ಎಐಎಡಿಎಂಕೆ ಪಕ್ಷದಲ್ಲಿ ಹೈಡ್ರಾಮ; ವಿಶ್ವಾಸಮತಯಾಚನೆಯಲ್ಲಿ ಟಿವಿಕೆ ವಿರುದ್ಧ ಮತಚಲಾಯಿಸುವಂತೆ 47 ಶಾಸಕರಿಗೆ ವಿಪ್ ಜಾರಿ | AIADMK

ಮಾಜಿ ಸಚಿವ ಎಸ್‌ಪಿ ವೇಲುಮಣಿ ಮತ್ತು ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ
ಮಾಜಿ ಸಚಿವ ಎಸ್‌ಪಿ ವೇಲುಮಣಿ ಮತ್ತು ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ
Published on
ಚೆನ್ನೈ: ತಮಿಳುನಾಡು ರಾಜಕೀಯದ ಪ್ರಮುಖ ವಿಪಕ್ಷವಾಗಿರುವ ಎಐಎಡಿಎಂಕೆಯಲ್ಲಿ ಒಡಕುಂಟಾಗಿದ್ದು, ಮಾಜಿ ಸಚಿವ ಎಸ್‌ಪಿ ವೇಲುಮಣಿ ಮತ್ತುಸಿವಿಇ ಷಣ್ಮುಗಂ ನೇತೃತ್ವದ ಬಣವು ಆಡಳಿತರೂಢ ಸಿಎಂ ದಳಪತಿ ವಿಜಯ್ ನೇತೃತ್ವದ ಟಿವಿಕೆಯನ್ನು ಬೆಂಬಲಿಸಲು ಮುಂದಾಗಿದೆ. ಆದರೆ ವಿಶ್ವಾಸಮತಯಾಚನೆಯಲ್ಲಿ ಟಿವಿಕೆ ವಿರುದ್ಧ ಮತಚಲಾಯಿಸುವಂತೆ ಎಡಪ್ಪಾಡಿ.ಕೆ.ಪಳನಿಸ್ವಾಮಿ ಬಣವು ಎಲ್ಲಾ 47 ಶಾಸಕರಿಗೆ ವಿಪ್ ಜಾರಿ ಮಾಡಿದೆ.
ಎಐಎಡಿಎಂಕೆಯಿಂದ ವಿಧಾನಸಭೆಯ ವಿಪ್ ಆಗಿ ನೇಮಕಗೊಂಡಿರುವ ಮಾಜಿ ಕೃಷಿ ಸಚಿವ ಕೃಷ್ಣಮೂರ್ತಿ ಅವರು, ಇಂದು(ಮೇ 12) ಮುಂಬರುವ ವಿಶ್ವಾಸ ಮತಯಾಚನೆಯ ಸಮಯದಲ್ಲಿ ಟಿವಿಕೆ ಸರ್ಕಾರದ ವಿರುದ್ಧ ಮತ ಚಲಾಯಿಸಲು ಎಲ್ಲಾ ಪಕ್ಷದ ಶಾಸಕರಿಗೆ ಔಪಚಾರಿಕ ವಿಪ್ ಜಾರಿ ಮಾಡಲಾಗಿದೆ. ಸರ್ಕಾರದ ಪರವಾಗಿ ಮತ ಚಲಾಯಿಸುವ ಯಾವುದೇ ಶಾಸಕರು ತಕ್ಷಣದ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಎಡಪ್ಪಾಡಿ ಪಳನಿಸ್ವಾಮಿ ಪರವಾಗಿ ಸುದ್ದಿಗೋಷ್ಠಿ ನಡೆಸಿರು ಮಾಜಿ ಸಚಿವ ಓಎಸ್ ಮಣಿಯನ್, ಪಳನಿಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಬೆಂಬಲಿಸುವ ಎಲ್ಲಾ 47 ಶಾಸಕರು ಸಹಿ ಮಾಡಿದ ಪತ್ರಗಳನ್ನು ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರಿಗೆ ಸಲ್ಲಿಸಿದ್ದೇವೆ. ಪಳನಿಸ್ವಾಮಿ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಸಿವಿಇ ಷಣ್ಮುಗಂ ಮಾತು ಸುಳ್ಳು, ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳಲು ಈ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಿವಸೇನೆಗೆ ಸಂಬಂಧಿಸಿದ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಸ್ಪೀಕರ್ ಗಮನಕ್ಕೆ ತಂದಿದ್ದು, ಪಳನಿಸ್ವಾಮಿ ಅವರೇ ಶಾಸಕಾಂಗ ಪಕ್ಷದ ನಾಯಕರು ಎಂದು ಹೇಳುವ ಪತ್ರಕ್ಕೆ ಎಲ್ಲಾ 47 ಶಾಸಕರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಪಕ್ಷದ ಬೈಲಾಗಳ ಪ್ರಕಾರ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಮಾತ್ರ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಬಹುದು. ಮಾಜಿ ಸಿಎಂ ಜೆ. ಜಯಲಲಿತಾ ಅವರ ಮರಣದ ಬಳಿಕ, ಇಪಿಎಸ್ ಅನೇಕ ಕಾನೂನು ಅಡೆತಡೆಗಳನ್ನು ಎದುರಿಸಿದರು. ಮತ್ತು ನಾಲ್ಕೂವರೆ ವರ್ಷಗಳ ಕಾಲ ಉತ್ತಮ ಆಡಳಿತವನ್ನು ನೀಡಿದರು. ಚುನಾವಣೆಗೂ ಮುಂಚೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಮತ್ತು 1.34 ಕೋಟಿ ಮತಗಳನ್ನು ಗಳಿಸಿ, 47 ಶಾಸಕರನ್ನು ಗೆಲ್ಲಿಸಿದರು ಎಂದು ಹೇಳಿದ್ದಾರೆ.

ಟಿವಿಕೆಗೆ ನಮ್ಮ ಬೆಂಬಲ ಎಂದ ಷಣ್ಮುಗಂ ಬಣ

ಇನ್ನೊಂದೆಡೆ, ಸಿವಿ ಷಣ್ಮುಗಂ ಇಂದು ಮಧ್ಯಾಹ್ನ ಸಿಎಂ ವಿಜಯ್​​ರನ್ನು ಭೇಟಿ ಮಾಡಿ ಸರ್ಕಾರವನ್ನು ಬೆಂಬಲಿಸುವ ಪತ್ರವನ್ನು ನೀಡುವುದಾಗಿ ತಿಳಿಸಿದ್ದಾರೆ. ಎಡಪ್ಪಾಡಿ ಪಳನಿಸ್ವಾಮಿ ಡಿಎಂಕೆ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬಯಸಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಷಣ್ಮುಗಂ, ಡಿಎಂಕೆಯನ್ನು ಸೋಲಿಸುವ ಉದ್ದೇಶದಿಂದಲೇ ಎಐಎಡಿಎಂಕೆ ಸ್ಥಾಪನೆಯಾಗಿರುವುದರಿಂದ ಪಳನಿಸ್ವಾಮಿ ನಿರ್ಧಾರವನ್ನು ನಾವು ವಿರೋಧಿಸಿದ್ದೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net