ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್​ ಖಾತೆ ಬ್ಯಾನ್​ ಆಗಿದ್ದೇಕೆ? ಕೊನೆಗೂ ಉತ್ತರ ನೀಡಿದ ಕೇಂದ್ರ ಸರ್ಕಾರ! Cockroach Janata Party

ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್​ ಖಾತೆ ಬ್ಯಾನ್​ ಆಗಿದ್ದೇಕೆ? ಕೊನೆಗೂ ಉತ್ತರ ನೀಡಿದ ಕೇಂದ್ರ ಸರ್ಕಾರ! Cockroach Janata Party
ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್​ ಖಾತೆ ಬ್ಯಾನ್​ ಆಗಿದ್ದೇಕೆ? ಕೊನೆಗೂ ಉತ್ತರ ನೀಡಿದ ಕೇಂದ್ರ ಸರ್ಕಾರ! Cockroach Janata Party
Published on

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ತನ್ನ ವಿಡಂಬನಾತ್ಮಕ ಪೋಸ್ಟ್‌ಗಳ ಮೂಲಕ ಭಾರಿ ಹವಾ ಸೃಷ್ಟಿ ಮಾಡಿರುವ 'ಕಾಕ್ರೋಚ್ ಜನತಾ ಪಾರ್ಟಿ'
  • ಸಖತ್​ ಕ್ರೇಜ್​ ಸೃಷ್ಟಿ ಮಾಡಿದ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್​ ಖಾತೆ ನಿರ್ಬಂಧ
  • ಭಾರತದಲ್ಲಿ ಏಕಾಏಕಿ ಸಿಜೆಪಿ ಎಕ್ಸ್​ ಖಾತೆ ನಿಷೇಧಿಸಿದ್ದರ ಹಿಂದಿನ ಅಸಲಿ ಕಾರಣವನ್ನು ಬಿಚ್ಚಿಟ್ಟ ಕೇಂದ್ರ ಸರ್ಕಾರ
  • ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ಕಾರಣಗಳಿಗಾಗಿ ಕೈಗೊಂಡಿರುವ ಕ್ರಮ ಎಂದ ಕೇಂದ್ರ ಸರ್ಕಾರ
Cockroach Janata Party : ದೇಶಾದ್ಯಂತ ತನ್ನ ವಿಡಂಬನಾತ್ಮಕ ಪೋಸ್ಟ್‌ಗಳ ಮೂಲಕ ಭಾರಿ ಹವಾ ಸೃಷ್ಟಿ ಮಾಡಿದ್ದ 'ಕಾಕ್ರೋಚ್ ಜನತಾ ಪಾರ್ಟಿ'ಯ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ಏಕಾಏಕಿ ನಿಷೇಧಿಸಿದ್ದರ ಹಿಂದಿನ ಅಸಲಿ ರಹಸ್ಯವನ್ನು ಕೇಂದ್ರ ಸರ್ಕಾರ ಕೊನೆಗೂ ಬಹಿರಂಗಪಡಿಸಿದೆ.
