ಈದ್‌ಗಿಲ್ಲದ ಅಡ್ಡಿ ರಾಮನವಮಿಗೇಕೆ..? ಹಿಂದೂ ವಿರೋಧಿ ಧೋರಣೆಗೆ ಸಚಿವ ನಿತೇಶ್ ರಾಣೆ ಕಿಡಿ! | Nitesh Rane

 Nitesh Rane
Nitesh Rane
Published on
ಮುಂಬೈ: ಮುಂಬರುವ ಜನವರಿ 15 ರಂದು ಮಹಾರಾಷ್ಟ್ರದ 29 ಪುರಸಭೆಗಳಿಗೆ ಚುನಾವಣೆ ನಡೆಯಲಿದ್ದು, ಇದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಟೀಕೆ-ಟಿಪ್ಪಣಿಗಳು ಮೇಲುಗೈ ಸಾಧಿಸುತ್ತಿವೆ. ಈ ನಡುವೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ( Nitesh Rane) ಇಂಡಿಯಾ ಟಿವಿಯೊಂದಿಗೆ ಮಾತನಾಡಿದ್ದು, ಹಿಂದುತ್ವ ಸೇರಿದಂತೆ ಅನೇಕ ವಿಷಯಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ವಿಭಜಕ ರಾಜಕೀಯದ ಆರೋಪಗಳನ್ನು ತಳ್ಳಿ ಹಾಕಿರುವ ಸಚಿವ ರಾಣೆ, ಹಿಂದುತ್ವ ಮತ್ತು ರಾಷ್ಟ್ರೀಯತೆಗಾಗಿ ಕೆಲಸ ಮಾಡಲು ಸದಾ ಸಿದ್ಧನಿದ್ದು, ಧ್ರುವೀಕರಣ ರಾಜಕೀಯದಲ್ಲಿ ನನಗೆ ನಂಬಿಕೆ ಇಲ್ಲ, ದೇಶದ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು ಎಂದರು.
ಧಾರ್ಮಿಕ ಮೆರವಣಿಗೆಗಳ ಸಂದರ್ಭದಲ್ಲಿನ ಆಯ್ದ ಅಡಚಣೆಗಳ ಬಗ್ಗೆ ಉತ್ತರಿಸಿದ ರಾಣೆ, ಈದ್ ಅಥವಾ ಮೊಹರಂ ಸಮಯದಲ್ಲಿ ಯಾವುದೇ ರೀತಿಯ ಕಲ್ಲು ತೂರಾಟವಿಲ್ಲ, ತೊಂದರೆ ಇಲ್ಲ. ಆದರೆ, ರಾಮ ನವಮಿ ಮತ್ತು ಹನುಮಾನ್ ಜಯಂತಿಯ ವೇಳೆ ಮಾತ್ರ ಈ ಎಲ್ಲ ಸಮಸ್ಯೆಗಳು ಉದ್ಭವಿಸುತ್ತವೆ, ಈದ್ ಶಾಂತಿಯುತವಾಗಿಯೇ ನಡೆಯುವಾಗ, ರಾಮ ನವಮಿಗೇಕೆ ಈ ಅಡಚಣೆ ಎಂದು ಪ್ರಶ್ನಿಸಿದರು. ದೇಶಭಕ್ತ ಮುಸ್ಲಿಮರ ಬಗ್ಗೆ ನನಗೆ ಯಾವುದೇ ರೀತಿಯ ಆಕ್ಷೇಪಣೆಗಳಿಲ್ಲ, ಜಿಹಾದ್ ಮಾಡಲು ಬಯಸುವವರನ್ನು ಸ್ವಾಭಾವಿಕವಾಗಿ ನಾನು ವಿರೋಧಿಸುತ್ತೇನೆ ಎಂದು ಹೇಳಿದರು.

ವಂದೇ ಮಾತರಂ ಮತ್ತು ಲವ್ ಜಿಹಾದ್...

ಯಾರಾದರೂ ಭಾರತದಲ್ಲಿ ವಾಸಿಸುತ್ತಾ, ವಂದೇ ಮಾತರಂ ಹೇಳುವುದಿಲ್ಲ ಎಂದಾದರೆ ಅವರನ್ನು ಪಾಕಿಸ್ತಾನವಲ್ಲದೇ ಮತ್ತೆಲ್ಲಿಗೆ ಕಳುಹಿಸಬೇಕು ಎಂದು ಪ್ರಶ್ನಿಸಿದ ರಾಣೆ, ಲವ್ ಜಿಹಾದ್ ಬೆಂಬಲಿಸುವವರನ್ನು ವಿಧಾನಸಭೆಯೇ ಆಗಲಿ, ಬೀದಿಗಳಲ್ಲಾಗಲಿ ವಿರೋಧಿಸಲು ಹಿಂಜರಿಯುವುದಿಲ್ಲ. ಒಬ್ಬ ಮುಸ್ಲಿಂ ತಮ್ಮ ಸಮುದಾಯದ ಹಿತಾಸಕ್ತಿಗಳ ಬಗ್ಗೆ ಮಾತನಾಡುವಾಗ ಅದನ್ನು ಧ್ರುವೀಕರಣವಾಗುವುದಿಲ್ಲ, ಆದರೆ, ಹಿಂದೂ ತನ್ನ ಹಿತಾಸಕ್ತಿಗಳ ಬಗ್ಗೆ ಮಾತನಾಡುತ್ತಿದ್ದಂತೆ ಅದು ಧ್ರುವೀಕರಣವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಠಾಕ್ರೆ ಸಹೋದರರ ಬಗ್ಗೆ..

ಉದ್ಧವ್ ಮತ್ತು ರಾಜ್ ಠಾಕ್ರೆ ಪುನರ್ಮಿಲದ ಬಗ್ಗೆ ಮಾತನಾಡಿದ ರಾಣೆ, ಹಿಂದೂ ಮತಗಳ ವಿಭಜನೆಯ ಸುದ್ದಿಗಳನ್ನು ತಳ್ಳಿಹಾಕಿದರು. ಠಾಕ್ರೆ ಸಹೋದರರು ಒಟ್ಟಾಗಿರುವುದರಿಂದ ಯಾವುದೇ ಮತವಿಭಜನೆ ಉಂಟಾಗಲು ಸಾಧ್ಯವಿಲ್ಲ, ಮುಂಬೈನ ಡಿಎನ್ಎ ಸ್ವತಃ ಹಿಂದುತ್ವವಾಗಿದೆ ಎಂದರು. ಮುಂಬೈನ ನಿವಾಸಿಗಳು ಉಗ್ರವಾದವನ್ನು ನೇರವಾಗಿ ನೋಡಿರುವುದರಿಂದ ಅವರು ಮತ್ತೇ ದಾರಿ ತಪ್ಪುವುದಿಲ್ಲ. ಹಿಂದೂ ಎಂದರೆ ಮರಾಠಿ ಕೂಡ ಸೇರಿದೆ. ಪ್ರತಿಪಕ್ಷದವರು ಮರಾಠಿ ಗುರುತಿನ ಹೆಗಲ ಮೇಲೆ ಜಿಹಾದಿ ಕಾರ್ಯಸೂಚಿಯನ್ನು ಇಡಲು ಬಯಸುತ್ತಾರೆ ಎಂದು ರಾಣೆ ಆರೋಪಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net