ಕಣ್ಣರಿಯದಿದ್ದರೂ ಕರುಳರಿತಿತ್ತು ವಿಧಿಲೀಲೆ...ಮಾತೆಯ ಮನಸ್ಸಿಗೆ ಮೊದಲೇ ತಟ್ಟಿತ್ತೇ ಅನಿಷ್ಟದ ಸುಳಿವು..?; ಸಿಬ್ಬಂದಿ ಹೇಳಿದ್ದೇನು..? | Ajit Pawar Mother

Ajit Pawar Mother |  ಡಿಸಿಎಂ ಅಜಿತ್ ಪವಾರ್ ಮತ್ತು ಅವರ ತಾಯಿ ಆಶಾ
Ajit Pawar Mother | ಡಿಸಿಎಂ ಅಜಿತ್ ಪವಾರ್ ಮತ್ತು ಅವರ ತಾಯಿ ಆಶಾ
Published on
ಪುಣೆ: ನಿನ್ನೆ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದು, ಅವರ ಅಗಲಿಕೆಯಿಂದಾಗಿ ಇಡೀ ದೇಶವೇ ಆಘಾತದಲ್ಲಿದೆ. ಈ ನಡುವೆ ಅಜಿತ್​ ದಾದಾ ಮನೆಯ ಸಿಬ್ಬಂದಿ ಬಹಿರಂಗಪಡಿಸಿರುವ ವಿಷಯವೊಂದು ಸದ್ಯ ಎಲ್ಲರೂ ಭಾವುಕರಾಗುವಂತೆ ಮಾಡಿದೆ.
ಅಜಿತ್​​ ಪವಾರ್​ ಅಗಲಿಕೆ ರಾಜಕೀಯ ನಷ್ಟ ಮಾತ್ರವಲ್ಲದೆ, ಒಂದು ಕುಟುಂಬದ ಪಾಲಿಗೆ ಭರಿಸಲಾಗದ ವೇದನೆ. ಅದರಲ್ಲೂ ಮಗನ ಸಾವಿನ ಸುದ್ದಿಯನ್ನು ಕೇಳಿ ಜನ್ಮ ಕೊಟ್ಟವಳ ಜೀವ ಅನುಭವಿಸುವ ನೋವು ಬೇರೆ ಯಾವ ಪೋಷಕರಿಗೂ ಬರದಿರಲಿ. ಅಜಿತ್ ದಾದಾ ತಾಯಿ ಆಶಾ ಅವರಿಗೆ ಈ ಕಹಿ ಸುದ್ದಿಯನ್ನು ತಲುಪಿಸದಂತೆ ತಡೆಯಲು ಮನೆಯ ಕೆಲಸದ ಸಿಬ್ಬಂದಿ ನಡೆಸಿದ ಪ್ರಯತ್ನಗಳು ಈಗ ಎಲ್ಲರನ್ನು ಭಾವುಕತೆಗೆ ದೂಡಿದೆ.
ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನವು ಲ್ಯಾಂಡಿಂಗ್​ ಆಗುವ ವೇಳೆ ಟೇಬಲ್‌ಟಾಪ್ ರನ್‌ವೇಯ ಅಂಚಿನಿಂದ ಕೇವಲ 100 ಮೀಟರ್ ದೂರದಲ್ಲಿ ಪತನಗೊಂಡು ಪವಾರ್ (66) ಮತ್ತು ಅದರಲ್ಲಿದ್ದ ಇತರ ನಾಲ್ವರು ಸಾವನ್ನಪ್ಪಿದ್ದಾರೆ. ಈ ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಇಡೀ ಮಹಾರಾಷ್ಟ್ರಕ್ಕೆ ದಿಗಿಲು ಬಡಿಯಿತು, ಅದು ಬಾರಾಮತಿಯಲ್ಲಿರುವ ಅಜಿತ್​ ಪವಾರ್​ ನಿವಾಸಕ್ಕೆ ತಲುಪಿದಾಗ ಅಲ್ಲಿನ ಸಿಬ್ಬಂದಿ ಮತ್ತು ಕುಟುಂಬಸ್ಥರ ಮುಂದಿದ್ದ ದೊಡ್ಡ ಸವಾಲೆಂದರೆ ಈ ವಿಷಯವನ್ನು ದಾದಾರ ವಯಸ್ಸಾದ ತಾಯಿಗೆ ಹೇಗೆ ತಿಳಿಸುವುದು ಎಂಬುದು.
ಅಪಘಾತದ ಸುದ್ದಿ ಅಧಿಕೃತವಾಗಿ ಹೊರಬೀಳುವ ಮೊದಲೇ ಆಶಾತಾಯಿ ಅವರಿಗೆ ಏನೋ ಕೆಟ್ಟದ್ದಾಗುತ್ತಿದೆ ಎಂಬ ಸುಳಿವು ಸಿಕ್ಕಿತ್ತಂತೆ, ತಾಯಿಯ ಕರುಳಿಗೆ ಮಗನಿಗಾಗುವ ಸಂಕಷ್ಟದ ಮುನ್ಸೂಚನೆ ಸಿಗುವುದು ಪ್ರಕೃತಿ ಸಹಜ. ಅವರು ಅಂದು ಬೆಳಿಗ್ಗೆಯಿಂದಲೇ ಅತ್ಯಂತ ಚಡಪಡಿಕೆಯಲ್ಲಿದ್ದರು ಎನ್ನಲಾಗಿದೆ.

