ಅಗ್ರಿವೋಲ್ಟಾಯಿಕ್ಸ್​: ರೈತರಿಗೆ ಎರಡನೇ ಆದಾಯದ ದಾರಿ!

Representative image
ಸಾಂದರ್ಭಿಕ ಚಿತ್ರ
Published on: 

ಜಮೀನಿನಲ್ಲಿ ಬೆಳೆ ಬೆಳೆಯುವುದರ ಜತೆಗೆ ಸೌರ ವಿದ್ಯುತ್ ಕೂಡ ಉತ್ಪಾದಿಸಿ ಮಾರಾಟ ಮಾಡಿದರೆ ರೈತರಿಗೆ ಎರಡನೇ ಆದಾಯದ ಮೂಲ ಸೃಷ್ಟಿಯಾಗುತ್ತದೆ. ಒಂದೆರಡು ಎಕರೆ ಜಮೀನಿರುವ ರೈತರೂ ಈ ಯೋಜನೆಯ ಲಾಭ ಪಡೆಯಬಹುದೇ? ಎಷ್ಟು ವಿದ್ಯುತ್ ಉತ್ಪಾದಿಸಬಹುದು, ಘಟಕ ಸ್ಥಾಪನೆಗೆ ಎಷ್ಟು ವೆಚ್ಚವಾಗುತ್ತದೆ, ಸರ್ಕಾರದ ಸಬ್ಸಿಡಿ ಸಿಗುತ್ತದೆಯೇ? ಅಗ್ರಿವೋಲ್ಟಾಯಿಕ್ಸ್​ನ ಸಾಧ್ಯತೆ ಮತ್ತು ಸವಾಲುಗಳ ವಿವರ ಇಲ್ಲಿದೆ.

ರೈತರು ತಮ್ಮ ಜಮೀನಿನಲ್ಲಿ ಬೆಳೆಗಳನ್ನಂತೂ ಬೆಳೆದೇ ಬೆಳೆಯುತ್ತಾರೆ; ಅದೇ ಜಮೀನಿನಲ್ಲಿ ಎತ್ತರದ ಕಂಬಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದಿಸಿದರೆ ಹೇಗಿರುತ್ತದೆ? ಫಲಕಗಳ ಕೆಳಗೆ ಕೃಷಿ ಮುಂದುವರಿಯುತ್ತದೆ; ಮೇಲಿನ ಫಲಕಗಳಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದನ್ನೇ ಅಗ್ರಿವೋಲ್ಟಾಯಿಕ್ಸ್ ಎನ್ನುತ್ತಾರೆ. ಕೃಷಿ ಭೂಮಿಯನ್ನು ಸೌರ ವಿದ್ಯುತ್ ಉತ್ಪಾದನೆಗೆ ಮಾತ್ರ ಪ್ರತ್ಯೇಕವಾಗಿ ಬಳಸುವ ಬದಲು, ಒಂದೇ ಜಮೀನಿನಲ್ಲಿ ಕೃಷಿ ಮತ್ತು ವಿದ್ಯುತ್ ಉತ್ಪಾದನೆ ಎರಡಕ್ಕೂ ಅವಕಾಶ ಕಲ್ಪಿಸುವುದು ಇದರ ಉದ್ದೇಶ.

ಇದರಿಂದ ರೈತರಿಗೆ ಬೆಳೆ ಆದಾಯದ ಜತೆಗೆ ವಿದ್ಯುತ್ ಮಾರಾಟದಿಂದಲೂ ಹಣ ಗಳಿಸಲು ಸಾಧ್ಯವಾಗುತ್ತದೆ. ಆದರೆ ಫಲಕಗಳನ್ನು ಎತ್ತರದಲ್ಲಿ ಅಳವಡಿಸಬೇಕಿರುವುದರಿಂದ ಆರಂಭಿಕ ವೆಚ್ಚ ಹೆಚ್ಚಾಗುತ್ತದೆ. ಎಲ್ಲ ಬೆಳೆಗಳಿಗೂ ಈ ಪದ್ಧತಿ ಸೂಕ್ತವಲ್ಲ. ಒಂದು ಅಥವಾ ಎರಡು ಎಕರೆ ಜಮೀನಿರುವ ರೈತರು ವೈಯಕ್ತಿಕವಾಗಿ ಘಟಕ ಸ್ಥಾಪಿಸುವುದಕ್ಕಿಂತ ಗುಂಪಾಗಿ ಈ ಯೋಜನೆ ಕೈಗೊಳ್ಳುವುದು ಹೆಚ್ಚು ಅನುಕೂಲಕರವಾಗಬಹುದು.

