ನಾಳೆ ಡಿಸಿಎಂ ಅಜಿತ್ ಪವಾರ್ ಅಂತ್ಯಕ್ರಿಯೆ; ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ ಸಾಧ್ಯತೆ | Ajit Pawar

ಅಜಿತ್ ಪವಾರ್
ಅಜಿತ್ ಪವಾರ್
Published on
ಮುಂಬೈ: ಮಹಾರಾಷ್ಟ್ರದಲ್ಲಿ ಇಂದು(ಜ. 28) ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಎನ್​ಸಿಪಿ ನಾಯಕ ಮತ್ತು ಡಿಸಿಎಂ ಅಜಿತ್ ಪವಾರ್ ಅವರ ಅಂತ್ಯಕ್ರಿಯೆ, ನಾಳೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ನಡೆಯಲಿದ್ದು, ಅಂತ್ಯಕ್ರಿಯೆಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಭಾಗವಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಈಗಾಗಲೇ ಗುರುವಾರ ಬೆಳಗ್ಗೆ 11 ಗಂಟೆಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಎನ್​ಸಿಪಿ ಮಾಹಿತಿ ನೀಡಿದ್ದು, ನಾಳೆ ಬಾರಾಮತಿಗೆ ಮೋದಿ, ಶಾ ಆಗಮಿಸುವ ಸಾಧ್ಯತೆಯಿದೆ.  
ರಾಜ್ಯ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ. ಅಂತ್ಯಕ್ರಿಯೆಯಲ್ಲಿ ಕೇಂದ್ರ ಸಚಿವರು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಶರದ್ ಪವಾರ್ ಹಾಗೂ ವಿವಿಧ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಬಾರಾಮತಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸೇರುವ ನಿರೀಕ್ಷೆಯಿರುವುದರಿಂದ ಅತೀ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಜಿತ್ ಪವಾರ್ ಮಹಾರಾಷ್ಟ್ರದ ಅತಿ ಹೆಚ್ಚು ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದರು. ವಿವಿಧ ಸರ್ಕಾರಗಳಲ್ಲಿ ಆರು ಬಾರಿ ಡಿಸಿಎಂ ಹುದ್ದೆಗೇರಿದ್ದರು. ಪೃಥ್ವಿರಾಜ್ ಚವಾಣ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. 
ಇಂದು(ಜ. 28) ಬೆಳಗ್ಗೆ ಮುಂಬೈನಿಂದ ಹೊರಟಿದ್ದ ಖಾಸಗಿ ಸಂಸ್ಥೆ ವಿಎಸ್ಆರ್ ಏವಿಯೇಷನ್ ​​ನಿರ್ವಹಿಸುವ ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನವು ಬಾರಾಮತಿ ಏರ್​ಪೋರ್ಟ್​ನಲ್ಲಿ ಲ್ಯಾಂಡಿಂಗ್​ ವೇಳೆ ರನ್​ವೇ ತೆರದ ಮೈದಾನದಲ್ಲಿ ಪತನವಾಗಿದ್ದು, ಡಿಸಿಎಂ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net