ಕೆಲಸದ ಸಿಬ್ಬಂದಿ ಹೇಳಿದ್ದೇನು..?

ಬಾರಾಮತಿಯ ಕಟೇವಾಡಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿದ್ದ ಪವಾರ್​ ತಾಯಿ ಆಶಾ ಎಂದಿನಂತೆ ವಾರ್ತೆಗಳನ್ನು ನೋಡುತ್ತಿದ್ದರು, ಈ ಸಮಯದಲ್ಲಿ ಅಜಿತ್ ಪವಾರ್ ಗಾಯಗೊಂಡಿದ್ದಾರೆ ಎಂಬ ಸುದ್ದಿಯನ್ನು ಅವರ ಗಮನಕ್ಕೆ ಬಂದಿದೆ. ಈ ವೇಳೆ ಅಲ್ಲಿದ್ದ ಮನೆಯ ಕೆಲಸದ ಸಿಬ್ಬಂದಿ ವಿಠ್ಠಲ್, ದಾದಾಗೆ ಏನೂ ಆಗಿಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿ ಕೇಳಿ ಪವಾರ್​ ತಾಯಿ ಆಶಾ ಅವರಿಗೆ ಆಘಾತವಾಗಬಹುದೆಂದು ಯೋಚಿಸಿದ ವಿಠ್ಠಲ್, ಟಿವಿ ವೈರ್ ಕಡಿತಗೊಳಿಸಿ ಸುದ್ದಿ ಪ್ರಸಾರವಾಗುವುದನ್ನು ನಿಲ್ಲಿಸಿದರು, ಅವರ ಮೊಬೈಲ್ ಫೋನ್ ಫ್ಲೈಟ್‌ ಮೋಡ್‌ಗೆ ಹಾಕಿದರು, ತಾಯಿಯ ಮನಸ್ಸಲ್ಲಿ ದುಗುಡ ಮನೆಮಾಡಿತ್ತು, ಇತ್ತ ವಿಠ್ಠಲ್ ಏನೂ ಆಗಿಲ್ಲ ಎಂದು ಧೈರ್ಯ ತುಂಬುತ್ತಿದ್ದರಂತೆ. ಅಜಿತ್​​ ದಾದಾ ಚೆನ್ನಾಗಿದ್ದಾರೆ, ಅವರಿಗೆ ಸ್ವಲ್ಪ ಗಾಯವಾಗಿರಬೇಕು ಎಂದು ಆಶಾತಾಯಿಗೆ ಮನವರಿಕೆ ಮಾಡಿಸಿದರು ಸಮಾಧಾನಗೊಳ್ಳದ ತಾಯಿಯ ಮನಸ್ಸು ಮಗನನ್ನು ಕಾಣಲು ಹಂಬಲಿಸುತ್ತಲೇ ಇತ್ತು. ಕೊನೆಯಲ್ಲಿ ಅವರು ಬಾರಾಮತಿಗೆ ಹೋಗಬೇಕೆಂದು ನಿರ್ಧರಿಸಿದ್ದರು ಎನ್ನಲಾಗಿದೆ.
ಆಸ್ಪತ್ರೆಗೆ ಹೋಗಿ ದಾದಾರನ್ನು ನೋಡಿಕೊಂಡು ಬರಬೇಕೆಂದು ಆಶಾತಾಯಿ ಹಠ ಹಿಡಿಯುತ್ತಾರೆ, ಕಾರಿನಲ್ಲಿ ಸಮಸ್ಯೆ ಇದೆ ಎಂಬ ವಿಠ್ಠಲ್​ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ ಪವಾರ್​ ತಾಯಿ ಇರಲಿಲ್ಲ, ಅಂತಿಮವಾಗಿ ಅವರನ್ನು ಬಾರಾಮತಿಗೆ ಕರೆದೊಯ್ದರು. ಆ ಸಮಯದಲ್ಲಿ, ಅಜಿತ್ ಪವಾರ್ ನಿಧನರಾದರು ಎಂದು ತಿಳಿಯಿತು. ಅವರು ಆಘಾತಗೊಂಡರು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಅಜಿತ್ ಪವಾರ್ ತಮ್ಮ ತಾಯಿಯನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು, ಅವರ ಆರೋಗ್ಯ ವಿಚಾರಿಸುತ್ತಿದ್ದರು, ಕಟೇವಾಡಿಯಲ್ಲಿರುವ ತೋಟದ ಮನೆಯಲ್ಲಿತ್ತಿದ್ದರು ಎಂದು ವಿಠ್ಠಲ್​ ಮಾಧ್ಯಮಗಳಿಗೆ ತಿಳಿಸಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net