ಹಲವು ಪ್ರಯೋಜನ

ಸಾಮಾನ್ಯ ಸೌರ ಘಟಕಗಳಲ್ಲಿ ಫಲಕಗಳನ್ನು ನೆಲದ ಮೇಲೆ ಅಳವಡಿಸುವುದರಿಂದ ಆ ಜಾಗದಲ್ಲಿ ಕೃಷಿ ಮಾಡುವುದು ಕಷ್ಟ. ಅಗ್ರಿವೋಲ್ಟಾಯಿಕ್ಸ್​ನಲ್ಲಿ ಫಲಕಗಳನ್ನು ಎತ್ತರದ ಕಂಬಗಳ ಮೇಲೆ ಅಥವಾ ಬೆಳೆ ಸಾಲುಗಳ ನಡುವೆ ಅಳವಡಿಸಲಾಗುತ್ತದೆ. ಇದರಿಂದ ಫಲಕಗಳ ಕೆಳಗೆ ಬೆಳೆ ಬೆಳೆಯಲು ಮತ್ತು ಕೆಲವು ಕೃಷಿ ಯಂತ್ರೋಪಕರಣಗಳನ್ನು ಬಳಸಲು ಅವಕಾಶವಿರುತ್ತದೆ. ಫಲಕಗಳ ನೆರಳು ಬೇಸಿಗೆಯ ತೀವ್ರ ಬಿಸಿಲಿನಿಂದ ಕೆಲವು ಬೆಳೆಗಳನ್ನು ರಕ್ಷಿಸಬಹುದು. ಮಣ್ಣಿನ ತೇವಾಂಶ ಬೇಗ ಆವಿಯಾಗುವುದನ್ನು ಕಡಿಮೆ ಮಾಡುವ ಸಾಧ್ಯತೆಯೂ ಇದೆ. ಆದರೆ ಹೆಚ್ಚು ಸೂರ್ಯನ ಬೆಳಕು ಅಗತ್ಯವಿರುವ ಬೆಳೆಗಳಿಗೆ ನೆರಳಿನಿಂದ ಇಳುವರಿ ಕುಸಿಯಬಹುದು. ಹೀಗಾಗಿ ತರಕಾರಿ, ಹೂವು, ಅರಿಶಿನ ಮತ್ತು ನೆರಳನ್ನು ಸಹಿಸಿಕೊಂಡು ಬೆಳೆಯುವ ಬೆಳೆಗಳನ್ನು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಸಣ್ಣ ರೈತರು ಏನು ಮಾಡಬಹುದು?

ಒಂದು ಅಥವಾ ಎರಡು ಎಕರೆ ಜಮೀನಿರುವ ರೈತರು ವೈಯಕ್ತಿಕವಾಗಿ ದೊಡ್ಡ ಘಟಕ ಸ್ಥಾಪಿಸುವುದು ಬಂಡವಾಳದ ದೃಷ್ಟಿಯಿಂದ ಕಷ್ಟ. ಅಕ್ಕಪಕ್ಕದ ರೈತರು ಒಟ್ಟಾಗಿ ರೈತ ಉತ್ಪಾದಕ ಸಂಸ್ಥೆ ಅಥವಾ ಸಹಕಾರ ಸಂಘದ ಮೂಲಕ ಯೋಜನೆ ಕೈಗೊಳ್ಳಬಹುದು. ಐದು ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಮೀನಿರುವವರು ತಮ್ಮ ಭೂಮಿಯ ಸಾಮರ್ಥ್ಯವನ್ನು ಪರಿಶೀಲಿಸಿ ಘಟಕ ಸ್ಥಾಪನೆಯ ಸಾಧ್ಯತೆಯನ್ನು ನೋಡಬಹುದು. ಬಂಡವಾಳ ಹೂಡಲು ಸಾಧ್ಯವಿಲ್ಲದವರು ವಿಶ್ವಾಸಾರ್ಹ ಕಂಪನಿಗೆ ಜಮೀನು ಗುತ್ತಿಗೆ ನೀಡಬಹುದು. ಯೋಜನೆ ಆರಂಭಿಸುವ ಮೊದಲು ಕೃಷಿ ಇಲಾಖೆ, ಕೆಆರ್​ಇಡಿಎಲ್, ಸ್ಥಳೀಯ ವಿದ್ಯುತ್ ಕಂಪನಿ ಮತ್ತು ಬ್ಯಾಂಕ್​ಗಳಿಂದ ಮಾಹಿತಿ ಪಡೆಯಬೇಕು. ಬೆಳೆ ಇಳುವರಿಗೆ ಧಕ್ಕೆಯಾಗದ ವಿನ್ಯಾಸ, ವಿದ್ಯುತ್ ಖರೀದಿ ಒಪ್ಪಂದ, ಘಟಕದ ನಿರ್ವಹಣೆ ಮತ್ತು ಗುತ್ತಿಗೆ ಷರತ್ತುಗಳನ್ನು ಪರಿಶೀಲಿಸಿದ ಬಳಿಕವೇ ಹೂಡಿಕೆ ನಿರ್ಧಾರ ಕೈಗೊಳ್ಳಬೇಕು.

