ಚಿಕ್ಕಪ್ಪನ ಜನ್ಮದಿನಕ್ಕೆ ಅಜಿತ್ ದಾದಾ ಕೊಡಬೇಕಿದ್ದ ಆ 'ಸ್ಪೆಷಲ್ ಗಿಫ್ಟ್' ಏನು..? ಎನ್‌ಸಿಪಿ ನಾಯಕರಿಂದ ಹೊರಬಿತ್ತು ಬಿಗ್ ಸೀಕ್ರೆಟ್! | Ajit pawar

 Ajit pawar | ಅಜಿತ್ ಪವಾರ್ ಮತ್ತು ಶರದ್ ಪವಾರ್
Ajit pawar | ಅಜಿತ್ ಪವಾರ್ ಮತ್ತು ಶರದ್ ಪವಾರ್
Published on
ಮುಂಬೈ: ಕಳೆದ ತಿಂಗಳು ನಡೆದ ಶರದ್ ಪವಾರ್ ಹುಟ್ಟುಹಬ್ಬದಂದು (ಡಿಸೆಂಬರ್ 12) ಉಡುಗೊರೆಯಾಗಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡು ಬಣಗಳನ್ನು ಮತ್ತೆ ಒಂದುಗೂಡಿಸಲು ಅಜಿತ್ ಪವಾರ್ ಬಯಸಿದ್ದರು, ಆದರೆ ಆ ಸಮಯದಲ್ಲಿ ವಿಲೀನ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಎನ್‌ಸಿಪಿ (ಶರದ್​​ ಬಣ) ನಾಯಕ ಅಂಕುಶ್ ಕಾಕಡೆ ಹೇಳಿದ್ದಾರೆ.
ಅಜಿತ್​ ಪವಾರ್​​ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಕಾಕಡೆ, ಡಿಸೆಂಬರ್ 12 ರಂದು ನಾವು ಒಟ್ಟಿಗೆ ಸೇರಬೇಕಿತ್ತು ಎಂದು ಅಜಿತ್ ಪವಾರ್ ನನಗೆ ಹೇಳಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ. ಪರವಾಗಿಲ್ಲ ಚುನಾವಣೆಯ ಬಳಿಕ ನಾವು ಒಟ್ಟಿಗೆ ಬರುತ್ತೇವೆ ಅಂದುಕೊಂಡಿದ್ದೆವು. ದುರದೃಷ್ಟವಶಾತ್, ಅವರು ಆಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಎಂದರು.
ಅಜಿತ್ ಪವಾರ್, ತಮ್ಮೊಂದಿಗೆ ಮತ್ತು ಶರದ್​ ಪವಾರ್ ಜೊತೆಗೆ ನಿಕಟ ಸಂಬಂಧ ಹೊಂದಿರುವ ವಿಠ್ಠಲ್ ಶೇಠ್ ಮನಿಯಾರ್ ಮತ್ತು ಶ್ರೀನಿವಾಸ್ ಪಾಟೀಲ್ ಸೇರಿದಂತೆ ಇತರ ಹಿರಿಯ ನಾಯಕರನ್ನು ಸಮನ್ವಯಕ್ಕೆ ಅನುವು ಮಾಡಿಕೊಡುವಂತೆ ಮತ್ತು ಎನ್‌ಸಿಪಿಯ ಎರಡೂ ಬಣಗಳು ಮತ್ತೆ ಹೇಗೆ ಒಂದಾಗಬಹುದು ಎಂಬ ವಿಷಯವಾಗಿ ಪ್ರಯತ್ನಿಸಲು ಹೇಳಿದ್ದ ದಾದಾ ಮಾತನ್ನು ಕಾಕಡೆ ನೆನಪಿಸಿಕೊಂಡರು.
ಶರದ್ ಪವಾರ್ ಅವರ ರಾಜಕೀಯ ಪರಂಪರೆಯನ್ನು ಅಜಿತ್​ ದಾದಾ ಹೇಗೆ ನಿಭಾಯಿಸಿದರು ಎನ್ನುವುದನ್ನು ನಾನು ಮರೆಯುವುದಿಲ್ಲ ಎಂದು ಹೇಳುತ್ತಾ, ಕಾಕಡೆ ಅಗಲಿದ ನಾಯಕನ ರಾಜಕೀಯ ಪ್ರಯಾಣವನ್ನು ನೆನಪಿಸಿಕೊಂಡರು.
ಎನ್‌ಸಿಪಿ (ಎಸ್‌ಪಿ) ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಈ ವಿಷಯವಾಗಿ ಮಾತನಾಡಿದ್ದು, ಅಜಿತ್ ಪವಾರ್ ಪುನರ್ಮಿಲನಕ್ಕೆ ಒತ್ತಾಯಿಸಿದ್ದಾರೆ ಮತ್ತು ಇದೇ ವಿಷಯವಾಗಿ ಜನವರಿ 16 ಮತ್ತು 17 ರಂದು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ ಎಂದರು.
ಎರಡೂ ಪಕ್ಷಗಳನ್ನು ಒಟ್ಟಿಗೆ ತರುವುದು ಅಜಿತ್ ದಾದಾ ಉದ್ದೇಶವಾಗಿತ್ತು. ನಾವೆಲ್ಲರೂ ಮತ್ತೆ ಒಟ್ಟಿಗೆ ಬಂದೆವು ಮತ್ತು ಈ ನಿಟ್ಟಿನಲ್ಲಿ ನಾವು ಹಲವಾರು ಸಭೆಗಳನ್ನು ನಡೆಸಿದ್ದೇವೆ. ನಂತರ ಅವರು ಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾದರು. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಕೂಟದಲ್ಲಿ ಸ್ಪರ್ಧಿಸಲು ನಿರ್ಧರಿಸಲಾಯಿತು, ಈ ಚುನಾವಣೆ ಬಳಿಕ ಪುನರ್ಮಿಲನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬಯಸಿದ್ದೇವು ಎಂದು ತಿಳಿಸಿದರು.
ಅಜಿತ್​ ದಾದಾ ಅಗಲಿಕೆಯ ಬಳಿಕ ಸುನೇತ್ರಾ ಪವಾರ್​​ರನ್ನು ಉಪಮುಖ್ಯಮಂತ್ರಿಯಾಗಿಯೂ ಮಹಾ ಸರ್ಕಾರದ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಚರ್ಚೆ ನಡೆದಿದ್ದು, ಭವಿಷ್ಯದ ಕ್ರಮಗಳ ಕುರಿತು ಚರ್ಚಿಸಲು ಎನ್‌ಸಿಪಿ ನಾಯಕರು ದೇವೇಂದ್ರ ಫಡ್ನವೀಸ್​​ರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಪಕ್ಷವನ್ನು ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮುನ್ನಡೆಸಬಹುದು ಎನ್ನಲಾಗಿದೆ.
ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಯಲ್ಲಿ ಎನ್‌ಸಿಪಿ ದೊಡ್ಡ ಪ್ರಮಾಣದ ಚುನಾವಣಾ ಪ್ರಚಾರವನ್ನು ನಡೆಸದಿರಲು ತೀರ್ಮಾನಿಸಿದೆ ಎಂದು ವರದಿಯಾಗಿದ್ದು, ಯಾವುದೇ ರೋಡ್ ಶೋಗಳನ್ನು ನಡೆಸದೆ, ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ಕರಪತ್ರಗಳನ್ನು ಮಾತ್ರ ವಿತರಿಸುತ್ತಾರೆ ಎನ್ನಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net