ಭಾರತೀಯ ಐಟಿ ವಲಯಕ್ಕೆ ಎಐ ಗಂಡಾಂತರ! 'ಟಿಸಿಎಸ್'​ಗಿಲ್ಲ ಭಯ

ಕೃತಕ ಬುದ್ಧಿಮತ್ತೆ
ಕೃತಕ ಬುದ್ಧಿಮತ್ತೆ
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಐಟಿ ವಲಯಕ್ಕೆ ಎಐ ಗಂಡಾಂತರ
  • ಇನ್ಪೋಸಿಸ್, ಟಿಸಿಎಸ್, ವಿಪ್ರೋ ಕಂಪನಿಗಳ ಭವಿಷ್ಯದ ಬಗ್ಗೆ ಖಾಸಗಿ ಸಂಸ್ಥೆ ಆಘಾತಕಾರಿ ವರದಿ
ನವದೆಹಲಿ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯಿಂದಾಗಿ ಭಾರತದ 200 ಬಿಲಿಯನ್ ಡಾಲರ್ ಮೌಲ್ಯದ ಮಾಹಿತಿ ತಂತ್ರಜ್ಞಾನ (ಐಟಿ) ರಫ್ತು ವಲಯ 2028ರ ವೇಳೆಗೆ ಭಾರಿ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ಸಿಟ್ರಿನಿ ರಿಸರ್ಚ್ ವರದಿ ಎಚ್ಚರಿಸಿದೆ. 
ಇನ್ಪೋಸಿಸ್, ಟಿಸಿಎಸ್ ಮತ್ತು ವಿಪ್ರೋದಂತಹ ದಿಗ್ಗಜ ಕಂಪನಿಗಳ ವ್ಯವಹಾರ ಮಾದರಿಯೇ ಇದರಿಂದ ಕುಸಿಯಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

‘ದಿ 2028 ಗ್ಲೋಬಲ್ ಇಂಟೆಲಿಜೆನ್ಸ್ ಕ್ರೖೆಸಿಸ್’ ಎಂಬ ಹೆಸರಿನ ಈ ವರದಿಯ ಪ್ರಕಾರ, ಕಡಿಮೆ ವೆಚ್ಚದಲ್ಲಿ ಸಿಗುವ ಎಐ ಕೋಡಿಂಗ್ ಏಜೆಂಟ್​ಗಳಿಂದಾಗಿ ವಿದೇಶಿ ಕಂಪನಿಗಳು ಭಾರತೀಯ ಐಟಿ ಸೇವೆಗಳ ಮೇಲಿನ ಅವಲಂಬನೆಯನ್ನು ಕೈಬಿಡಲಿವೆ. ಇದರಿಂದಾಗಿ 2027ರ ವೇಳೆಗೆ ಈ ಕಂಪನಿಗಳ ಕೆಲಸದ ಒಪ್ಪಂದಗಳ ರದ್ದತಿ ಹೆಚ್ಚಾಗಲಿದೆ.

ಇದರ ನೇರ ಪರಿಣಾಮ ಭಾರತೀಯ ರೂಪಾಯಿಯ ಮೇಲೆಯೂ ಬೀಳಲಿದೆ. ರೂಪಾಯಿ ಮೌಲ್ಯ ಕೇವಲ ನಾಲ್ಕು ತಿಂಗಳಲ್ಲಿ ಶೇ. 18ರಷ್ಟು ಕುಸಿಯುವ ಸಾಧ್ಯತೆಯಿದೆ. ಕಂಪನಿಗಳು ವೆಚ್ಚ ಉಳಿಸಲು ಎಐ ಬಳಸಿ ಉದ್ಯೋಗಿಗಳನ್ನು ಕಡಿತಗೊಳಿಸುವ ಮತ್ತು ಆ ಹಣವನ್ನು ಪುನಃ ಎಐನಲ್ಲಿ ಹೂಡಿಕೆ ಮಾಡುವ ‘ಫೀಡ್​ಬ್ಯಾಕ್ ಲೂಪ್’ ಆರ್ಥಿಕ ಅಸ್ಥಿರತೆಗೆ ಕಾರಣವಾಗಲಿದೆ. ಈ ಪರಿಸ್ಥಿತಿ 2028ರ ವೇಳೆಗೆ ಭಾರತ ಐಎಂಎಫ್ ನೆರವು ಕೋರುವ ಮಟ್ಟಕ್ಕೆ ತಲುಪಿಸಬಹುದು ಎಂದು ವರದಿ ಭವಿಷ್ಯ ನುಡಿದಿದೆ.

ಎಐಗೆ ಟಿಸಿಎಸ್ ಹೆದರಲ್ಲ...

ಎಐ ತಂತ್ರಜ್ಞಾನಕ್ಕೆ ಟಿಸಿಎಸ್ ಹೆದರುವುದಿಲ್ಲ ಎಂದು ಸಿಇಒ ಕೆ. ಕೃತಿವಾಸನ್ ಹೇಳಿದ್ದಾರೆ. ‘ಎಐ ಬಳಕೆಯಿಂದ ಕಂಪನಿಯ ಆದಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ (ಕ್ಯಾನಿಬಲೈ ಸೇಷನ್), ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಿದ್ಧ. ನಮ್ಮ 6 ಲಕ್ಷ ಉದ್ಯೋಗಿಗಳಿಗೆ ಎಐ ತರಬೇತಿ ನೀಡುತ್ತಿದ್ದು, ಯುವ ಉದ್ಯೋಗಿಗಳು ಹಿರಿಯರಿಗಿಂತ ವೇಗವಾಗಿ ಎಐ ಕಲಿಯುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net