ಕಡಿಮೆ ಜಮೀನಿದ್ದರೆ ಹೇಗೆ?

ಒಂದು ಎಕರೆ ಜಮೀನಿನಲ್ಲಿ 100ರಿಂದ 200 ಕಿಲೋವಾಟ್ ಸಾಮರ್ಥ್ಯದ ಘಟಕ ಸ್ಥಾಪಿಸಬಹುದು ಎಂಬುದನ್ನು ಪ್ರಾಥಮಿಕ ಉದಾಹರಣೆಯಾಗಿ ಪರಿಗಣಿಸಬಹುದು. ನಿಜವಾದ ಸಾಮರ್ಥ್ಯವು ಫಲಕಗಳ ನಡುವಿನ ಅಂತರ, ಎತ್ತರ, ಕೃಷಿಗೆ ಉಳಿಸುವ ಜಾಗ ಮತ್ತು ಜಮೀನಿನ ವಿನ್ಯಾಸವನ್ನು ಅವಲಂಬಿಸಿರುತ್ತದೆ.

ಈ ಲೆಕ್ಕಾಚಾರಕ್ಕೆ ಪ್ರತಿ ಕಿಲೋವಾಟ್ ಘಟಕ ವರ್ಷಕ್ಕೆ 1,300ರಿಂದ 1,500 ಯೂನಿಟ್ ಉತ್ಪಾದಿಸುತ್ತದೆ ಮತ್ತು ಪ್ರತಿ ಯೂನಿಟ್​ಗೆ 4 ರೂ. ದರ ಸಿಗುತ್ತದೆ ಎಂದು ಊಹೆಯನ್ನು ಬಳಸಲಾಗಿದೆ. ಇದು ಉದಾಹರಣೆಯ ಲೆಕ್ಕ ಮಾತ್ರ. ಕರ್ನಾಟಕದಲ್ಲಿ ಎಲ್ಲ ರೈತರಿಗೂ ಯೂನಿಟ್​ಗೆ 4 ರೂ. ಸಿಗುತ್ತದೆ ಎಂದರ್ಥವಲ್ಲ. ವಿದ್ಯುತ್ ಖರೀದಿ ಒಪ್ಪಂದದ ದರವೇ ಅಂತಿಮವಾಗಿರುತ್ತದೆ. ಮೇಲಿನ ಮೊತ್ತ ಒಟ್ಟು ನಿರೀಕ್ಷಿತ ಆದಾಯವಾಗಿದ್ದು, ಸಾಲದ ಕಂತು, ಬಡ್ಡಿ, ನಿರ್ವಹಣೆ ಮತ್ತು ಇತರ ವೆಚ್ಚಗಳನ್ನು ಇದರಲ್ಲಿ ಕಡಿತಗೊಳಿಸಿಲ್ಲ.

ಸರ್ಕಾರದ ಸಬ್ಸಿಡಿ ಸಿಗುತ್ತದೆಯೇ?