ಈ ಜನಪ್ರಿಯ ಪ್ಲಾಟ್‌ಫಾರ್ಮ್‌ನ ಸಡನ್ ಬ್ಯಾನ್‌ನಿಂದಾಗಿ ಇಂಟರ್ನೆಟ್‌ನಲ್ಲಿ ತರಹೇವಾರಿ ಚರ್ಚೆಗಳು ನಡೆಯುತ್ತಿದ್ದ ಬೆನ್ನಲ್ಲೇ, ಇದು ಯಾವುದೇ ಸಾಧಾರಣ ರಾಜಕೀಯ ವಿರೋಧಕ್ಕಾಗಿ ಅಲ್ಲ, ಬದಲಿಗೆ ದೇಶದ "ರಾಷ್ಟ್ರೀಯ ಭದ್ರತೆಗೆ ಧಕ್ಕೆ" ತರುವಂತಹ ಗಂಭೀರ ಕಾರಣಗಳಿಗಾಗಿ ಕೈಗೊಂಡಿರುವ ಕ್ರಮ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಕಾಕ್ರೋಚ್ ಜನತಾ ಪಾರ್ಟಿಯ ಇನ್‌ಸ್ಟಾಗ್ರಾಮ್ ಖಾತೆಯನ್ನು ಭಾರತದಲ್ಲಿ ಇನ್ನೂ ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿಲ್ಲವಾದರೂ, ಅದರ ವಿರುದ್ಧದ ಕಾನೂನು ಕ್ರಮಗಳು ಸದ್ಯ "ಪ್ರಗತಿಯಲ್ಲಿದೆ" ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್​ಸ್ಟಾಗ್ರಾಂ ಖಾತೆಯೂ ಬ್ಯಾನ್​ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಗುರುವಾರ ಸಂಜೆಯ ವೇಳೆಗೆ ಬರೋಬ್ಬರಿ 16 ಮಿಲಿಯನ್‌ಗಿಂತಲೂ (1.6 ಕೋಟಿ) ಹೆಚ್ಚು ಫಾಲೋವರ್ಸ್‌ ಹೊಂದುವ ಮೂಲಕ ಎಕ್ಸ್ (ಟ್ವಿಟರ್) ಖಾತೆಗಿಂತಲೂ ಹತ್ತಾರು ಪಟ್ಟು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿಕೊಂಡಿದ್ದ ಇನ್‌ಸ್ಟಾಗ್ರಾಮ್ ಪೇಜ್‌ಗೆ ಬಿಗಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿರುವುದು ನೆಟ್ಟಿಗರಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ನೀಡಿದ ರಹಸ್ಯ ಮಾಹಿತಿಯ ಮೇರೆಗೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಾಹಿತಿ ತಂತ್ರಜ್ಞಾನ ಕಾಯ್ದೆಯ (IT Act) ಸೆಕ್ಷನ್ 69A ಅಡಿಯಲ್ಲಿ ಭಾರತದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಎಕ್ಸ್ ಖಾತೆಯನ್ನು ತಡೆಹಿಡಿಯುವಂತೆ ಎಕ್ಸ್ ಸಂಸ್ಥೆಗೆ ನೇರ ನಿರ್ದೇಶನ ನೀಡಿದ ಕೆಲವೇ ಗಂಟೆಗಳಲ್ಲಿ ಎಕ್ಸ್​ ಖಾತೆಯನ್ನು ಬ್ಯಾನ್​ ಮಾಡಲಾಯಿತು. ದೇಶದ ಆಂತರಿಕ ಭದ್ರತೆಯ ಹಿತದೃಷ್ಟಿಯಿಂದ ಗುಪ್ತಚರ ಇಲಾಖೆ ನೀಡಿದ ಗಂಭೀರ ಇನ್‌ಪುಟ್‌ಗಳ ಆಧಾರದ ಮೇಲೆಯೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳ ಪ್ರಕಾರ, ಈ ವಿಡಂಬನಾತ್ಮಕ ಪ್ಲಾಟ್‌ಫಾರ್ಮ್ ಭಾರತದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಲ್ಲ "ಉದ್ರೇಕಕಾರಿ ಮತ್ತು ಪ್ರಚೋದನಾತ್ಮಕ ಕಂಟೆಂಟ್" ಪೋಸ್ಟ್ ಮಾಡುತ್ತಿದೆ ಎಂಬ ಗಂಭೀರ ಆತಂಕ ಎದುರಾಗಿತ್ತು. ಬ್ಲಾಕಿಂಗ್ ಆದೇಶಗಳು ಅತ್ಯಂತ ರಹಸ್ಯವಾಗಿರುವುದರಿಂದ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, "ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯು ದೇಶದ ಏಕತೆಗೆ ಸಂಕಷ್ಟ ತಂದೊಡ್ಡುವ ಮುನ್ಸೂಚನೆ ಸಿಕ್ಕಿದ್ದರಿಂದಲೇ, ಅದನ್ನು ತಕ್ಷಣವೇ ಬ್ಲಾಕ್ ಮಾಡಲು ಐಬಿಯಿಂದ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕಟ್ಟುನಿಟ್ಟಿನ ಇನ್‌ಪುಟ್ ಸಿಕ್ಕಿತ್ತು" ಎಂದು ತಿಳಿಸಿದ್ದಾರೆ ಎಂದು ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.
