆದ ವಿಶ್ವಾಸಮತ ಯಾಚನೆ ವೇಳೆ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ತಮ್ಮ ಬಣ ಬೆಂಬಲ ನೀಡಿದ್ದು ನಿಜ. ಆದರೆ, ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಅಥವಾ ಯಾವುದೇ ಅಧಿಕಾರದ ಆಸೆಗೆ ಬಿದ್ದು ಈ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಇಪಿಎಸ್ ಬೆಂಬಲಿಗರ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಭಿನ್ನಮತಕ್ಕೆ ಅಸಲಿ ಕಾರಣವೇನು..?

ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಭಾರಿ ಹಿನ್ನಡೆ ಅನುಭವಿಸಿತ್ತು. ಈ ಚುನಾವಣಾ ಸೋಲಿನ ಕಾರಣಗಳನ್ನು ಪರಾಮರ್ಶಿಸಲು ತಕ್ಷಣವೇ ಸಭೆ ಕರೆಯಬೇಕೆಂದು ಹಲವು ಹಿರಿಯ ನಾಯಕರು ಒತ್ತಾಯಿಸಿದ್ದರು. ಆದರೆ ಅದಕ್ಕೆ ಸಕಾಲದಲ್ಲಿ ಸ್ಪಂದನೆ ಸಿಗದ ಕಾರಣ, ಅಸಮಾಧಾನಗೊಂಡು ಕೆಲವು ಶಾಸಕರು ವಿಧಾನಸಭೆಯಲ್ಲಿ ಟಿವಿಕೆ ಸರ್ಕಾರವನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದರು ಎಂದು ವೇಲುಮಣಿ ವಿವರಿಸಿದ್ದಾರೆ.
ಈಗ ಪಕ್ಷದ ಒಳಿತಿಗಾಗಿ ಹಂತ ಹಂತವಾಗಿ ಚುನಾವಣಾ ಪ್ರದರ್ಶನದ ಪರಾಮರ್ಶೆ ನಡೆಸಲು ಮತ್ತು ಸೋಲಿನ ಕಾರಣಗಳನ್ನು ಹುಡುಕಲು ಎಡಪ್ಪಾಡಿ ಪಳನಿಸ್ವಾಮಿ ಒಪ್ಪಿಕೊಂಡಿದ್ದಾರೆ ಎಂದು ವೇಲುಮಣಿ ತಿಳಿಸಿದ್ದು, ನಾವೆಲ್ಲರೂ ಎಐಎಡಿಎಂಕೆಯಲ್ಲೇ ಇದ್ದೇವೆ. ನಮ್ಮ ಪ್ರಧಾನ ಕಾರ್ಯದರ್ಶಿಯವರ ಕರೆಗೆ ಓಗೊಟ್ಟು, ಪಕ್ಷವು ಇನ್ಮುಂದೆ ಅತ್ಯಂತ ಬಲಿಷ್ಠ ಮತ್ತು ಒಗ್ಗಟ್ಟಿನ ಶಕ್ತಿಯಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net