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ (ಪಿಎಂ-ಕುಸುಮ್ ಯೋಜನೆಯ ಎ ವಿಭಾಗದಲ್ಲಿ ರೈತರು ಅಥವಾ ರೈತರ ಗುಂಪುಗಳು 500 ಕಿಲೋವಾಟ್​ನಿಂದ 2 ಮೆಗಾವಾಟ್​ವರೆಗಿನ ಘಟಕ ಸ್ಥಾಪಿಸಿ ವಿದ್ಯುತ್ ವಿತರಣಾ ಕಂಪನಿಗೆ ಮಾರಾಟ ಮಾಡಬಹುದು. ಕೃಷಿ ಮುಂದುವರಿಸಲು ಫಲಕಗಳನ್ನು ಎತ್ತರದ ರಚನೆಗಳ ಮೇಲೆ ಅಳವಡಿಸುವ ಅವಕಾಶವಿದೆ. ಆದರೆ ಈ ವಿಭಾಗದಲ್ಲಿ ರೈತರಿಗೆ ನೇರ ಬಂಡವಾಳ ಸಬ್ಸಿಡಿ ನೀಡುವ ವ್ಯವಸ್ಥೆ ಇಲ್ಲ. ಸ್ವಂತ ಹಣ ಅಥವಾ ಬ್ಯಾಂಕ್ ಸಾಲದ ಮೂಲಕ ಘಟಕ ಸ್ಥಾಪಿಸಬೇಕು. ಖಾಸಗಿ ಕಂಪನಿಯ ಸಹಭಾಗಿತ್ವದಲ್ಲೂ ಯೋಜನೆ ಕೈಗೊಳ್ಳಬಹುದು. ಇದೇ ಯೋಜನೆಯ ಬಿ ಮತ್ತು ಸಿ ವಿಭಾಗಗಳಲ್ಲಿ ಕೃಷಿ ಪಂಪ್​ಗಳ ಸೌರೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವು ದೊರೆಯುತ್ತದೆ.

ಸಾಮಾನ್ಯ ರಾಜ್ಯಗಳಲ್ಲಿ ಅರ್ಹ ವೆಚ್ಚದ ಶೇ. 30ರಷ್ಟು ಕೇಂದ್ರ ಸರ್ಕಾರ ಮತ್ತು ಕನಿಷ್ಠ ಶೇ. 30ರಷ್ಟು ರಾಜ್ಯ ಸರ್ಕಾರ ಭರಿಸುವ ವ್ಯವಸ್ಥೆಯಿದೆ. ಆದರೆ ಈ ಸಬ್ಸಿಡಿ ಅಗ್ರಿವೋಲ್ಟಾಯಿಕ್ಸ್ ವಿದ್ಯುತ್ ಮಾರಾಟ ಘಟಕಕ್ಕೆ ಅನ್ವಯಿಸುವುದಿಲ್ಲ; ಇದು ಕೃಷಿ ಪಂಪ್​ಗಳಿಗೆ ಸಂಬಂಧಿಸಿದ್ದು. ಅಗ್ರಿವೋಲ್ಟಾಯಿಕ್ಸ್​ಗೆ ಪ್ರತ್ಯೇಕ ಆರ್ಥಿಕ ನೆರವು ನೀಡುವ ಸಾಧ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ತಿಳಿಸಿದೆ. ಆದರೆ ಯೋಜನೆಯ ಮಾರ್ಗಸೂಚಿ, ಅರ್ಹತೆ ಮತ್ತು ಸಬ್ಸಿಡಿ ಪ್ರಮಾಣ ಪ್ರಕಟವಾಗುವವರೆಗೆ ರೈತರು ನೆರವು ಖಚಿತವೆಂದು ಭಾವಿಸುವಂತಿಲ್ಲ. ಕರ್ನಾಟಕದಲ್ಲಿ ಪಿಎಂ-ಕುಸುಮ್ ಎ ವಿಭಾಗದ ಅನುಷ್ಠಾನ ಮತ್ತು ಹೊಸ ಮಂಜೂರಾತಿ ಕುರಿತು ಕೆಆರ್​ಇಡಿಎಲ್ ಹಾಗೂ ಸ್ಥಳೀಯ ವಿದ್ಯುತ್ ವಿತರಣಾ ಕಂಪನಿಯಿಂದ ಮಾಹಿತಿ ಪಡೆಯಬೇಕು.

ಘಟಕ ಸ್ಥಾಪನೆಗೆ ವೆಚ್ಚ ಎಷ್ಟು?