ಇದರೊಂದಿಗೆ, ದೇಶದ ಭದ್ರತೆಗೆ ಅಪಾಯ ತಂದೊಡ್ಡುವಂತಹ ಪೋಸ್ಟ್‌ಗಳನ್ನು ಈ ಖಾತೆಯ ಮೂಲಕ ಹರಡಲಾಗುತ್ತಿದೆ ಎಂಬ ಬಲವಾದ ನಂಬಿಕೆ ಗುಪ್ತಚರ ಇಲಾಖೆಗೆ ಇತ್ತು ಎಂದು ಅಧಿಕಾರಿಗಳು ಸೇರಿಸಿದ್ದಾರೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಯುವ ಬಳಕೆದಾರರಲ್ಲಿ ಈ ಪ್ಲಾಟ್‌ಫಾರ್ಮ್‌ನ ಕಂಟೆಂಟ್ ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಜನಪ್ರಿಯತೆ ಪಡೆಯುತ್ತಿದ್ದುದು ಸಹ ಕೇಂದ್ರ ಸರ್ಕಾರದ ಆತಂಕ ಹಾಗೂ ಕಳವಳವನ್ನು ಮತ್ತಷ್ಟು ಹೆಚ್ಚಿಸಲು ಪ್ರಮುಖ ಕಾರಣವಾಯಿತು ಎಂದು ಅಧಿಕಾರಿಗಳು ಹಂಚಿಕೊಂಡಿರುವುದಾಗಿ ವರದಿಯಾಗಿದೆ.
'ಕಾಕ್ರೋಚ್ ಜನತಾ ಪಾರ್ಟಿ'ಯ ಎಕ್ಸ್ (ಟ್ವಿಟರ್) ಖಾತೆಯು ಜಾಗತಿಕವಾಗಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದುವ ಮುನ್ನವೇ, ಅಂದರೆ ಅದು ಸುಮಾರು 90 ಸಾವಿರ ಫಾಲೋವರ್ಸ್‌ ಹೊಂದಿದ್ದಾಗಲೇ ಅದನ್ನು ಬ್ಲಾಕ್ ಮಾಡುವ ಪ್ರಕ್ರಿಯೆ ಆರಂಭವಾಗಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ಈ ಪ್ಲಾಟ್‌ಫಾರ್ಮ್‌ನ ಇನ್‌ಸ್ಟಾಗ್ರಾಮ್ ಖಾತೆಯು ಬರೋಬ್ಬರಿ 19 ಮಿಲಿಯನ್‌ಗೂ (1.9 ಕೋಟಿ) ಅಧಿಕ ಫಾಲೋವರ್ಸ್‌ಗಳನ್ನು ಹೊಂದುವ ಮೂಲಕ ದೇಶದ ಆಡಳಿತಾರೂಢ 'ಭಾರತೀಯ ಜನತಾ ಪಾರ್ಟಿ'ಯ (BJP) ಅಧಿಕೃತ ಇನ್‌ಸ್ಟಾಗ್ರಾಮ್ ಪೇಜ್‌ನ ಫಾಲೋವರ್ಸ್‌ ಸಂಖ್ಯೆಯನ್ನೇ ಹಿಂದಿಕ್ಕಿ ಭಾರತದ ಅತ್ಯಂತ ಜನಪ್ರಿಯ ವಿಡಂಬನಾತ್ಮಕ ಪುಟವಾಗಿ ಹೊರಹೊಮ್ಮಿತ್ತು. ಹೀಗಾಗಿಯೇ ಇದರ ಇನ್‌ಸ್ಟಾಗ್ರಾಮ್ ಖಾತೆಯನ್ನೂ ಸಹ ಬ್ಲಾಕ್ ಮಾಡುವ ಪ್ರಕ್ರಿಯೆ ಸದ್ಯ ಚಾಲ್ತಿಯಲ್ಲಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆದಾಗ್ಯೂ, ಎಕ್ಸ್ ಸಂಸ್ಥೆಯ ಜಿಯೋ-ರೆಸ್ಟ್ರಿಕ್ಷನ್ (ಭೌಗೋಳಿಕ ನಿರ್ಬಂಧ) ನೀತಿಯ ಅನ್ವಯ, ಈ ಎಕ್ಸ್ ಖಾತೆಯನ್ನು ಭಾರತದಲ್ಲಿ ಮಾತ್ರ ತಡೆಹಿಡಿಯಲಾಗಿದ್ದು, ವಿದೇಶಗಳಲ್ಲಿ ಇದು ಎಂದಿನಂತೆ ಲಭ್ಯವಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69A ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಇದು ದೇಶದ ಸಾರ್ವಭೌಮತ್ವ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಹಿತದೃಷ್ಟಿಯಿಂದ ಆನ್‌ಲೈನ್ ಕಂಟೆಂಟ್‌ಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ನೀಡುತ್ತದೆ. ಈ ಇಡೀ ಬ್ಲಾಕಿಂಗ್ ಪ್ರಕ್ರಿಯೆಯನ್ನು ಐಟಿ ರೂಲ್ಸ್ 2009ರ ನಿಯಮಾವಳಿಗಳ ಪ್ರಕಾರ ನಿರ್ವಹಿಸಲಾಗುತ್ತದೆಯಲ್ಲದೆ, ಈ ಕಾನೂನಿನಡಿ ಹೊರಡಿಸಲಾಗುವ ಎಲ್ಲಾ ಆದೇಶಗಳನ್ನು ಅತ್ಯಂತ ಗೌಪ್ಯವಾಗಿಡಲಾಗುತ್ತದೆ. ಇನ್ನು ವಿಶೇಷವೆಂದರೆ, "ವ್ಯವಸ್ಥೆಯ ಮೇಲೆ ದಾಳಿ ಮಾಡುವ" ಜನರ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ನೀಡಿದ್ದ ಹೇಳಿಕೆಯು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ, ಈ ಪ್ರಸಿದ್ಧ ವಿಡಂಬನಾತ್ಮಕ ಸಾಮಾಜಿಕ ಜಾಲತಾಣ ಪುಟವನ್ನು ಆರಂಭಿಸಲಾಗಿತ್ತು ಎಂಬುದು ಗಮನಾರ್ಹ. ಮೂಲಗಳ ಪ್ರಕಾರ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂಬ ಕಾರಣವನ್ನು ಕೇಂದ್ರ ಸರ್ಕಾರದ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಆಡಳಿತ ವ್ಯವಸ್ಥೆಯಲ್ಲಿ ಹುಟ್ಟಿಕೊಂಡ ಭೀತಿ

ಕೇವಲ ನಾಲ್ಕೇ ದಿನಗಳಲ್ಲಿ 1 ಕೋಟಿಗೂ (10M) ಅಧಿಕ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌, 2 ಲಕ್ಷಕ್ಕೂ ಹೆಚ್ಚು ಎಕ್ಸ್ (ಟ್ವಿಟರ್) ಫಾಲೋವರ್ಸ್‌ ಹಾಗೂ 2 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದುವ ಮೂಲಕ ದೇಶದ ಯುವಜನತೆಯಲ್ಲಿ ವ್ಯವಸ್ಥೆಯ ವಿರುದ್ಧ ಇರುವ ತೀವ್ರ ಆಕ್ರೋಶಕ್ಕೆ ಕನ್ನಡಿ ಹಿಡಿದಿದ್ದ 'ಕಾಕ್ರೋಚ್ ಜನತಾ ಪಾರ್ಟಿ'ಯ ಅದ್ಭುತ ಬೆಳವಣಿಗೆಗೆ ಹೆದರಿರುವ ಬಿಜೆಪಿ ಸರ್ಕಾರ, ಈಗ ಅವರ ಖಾತೆಗಳನ್ನು ನಿರ್ಬಂಧಿಸಲು 'ರಾಷ್ಟ್ರೀಯ ಭದ್ರತೆ'ಯ ನೆಪವೊಡ್ಡುತ್ತಿರುವುದು ಆಡಳಿತ ವ್ಯವಸ್ಥೆಯಲ್ಲಿ ಹುಟ್ಟಿಕೊಂಡಿರುವ ಭೀತಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಸುಪ್ರೀಂಕೋರ್ಟ್​ ವಕೀಲರಾದ ಪ್ರಶಾಂತ್​ ಭೂಷಣ್​ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಕಾಕ್ರೋಚ್​ ಜನತಾ ಪಾರ್ಟಿಯ ಬ್ಯಾನ್​ ಕುರಿತಾ ಪತ್ರಿಕಾ ವರದಿಯ ತುಣುಕೊಂದನ್ನು ಶೇರ್​ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಭಿಜೀತ್ ದಿಪ್ಕೆ ರೂವಾರಿ
ದೇಶಾದ್ಯಂತ ಯುವಕರನ್ನು ಸೆಳೆಯುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' ವೆಬ್‌ಸೈಟ್‌ನ ಹಿಂದಿರುವ ರೂವಾರಿ ಪುಣೆ ಮೂಲದ ರಾಜಕೀಯ ಸಂವಹನ ತಂತ್ರಜ್ಞ 30 ವರ್ಷದ ಅಭಿಜೀತ್ ದಿಪ್ಕೆ. ಪುಣೆಯಲ್ಲಿ ಪತ್ರಿಕೋದ್ಯಮ ಮುಗಿಸಿ ಪ್ರಸ್ತುತ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (PR) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಇವರು, ಈ ಕಾಲ್ಪನಿಕ ಪಕ್ಷದ "ಸಂಸ್ಥಾಪಕ ಅಧ್ಯಕ್ಷ" ಎಂದು ಕರೆದುಕೊಂಡಿದ್ದಾರೆ.
ಈ ಹಿಂದೆ 2020 ರಿಂದ 2023 ರವರೆಗೆ ಆಮ್ ಆದ್ಮಿ ಪಾರ್ಟಿಯ (AAP) ಸೋಶಿಯಲ್ ಮೀಡಿಯಾ ತಂಡದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದ್ದ ಅಭಿಜೀತ್, 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಪರವಾಗಿ ಮೀಮ್ಸ್ ಆಧಾರಿತ ಡಿಜಿಟಲ್ ಕ್ಯಾಂಪೇನ್ ನಡೆಸಿ ಯುವಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜನರ ರಾಜಕೀಯ ಅಭಿಪ್ರಾಯಗಳನ್ನು ಹೇಗೆ ಪ್ರಭಾವಿಸಬೇಕೆಂಬುದರಲ್ಲಿ ಪರಿಣಿತರಾಗಿರುವ ಇವರು ಮೇ 16 ರಂದು 'X' (ಟ್ವಿಟರ್) ನಲ್ಲಿ ಗೂಗಲ್ ಫಾರ್ಮ್ ಹಂಚಿಕೊಳ್ಳುವ ಮೂಲಕ ಈ ನೂತನ ವ್ಯಂಗ್ಯಭರಿತ ರಾಜಕೀಯ ಆಂದೋಲನಕ್ಕೆ ಚಾಲನೆ ನೀಡಿದರು. ಆದರೆ, ಇದೀಗ ಆ ಆಂದೋಲನಕ್ಕೆ ಕೇಂದ್ರ ಸರ್ಕಾರ ಬ್ರೇಕ್​ ಹಾಕಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net