ಓವೈಸಿ ಬರೋದು ಬಿಜೆಪಿಗೆ ಲಾಭ ಮಾಡಿಕೊಡೋಕೆ!..;ಇಂಡಿಯಾ ಮೈತ್ರಿಕೂಟದಲ್ಲಿ ಎಐಎಂಐಎಂಗೆ ಜಾಗವಿಲ್ಲ ಎಂದ ಅಖಿಲೇಶ್ | Akhilesh Yadav

Akhilesh Yadav | ಇಂಡಿಯಾ ಮೈತ್ರಿಕೂಟದಲ್ಲಿ ಎಐಎಂಐಎಂಗೆ ಜಾಗವಿಲ್ಲ ಎಂದ ಅಖಿಲೇಶ್
Akhilesh Yadav | ಇಂಡಿಯಾ ಮೈತ್ರಿಕೂಟದಲ್ಲಿ ಎಐಎಂಐಎಂಗೆ ಜಾಗವಿಲ್ಲ ಎಂದ ಅಖಿಲೇಶ್
Published on
ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಾಜಕೀಯ ಕಣ ರಂಗೇರತೊಡಗಿದ್ದು, ಬಿಹಾರ ಚುನಾವಣೆಯ ಯಶಸ್ಸಿನ ಬೆನ್ನಲ್ಲೇ, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ (AIMIM) ಪಕ್ಷವು ಉತ್ತರ ಪ್ರದೇಶದಲ್ಲೂ ತನ್ನ ಪ್ರಭಾವ ವಿಸ್ತರಿಸಲು ಮುಂದಾಗಿದೆ ಮತ್ತು ಸಮಾಜವಾದಿ ಪಾರ್ಟಿ ಜೊತೆ ಮೈತ್ರಿ ಮಾಡಿಕೊಳ್ಳಲು ಆಸಕ್ತಿ ತೋರಿಸಿತ್ತು.
ಆದರೆ, ಓವೈಸಿ ಅವರ ಈ ಆಸೆಗೆ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ತಣ್ಣೀರೆರಚಿದ್ದಾರೆ. ಓವೈಸಿ ಅವರಂತಹ ಶಕ್ತಿಗಳು ಪರೋಕ್ಷವಾಗಿ ಬಿಜೆಪಿಗೆ ಲಾಭ ಮಾಡಿಕೊಡುತ್ತವೆ ಎಂದು ಅಖಿಲೇಶ್ ನೇರವಾಗಿ ಟಾಂಗ್ ನೀಡಿದ್ದಾರೆ.

ಇಂಡಿಯಾ (INDIA) ಮೈತ್ರಿಕೂಟದಲ್ಲಿ ಓವೈಸಿಗೆ ಜಾಗವಿಲ್ಲ!

ಮಂಗಳವಾರ ಲಖನೌದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಇಂಡಿಯಾ ಮೈತ್ರಿಕೂಟವು ಎಂದಿನಂತೆ ಒಗ್ಗಟ್ಟಾಗಿ ಮುಂದುವರಿಯಲಿದೆ. ನಾವು ಈಗಷ್ಟೇ ಬಿಜೆಪಿಯನ್ನು ಸೋಲಿಸಿದ್ದೇವೆ. ಇಂತಹ ನಾಯಕರು ಹಠಾತ್ ಆಗಿ ಈಗ ಏಕೆ ಪ್ರತ್ಯಕ್ಷವಾಗುತ್ತಿದ್ದಾರೆ ಎಂದು ನೀವೇ ಯೋಚಿಸಬೇಕು. ಚುನಾವಣಾ ಸಮಯದಲ್ಲಿ ಇಂತಹ ಹಲವು ಶಕ್ತಿಗಳು ಮುಂಚೂಣಿಗೆ ಬರುತ್ತವೆ ಮತ್ತು ಅನೇಕರು ಬಿಜೆಪಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಸೋತು ಸುಣ್ಣವಾಗಿರುವ ಬಿಜೆಪಿ ಅಧಿಕಾರ ಹಿಡಿಯಲು ಏನನ್ನಾದರೂ ಮಾಡಲು ಸಿದ್ಧವಿರುತ್ತದೆ ಎಂದು ಕಿಡಿಕಾರಿದ್ದಾರೆ.
ಅಖಿಲೇಶ್ ಅವರ ಈ ಹೇಳಿಕೆಯನ್ನು ಗಮನಿಸಿದರೆ, ಬಿಹಾರದಂತೆಯೇ ಉತ್ತರ ಪ್ರದೇಶದಲ್ಲೂ ಓವೈಸಿ ಅವರ ಎಐಎಂಐಎಂ ಪಕ್ಷಕ್ಕೆ ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಸ್ಥಾನ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಯಾವುದೇ ಉದ್ಯಮಿ ಎಷ್ಟು ಜಮೀನು ಅಥವಾ ಸಂಪತ್ತು ಹೊಂದಿದ್ದರೂ ಅವರು ಬಿಜೆಪಿಯನ್ನು ಎದುರಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

2027ರ ಚುನಾವಣೆಗೆ ಜನರೇ ಸಿದ್ಧರಾಗಿದ್ದಾರೆ

ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಅಖಿಲೇಶ್ ಯಾದವ್, ನಮ್ಮ ಸಮಾಜವಾದಿ ಪಕ್ಷದ ಕಾರ್ಯಕರ್ತರಿಗಿಂತ ಹೆಚ್ಚಾಗಿ ಉತ್ತರ ಪ್ರದೇಶದ ಜನರೇ ಈ ಚುನಾವಣಾ ಕದನಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದಿದ್ದಾರೆ. ಇದೇ ವೇಳೆ ಹೆಚ್ಚುತ್ತಿರುವ ಹಣದುಬ್ಬರ, ಸರ್ಕಾರದ ಕಳಪೆ ವಿದೇಶಾಂಗ ನೀತಿ, ವ್ಯಾಪಕ ಭ್ರಷ್ಟಾಚಾರ ಮತ್ತು ನಿರುದ್ಯೋಗದ ಸಮಸ್ಯೆಗಳ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net