ಸೌರ ಫಲಕಗಳು, ಇರ್ನರ್, ಕೇಬಲ್​ಗಳು, ಮೀಟರ್, ಕಂಬಗಳು, ಅಡಿಪಾಯ, ವಿದ್ಯುತ್ ಸಂಪರ್ಕ ಮತ್ತು ಅಳವಡಿಕೆ ವೆಚ್ಚ ಸೇರಿ ಒಟ್ಟು ಬಂಡವಾಳ ನಿರ್ಧಾರವಾಗುತ್ತದೆ. ಅಗ್ರಿವೋಲ್ಟಾಯಿಕ್ಸ್​ನಲ್ಲಿ ಫಲಕಗಳನ್ನು ಎತ್ತರದಲ್ಲಿ ಅಳವಡಿಸಬೇಕಿರುವುದರಿಂದ ಸಾಮಾನ್ಯ ಸೌರ ಘಟಕಕ್ಕಿಂತ ವೆಚ್ಚ ಹೆಚ್ಚಾಗುತ್ತದೆ. ಒಂದು ಅಂದಾಜಿನ ಪ್ರಕಾರ, ಎತ್ತರದ ರಚನೆಗಳಿರುವ ಅಗ್ರಿವೋಲ್ಟಾಯಿಕ್ಸ್ ಘಟಕದ ವೆಚ್ಚ ಪ್ರತಿ ಮೆಗಾವಾಟ್​ಗೆ ಸುಮಾರು 4.30 ಕೋಟಿ ರೂ. ಸಾಮಾನ್ಯ ನೆಲಮಟ್ಟದ ಸೌರ ಘಟಕಕ್ಕೆ ಸುಮಾರು 3.50 ಕೋಟಿ ರೂ. ಆಗಬಹುದು. ಈ ಅಂದಾಜಿನ ಆಧಾರದಲ್ಲಿ 100 ಕಿಲೋವಾಟ್ ಘಟಕಕ್ಕೆ ಸುಮಾರು 43 ಲಕ್ಷ ರೂ., 200 ಕಿಲೋವಾಟ್​ಗೆ 86 ಲಕ್ಷ ರೂ. ಮತ್ತು 500 ಕಿಲೋವಾಟ್​ಗೆ 2.15 ಕೋಟಿ ರೂ. ಬೇಕಾಗಬಹುದು. ಇವು ಸ್ಥೂಲ ಅಂದಾಜುಗಳಷ್ಟೇ; ಸಣ್ಣ ಘಟಕಗಳ ವೆಚ್ಚ ಪ್ರತಿ ಕಿಲೋವಾಟ್​ಗೆ ಹೆಚ್ಚಾಗುವ ಸಾಧ್ಯತೆಯಿದೆ. ಸೌರ ವಿದ್ಯುತ್ ಕಂಪನಿಗಳು ಅಥವಾ ಎಂಜಿನಿಯರಿಂಗ್, ಪ್ರೊಕ್ಯೂರ್​ವೆುಂಟ್, ಕನ್ಸ್​ಟ್ರಕ್ಷನ್ (ಇಪಿಸಿ) ಗುತ್ತಿಗೆದಾರರು ಜಮೀನಿನ ಪರಿಶೀಲನೆ ನಡೆಸಿ ಘಟಕ ಸ್ಥಾಪಿಸುತ್ತಾರೆ. ರೈತರು ಸ್ವಂತವಾಗಿ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ ಕಂಪನಿಗೆ ಜಮೀನು ಗುತ್ತಿಗೆ ನೀಡುವ ಆಯ್ಕೆಯೂ ಇದೆ. ಈ ಸಂದರ್ಭದಲ್ಲಿ ಗುತ್ತಿಗೆ ಬಾಡಿಗೆ ಅಥವಾ ಆದಾಯ ಹಂಚಿಕೆಯ ಷರತ್ತುಗಳನ್ನು ಒಪ್ಪಂದದಲ್ಲಿ ಸ್ಪಷ್ಟಪಡಿಸಬೇಕು.

ವಿದ್ಯುತ್ ಮಾರಾಟ ಯಾರಿಗೆ?

