ಗಾಯದ ಗುರುತು, ಉತ್ತರ ಸಿಗದ ಪ್ರಶ್ನೆಗಳು! ಏರ್ ಇಂಡಿಯಾ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್ ಭಾವುಕ ನುಡಿ

ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಪ್ರಯಾಣಿಕ
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದ ಪ್ರಯಾಣಿಕ
Published on

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್​ ವಿಮಾನ ದುರಂತಕ್ಕೆ ಇಂದಿಗೆ ಒಂದು ವರ್ಷ
  • ಈ ಭೀಕರ ದುರಂತದಲ್ಲಿ ಪವಾಡ ಸದೃಶ್ಯದಂತೆ ಬದುಕುಳಿದ ಏಕೈಕ ಪ್ರಯಾಣಿಕ
  • ಘಟನೆ ನೆನೆದು ಭಾವುಕರಾದ ಪ್ರಯಾಣಿಕ ರಮೇಶ್​
ನವದೆಹಲಿ: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಗುಜರಾತ್​ನ ಅಹಮದಾಬಾದ್​ ಅಪಘಾತ ಸಂಭವಿಸಿ ( Ahmedabad Plane Crash ) ಇಂದಿಗೆ ವರ್ಷ. 2025ರ ಜೂನ್​ 12ರಂದು ಸಂಭವಿಸಿದ ಈ ದುರ್ಘಟನೆಯಲ್ಲಿ 241 ಪ್ರಯಾಣಿಕರು ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿದರೆ, ಮೆಡಿಕಲ್​ ಕಾಲೇಜಿನ ಕಟ್ಟಡದಲ್ಲಿ ಊಟ ಮಾಡುತ್ತಿದ್ದ 19 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ದುರ್ಮರಣ ಹೊಂದಿದರು. ಈ ಭೀಕರ ದುರಂತದಲ್ಲಿ ಪವಾಡ ಸದೃಶ್ಯದಂತೆ ಬದುಕುಳಿದ ಪ್ರಯಾಣಿಕ ವಿಶ್ವಾಸ್‌ಕುಮಾರ್ ರಮೇಶ್​, ಒಂದು ವರ್ಷದ ಬಳಿಕ ತಮ್ಮ ಜೀವನ, ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಮೇಶ್, "ದುರಂತದ ದಿನ ಈಗಲೂ ಕಣ್ಣಿನಲ್ಲಿ ಕಟ್ಟಿದಂತಿದೆ. ಆ ಘಟನೆಯಿಂದ ಇನ್ನೂ ನಾನು ಹೊರಬರಲು ಸಾಧ್ಯವಾಗಿಲ್ಲ. ಮುಖದ ಮೇಲಿನ ಗಾಯಗಳು ಮತ್ತು ಸಹೋದರನನ್ನು ಕಳೆದುಕೊಂಡಿದ್ದು ಅತೀವ ದುಃಖವನ್ನು ಉಂಟುಮಾಡಿದೆ. ಪ್ರತಿದಿನವೂ ಬದುಕು ನರಕಯಾತನೆ ಆಗಿದೆ. ಈ ಕ್ಷಣಕ್ಕೂ ವಿಮಾನ ಅಪಘಾತ ಹೇಗಾಯಿತು? ಎಂಬ ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಬದುಕನ್ನು ದೂಡುತ್ತಿದ್ದೇನೆ" ಎಂದು ಅಳಲು ತೋಡಿಕೊಂಡರು.

ದುಃಖದ, ಉತ್ತರ ಸಿಗದ ಬದುಕು

ಪತ್ನಿ, ಮಗ ದಿವಂಗ್, ಪೋಷಕರು ಮತ್ತು ಮತ್ತೊಬ್ಬ ಕಿರಿಯ ಸಹೋದರನೊಂದಿಗೆ ವಾಸಿಸುತ್ತಿರುವ ರಮೇಶ್, ಮತ್ತೊಮ್ಮೆ ಜೀವನವನ್ನು ಕಟ್ಟಿಕೊಳ್ಳುವುದು ಬಹಳ ಕಷ್ಟವಾಗಿದೆ ಎಂದಿದ್ದಾರೆ. ದೈಹಿಕ ಗಾಯಗಳು ಗುಣವಾಗಿದ್ದರೂ, ನನಗಿಂತ ಕೆಲವೇ ಸೀಟುಗಳ ಹಿಂದೆ ಕುಳಿತಿದ್ದ ಕಿರಿಯ ಸಹೋದರ ಅಜಯ್‌ನನ್ನು ಕಳೆದುಕೊಂಡ ದುಃಖ ಮತ್ತು ಉಳಿದ ಪ್ರಯಾಣಿಕರು ಪ್ರಾಣ ಹೋಗಿ, ನಾನು ಮಾತ್ರ ಜೀವಂತವಾಗಿ ಉಳಿದಿದ್ದು, ನನಗೆ ವಿಪರೀತ ನೋವನ್ನು ನೀಡಿದೆ ಎಂದರು.
ನನ್ನ ಜೀವನದಲ್ಲಿ ಎಂದಿಗೂ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ನಾನು ಅನುಭವಿಸಿದ ನರಕಯಾತನೆ ಮತ್ತು ಕಳೆದುಕೊಂಡದ್ದನ್ನು ನೆನೆಯುತ್ತಲೇ ಪ್ರತಿ ದಿನ ಜೀವಿಸುವಂತಾಗಿದೆ. ಈ ದುರಂತ ಸಂಭವಿಸಿದ್ದು ಹೇಗೆ? ಇಲ್ಲಿ ತಪ್ಪು ಯಾರದ್ದು? ಎಂಬ ಪ್ರಶ್ನೆಗಳು ಕೇವಲ ನನ್ನ ಮನಸ್ಸಿನಲ್ಲಿ ಮಾತ್ರವಲ್ಲ, ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡ ಪ್ರತಿ ಕುಟುಂಬಸ್ಥರ ಪ್ರಶ್ನೆ. ಏನೆಲ್ಲ ಅನಾಹುತ ನಡೆದಿದೆಯೋ, ಅದನ್ನು ವಾಪಾಸ್​ ಅಥವಾ ಬದಲಿಸಲು ಸಾಧ್ಯವಿಲ್ಲ. ಆದ್ರೆ, ಜನರಿಗೆ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಉತ್ತರಗಳು ಬೇಕಿದೆ. ನೊಂದ ಕುಟುಂಬಗಳು ಸ್ಪಷ್ಟತೆಗೆ ಅರ್ಹವಾಗಿವೆ ಎಂದರು,(ಏಜೆನ್ಸೀಸ್).

ಭಾರತದ ಇತಿಹಾಸದಲ್ಲೇ ಮಹಾ ದುರಂತ

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿತು. 2025, ಜೂನ್​ 12ರಂದು ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾದರು. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವಿಗೀಡಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net