ಉತ್ಪಾದನೆಯಾದ ವಿದ್ಯುತ್ತನ್ನು ಸ್ಥಳೀಯ ವಿದ್ಯುತ್ ವಿತರಣಾ ಕಂಪನಿಗೆ ಮಾರಾಟ ಮಾಡಬಹುದು. ಕರ್ನಾಟಕದಲ್ಲಿ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ ಮತ್ತು ಚೆಸ್ಕಾಂ ತಮ್ಮ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಿಸುತ್ತವೆ. ಆದರೆ ರೈತರು ತಮಗೆ ಬೇಕಾದ ದರದಲ್ಲಿ ವಿದ್ಯುತ್ ಮಾರಲು ಸಾಧ್ಯವಿಲ್ಲ. ಸಂಬಂಧಿಸಿದ ಕಂಪನಿಯ ಒಪ್ಪಿಗೆ, ವಿದ್ಯುತ್ ಜಾಲದ ಸಾಮರ್ಥ್ಯ ಮತ್ತು ಖರೀದಿ ಒಪ್ಪಂದ ಅಗತ್ಯ. ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದ ನಿಯಮಗಳೂ ಅನ್ವಯಿಸುತ್ತವೆ. ಉದಾಹರಣೆಗೆ, 100 ಕಿಲೋವಾಟ್ ಘಟಕದಿಂದ ವರ್ಷಕ್ಕೆ 1.3 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆಯಾದರೆ, ಯೂನಿಟ್​ಗೆ 4 ರೂ. ದರದಂತೆ 5.2 ಲಕ್ಷ ರೂ. ಒಟ್ಟು ಆದಾಯ ಬರಬಹುದು. ಈ ಹಣದಿಂದ ಸಾಲದ ಕಂತು, ನಿರ್ವಹಣೆ ಮತ್ತು ಇತರ ವೆಚ್ಚಗಳನ್ನು ಕಳೆಯಬೇಕು. ವಿದ್ಯುತ್ ಖರೀದಿ ಒಪ್ಪಂದ ಇಲ್ಲದೆ ಘಟಕ ಸ್ಥಾಪಿಸುವುದು ನಷ್ಟಕ್ಕೆ ದಾರಿ ಮಾಡಿಕೊಡಬಹುದು.

ಕಂಪನಿಗೆ ಗುತ್ತಿಗೆ ನೀಡಿದರೂ ರೈತ ಬೆಳೆ ಬೆಳೆಯಬಹುದೇ?

ಕಂಪನಿಗೆ ಜಮೀನು ಗುತ್ತಿಗೆ ನೀಡಿದ ಮಾತ್ರಕ್ಕೆ ರೈತರು ಕೃಷಿ ಮಾಡುವ ಹಕ್ಕನ್ನು ಕಳೆದುಕೊಳ್ಳಬೇಕು ಎಂದಿಲ್ಲ. ಆದರೆ ಗುತ್ತಿಗೆ ಒಪ್ಪಂದದಲ್ಲಿ ಕೃಷಿ ಮಾಡುವ ಹಕ್ಕು, ಬೆಳೆ ಆಯ್ಕೆ, ನೀರಿನ ಬಳಕೆ ಮತ್ತು ಕೃಷಿ ಯಂತ್ರಗಳ ಸಂಚಾರಕ್ಕೆ ಅವಕಾಶವಿರುವುದನ್ನು ಸ್ಪಷ್ಟವಾಗಿ ನಮೂದಿಸಬೇಕು. ಕೇಂದ್ರ ಸರ್ಕಾರದ ಪಿಎಂ-ಕುಸುಮ್ ಮಾರ್ಗಸೂಚಿಯಲ್ಲಿಯೂ ಕೃಷಿ ಭೂಮಿಯಲ್ಲಿ ಫಲಕಗಳನ್ನು ಎತ್ತರದ ರಚನೆಗಳ ಮೇಲೆ ಅಳವಡಿಸಿ, ಸಾಲುಗಳ ನಡುವೆ ಸಾಕಷ್ಟು ಅಂತರ ಬಿಡುವ ಮೂಲಕ ಕೃಷಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ. ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೊದಲು 4 ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು- 1. ಜಮೀನಿನ ಮಾಲೀಕತ್ವ ರೈತರ ಬಳಿಯೇ ಉಳಿಯಬೇಕು; 2. ಫಲಕಗಳ ಕೆಳಗೆ ಮತ್ತು ನಡುವಿನ ಜಾಗದಲ್ಲಿ ಕೃಷಿ ಮುಂದುವರಿಸುವ ಹಕ್ಕು ಇರಬೇಕು; 3. ಕೃಷಿ ನೀರು, ರಸ್ತೆ ಮತ್ತು ಯಂತ್ರೋಪಕರಣಗಳ ಬಳಕೆಗೆ ನಿರ್ಬಂಧ ಇರಬಾರದು; 4. ಗುತ್ತಿಗೆ ಅವಧಿ ಮುಗಿದಾಗ ಫಲಕಗಳನ್ನು ತೆರವುಗೊಳಿಸಿ ಜಮೀನನ್ನು ಕೃಷಿಗೆ ಯೋಗ್ಯ ಸ್ಥಿತಿಯಲ್ಲಿ ಹಿಂದಿರುಗಿಸುವ ಹೊಣೆ ಕಂಪನಿಯದ್ದಾಗಿರಬೇಕು.