_1781629413812.webp?w=480&auto=format%2Ccompress&fit=max)
_1781629413812.webp?w=480&auto=format%2Ccompress&fit=max)
ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಅಮೆರಿಕ-ಇರಾನ್ ನಡುವಿನ ಯುದ್ಧ ಕೊನೆಗೂ ಮುಕ್ತಾಯದ ಹಂತದಲ್ಲಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಶಾಂತಿ ಒಪ್ಪಂದಕ್ಕೆ ಇದೇ 19ರಂದು ಅಧಿಕೃತವಾಗಿ ಸಹಿ ಬೀಳಲಿದೆ. ಯುದ್ಧದಿಂದ ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಭಾರಿ ಮೊತ್ತದ ಪರಿಹಾರವನ್ನು ಇರಾನ್ಗೆ ನೀಡಲು ಒಪ್ಪಿದ್ದಾರೆ. ಆದರೆ, ಈ ಸಮರದಲ್ಲಿ ಮೊದಲಿಂದ ಇರಾನ್ ತೋರಿದ ಪ್ರತಿರೋಧ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅಮೆರಿಕದ ಸೇನಾನೆಲೆಗಳನ್ನು ನಾಶಗೊಳಿಸಿದ ಪರಿ ಅಸಾಧಾರಣ. ಸಮರದಲ್ಲಿ ಇರಾನ್ ದೊಡ್ಡ ನಷ್ಟ ಅನುಭವಿಸಿರುವುದು ಹೌದಾದರೂ, ಅಮೆರಿಕಕ್ಕೆ ಮರೆಯಲಾಗದಂಥ ತಿರುಗೇಟು ನೀಡಿದೆ. ಆದರೆ, ಈ ಶಾಂತಿ ಒಪ್ಪಂದ ದೀರ್ಘಾವಧಿಗೆ ಮುಂದುವರಿಯುವುದೆ? ಯುದ್ಧ ನಿಂತರೂ ಅದರಿಂದ ಸೃಷ್ಟಿಯಾದ ಇತರ ಸಮಸ್ಯೆಗಳು ಪರಿಹಾರ ಕಾಣುವವೆ? ಇಸ್ರೇಲ್ನ ಮುಂದಿನ ನಡೆ ಏನು? ಈ ಎಲ್ಲ ಸಂಗತಿಗಳ ಅವಲೋಕನ ಇಲ್ಲಿದೆ.
ನೂರೇಳು ದಿನಗಳ ಕಾಲ ನಡೆದ ಭೀಕರ ಸಂಘರ್ಷ ಮತ್ತು ತಲ್ಲಣದ ನಂತರ, ಅಂತಿಮವಾಗಿ ಅಮೆರಿಕ ಮತ್ತು ಇರಾನ್ ಯುದ್ಧವನ್ನು ಕೊನೆಗೊಳಿಸಲು ಒಪ್ಪಿಗೆ ಸೂಚಿಸಿವೆ. ಭಾನುವಾರವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಒಪ್ಪಂದ ಯಶಸ್ವಿಯಾಗಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇರಾನ್ ಸಹ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಇದರ ಮುಂದುವರಿದ ಭಾಗವಾಗಿ, ಜೂನ್ 19ರಂದು ಜಿನೆವಾದಲ್ಲಿ ಉಭಯ ದೇಶಗಳು ತಿಳಿವಳಿಕಾ ಪತ್ರಕ್ಕೆ ಸಹಿ ಹಾಕಲಿದ್ದು, ಮುಂದಿನ 60 ದಿನಗಳವರೆಗೆ ಅಂತಿಮ ಒಪ್ಪಂದಕ್ಕಾಗಿ ಮಾತುಕತೆಗಳು ನಡೆಯಲಿವೆ. ತೆರೆಮರೆಯಲ್ಲಿ ಈ ಮಹತ್ವದ ಒಪ್ಪಂದ ನಡೆದಿದ್ದು ಹೇಗೆ? ಈ ಯುದ್ಧದಲ್ಲಿ ಅಂತಿಮವಾಗಿ ಗೆದ್ದವರು ಯಾರು? ಮತ್ತು ಮುಂದಿನ ದಿನಗಳಲ್ಲಿ ಏನಾಗಬಹುದು? ಎಂಬ ಕುತೂಹಲದ ಜಿಜ್ಞಾಸೆಗೆ ಇಲ್ಲಿದೆ ಉತ್ತರ.
ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿದೆಯಾದರೂ, ಈ ಘೊಷಣೆಯನ್ನು ‘ಯುದ್ಧದ ಸಂಪೂರ್ಣ ಅಂತ್ಯ’ ಎಂದು ಕರೆಯುವುದು ಸದ್ಯಕ್ಕೆ ದುಡುಕಿನ ನಿರ್ಧಾರವಾಗುತ್ತದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ.
ಟ್ರಂಪ್ ಷರತ್ತು: ಯುದ್ಧ ನಿಲ್ಲಿಸಲು ಒಪ್ಪಂದವಾಗಿದ್ದರೂ, ಇರಾನ್ನ ಪರಮಾಣು ಕಾರ್ಯಕ್ರಮದ ಮೇಲಿನ ಅಮೆರಿಕದ ನಿಲುವು ಇನ್ನೂ ಕಠಿಣವಾಗಿದೆ. ಅದರಲ್ಲಿ ತೃಪ್ತಿ ಸಿಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.
ಇಸ್ರೇಲ್ನ ನಿಲುವು: ಒಪ್ಪಂದದ ಘೊಷಣೆಗೆ ಕೆಲವೇ ಗಂಟೆಗಳ ಮುನ್ನ ಇಸ್ರೇಲ್ ಲೆಬನಾನ್ ಮೇಲೆ ಬಾಂಬ್ ದಾಳಿ ನಡೆಸಿದೆ. ದಕ್ಷಿಣ ಲೆಬನಾನ್ನಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಅಲ್ಲದೆ, ಇರಾನ್ ಜತೆಗೆ ಸಮರ ಕೊನೆಗೊಳಿಸುವ ಸಂಬಂಧ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ತೀವ್ರವಾದ ಭಿನ್ನಾಭಿಪ್ರಾಯಗಳಿವೆ.
ಇರಾನ್ನ ಬೇಡಿಕೆಗಳು: ಒಪ್ಪಂದ ದೀರ್ಘಕಾಲ ಉಳಿಯಬೇಕಾದರೆ ಅಮೆರಿಕ ನೌಕಾ ದಿಗ್ಬಂಧನ ತೆಗೆಯಬೇಕು, ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಬೇಕು ಮತ್ತು ಇರಾನ್ನ ಫ್ರೀಜ್ ಮಾಡಲಾದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಇರಾನ್ ಷರತ್ತು ವಿಧಿಸಿದೆ. ಆದರೆ, ಈ ಕುರಿತಂತೆ ಅಮೆರಿಕ ಹೇಳಿದಂತೆ ನಡೆಯದಿದ್ದರೆ ಮುಂದಿನ ದಾರಿ ಕಷ್ಟ.
ಯುದ್ಧ ಆರಂಭವಾದಾಗ ಸಂಧಾನದ ಜವಾಬ್ದಾರಿಯನ್ನು ಮೊದಲು ಪಾಕಿಸ್ತಾನ ವಹಿಸಿಕೊಂಡಿದ್ದರೂ, ಕೊನೆಯ ಹಂತದಲ್ಲಿ ಕತಾರ್ ಮುಂಚೂಣಿಗೆ ಬಂದು ಒಪ್ಪಂದವನ್ನು ಯಶಸ್ವಿಗೊಳಿಸಿದೆ. ಜೂನ್ ಆರಂಭದಲ್ಲಿ ಕತಾರ್ ರಾಜಧಾನಿ ದೋಹಾದಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಇರಾನ್ನ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿ ಬಿಡುಗಡೆ ಮತ್ತು ಹೊಮುಜ್ ಜಲಸಂಧಿ ವಿವಾದದ ಬಗ್ಗೆ ನಿರ್ಣಾಯಕ ಮಾತುಕತೆ ನಡೆಯಿತು. ಜೂನ್ 14ರಂದು ಕತಾರ್ ಅಧಿಕಾರಿಗಳು ತಹರಾನ್ಗೆ ಭೇಟಿ ನೀಡಿ ಒಪ್ಪಂದ ಅಂತಿಮಗೊಳಿಸಿದರು. ಈ ಒಪ್ಪಂದದಲ್ಲಿ ಕತಾರ್ ಪ್ರವೇಶಿಸಲು ಆರ್ಥಿಕ ಕಾರಣಗಳಿವೆ. ಇರಾನ್ನ ಮುಟ್ಟುಗೋಲು ಹಾಕಿಕೊಳ್ಳಲಾದ ಹಣದ ಬಹುಪಾಲು ಕತಾರ್ ಬ್ಯಾಂಕ್ಗಳಲ್ಲಿದೆ. ಅಮೆರಿಕ ನೇರವಾಗಿ ಹಣ ನೀಡಿದರೆ ಅದು ತನ್ನ ಸೋಲಿನಂತೆ ಕಾಣುತ್ತದೆ, ಹಾಗಾಗಿ ಕತಾರ್ ಮೂಲಕ ಇದನ್ನು ವರ್ಗಾಯಿಸಲಾಗುತ್ತಿದೆ. ಪಾಕಿಸ್ತಾನಕ್ಕೆ ಉಭಯ ದೇಶಗಳನ್ನು ಒಪ್ಪಿಸುವಷ್ಟು ಜಾಗತಿಕ ವಿಶ್ವಾಸವಿರಲಿಲ್ಲ, ಅಂತಿಮವಾಗಿ ಕತಾರ್ ಮಧ್ಯಸ್ಥಿಕೆಯೇ ಕೆಲಸ ಮಾಡಿದೆ.
ಇಸ್ರೇಲ್ ಈ ಒಪ್ಪಂದದಿಂದ ತೀವ್ರ ಅಸಮಾಧಾನಗೊಂಡಿದೆ. ಅಮೆರಿಕ-ಇರಾನ್ ಒಪ್ಪಂದಕ್ಕೆ ತಾನು ಬದ್ಧವಾಗಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ಆದಾಗ್ಯೂ, ಈ ಯುದ್ಧದಲ್ಲಿ ಇಸ್ರೇಲ್ಗೆ ಒಂದು ದೊಡ್ಡ ಕಾರ್ಯತಂತ್ರದ ಲಾಭ ಸಿಕ್ಕಿದೆ. ಲೆಬನಾನ್ನ ಸುಮಾರು 2,000 ಚದರ ಕಿಲೋಮೀಟರ್ ಪ್ರದೇಶವನ್ನು ಇಸ್ರೇಲ್ ಈಗ ತನ್ನ ವಶಕ್ಕೆ ಪಡೆದಿದೆ. ಲಿತಾನಿ ನದಿಯನ್ನು ದಾಟಿ ದಕ್ಷಿಣ ಲೆಬನಾನ್ನ ಪ್ರಮುಖ ನಗರವಾದ ನಬತಿಯಾದವರೆಗೆ ಇಸ್ರೇಲ್ ಸೈನ್ಯ ತಲುಪಿದೆ. ಯುದ್ಧದ ಸಮಯದಲ್ಲಿ ತಾನು ವಶಪಡಿಸಿಕೊಂಡ ಭೂಮಿಯನ್ನು ಯಾವುದೇ ಕಾರಣಕ್ಕೂ ಮರಳಿ ನೀಡುವುದಿಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ ್ಜ ಹೇಳಿದ್ದಾರೆ. ಈ ಭಾಗವನ್ನು ‘ಸುರಕ್ಷಿತ ವಲಯ’ವನ್ನಾಗಿ ಮಾರ್ಪಡಿಸಿ, ಅಲ್ಲಿರುವ ಉಗ್ರಗಾಮಿ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಇಸ್ರೇಲ್ ನಿರ್ಧರಿಸಿದೆ. ಈ ವಿಷಯವನ್ನು ಪ್ರಧಾನಿ ನೆತನ್ಯಾಹು ಅವರು ಟ್ರಂಪ್ಗೂ ಸ್ಪಷ್ಟಪಡಿ ಸಿದ್ದಾರೆ.
ಶಾಂತಿ ಒಪ್ಪಂದಕ್ಕಾಗಿ 14 ಪ್ರಮುಖ ಅಂಶಗಳ ಮೇಲೆ ಸಹಮತ ಮೂಡಿದೆ. ಅವುಗಳಲ್ಲಿ ಪ್ರಮುಖವಾದವು.
ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಯುರೇನಿಯಂ ಸಂಗ್ರಹದ ಬಗ್ಗೆ ರ್ಚಚಿಸಲು ಸಿದ್ಧವಾಗಿದೆ.
ಅಮೆರಿಕವು ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ಸಂಪೂರ್ಣವಾಗಿ ಹಿಂಪಡೆಯಲಿದೆ.
ಹೊಮುಜ್ ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಇರಾನ್ ಸಂಪೂರ್ಣ ರಕ್ಷಣೆ ನೀಡಲಿದೆ.
ಕತಾರ್ ಬ್ಯಾಂಕ್ಗಳಲ್ಲಿರುವ ಇರಾನ್ನ ಮುಟ್ಟುಗೋಲು ಹಾಕಿಕೊಳ್ಳಲಾದ ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುವುದು.
ಸದ್ಯದ ಪರಿಸ್ಥಿತಿ ಮತ್ತು ಒಪ್ಪಂದದ ಷರತ್ತುಗಳನ್ನು ಗಮನಿಸಿದರೆ ಈ ಯುದ್ಧದಲ್ಲಿ ಇರಾನ್ನ ಮೇಲುಗೈ ಸ್ಪಷ್ಟವಾಗಿ ಕಾಣಿಸುತ್ತಿದೆ. ದುರ್ಬಲ ಆರ್ಥಿಕತೆಯ ಹೊರತಾಗಿಯೂ ಇರಾನ್, ಅಮೆರಿಕ ಮತ್ತು ಇಸ್ರೇಲ್ನ ಜಂಟಿ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದೆ. ಲೆಬನಾನ್ನಲ್ಲಿ ಅದರ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ಇನ್ನೂ ಸಕ್ರಿಯವಾಗಿದೆ. ಅಲ್ಲದೆ, ತನ್ನ ಫ್ರೀಜ್ ಆಗಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಅಮೆರಿಕವನ್ನು ಒಪ್ಪಿಸಿದೆ. ಯುದ್ಧದ ಆರಂಭದಲ್ಲಿ ಅಮೆರಿಕಕ್ಕೆ ಎರಡು ಪ್ರಮುಖ ಗುರಿಗಳಿದ್ದವು; ಒಂದು ಇರಾನ್ನ ಪರಮಾಣು ನೆಲೆಗಳನ್ನು ಧ್ವಂಸ ಮಾಡುವುದು, ಮತ್ತೊಂದು ತಹರಾನ್ನಲ್ಲಿ ಆಡಳಿತ ಬದಲಾವಣೆ ಮಾಡುವುದು. ಆದರೆ ಇವೆರಡೂ ಸಾಧ್ಯವಾಗಿಲ್ಲ. 2026ರ ನವೆಂಬರ್ನಲ್ಲಿ ಅಮೆರಿಕದಲ್ಲಿ ಮಧ್ಯಕಾಲೀನ ಚುನಾವಣೆ ಇರುವುದರಿಂದ, ದೇಶೀಯವಾಗಿ ತೈಲ ಬೆಲೆ ನಿಯಂತ್ರಿಸಲು ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದು ಅಮೆರಿಕದ ರಾಜತಾಂತ್ರಿಕ ಹಿನ್ನಡೆಯಾಗಿದೆ.
ಜಾಗತಿಕ ಇಂಧನ ಬಿಕ್ಕಟ್ಟು ಈಗ ತಿಳಿಯಾಗಲಿದೆ. ಫೆಬ್ರವರಿಯಲ್ಲಿ ಪ್ರತಿ ಬ್ಯಾರೆಲ್ಗೆ 72 ಡಾಲರ್ ಇದ್ದ ಕಚ್ಚಾ ತೈಲದ ಬೆಲೆ ಯುದ್ಧದ ವೇಳೆ ಬರೋಬ್ಬರಿ 120 ಡಾಲರ್ಗೆ ಏರಿತ್ತು. ಶಾಂತಿ ಒಪ್ಪಂದ ಘೊಷಣೆಯಾದ ಒಂದೇ ದಿನದಲ್ಲಿ ಬ್ರೆಂಟ್ ಕ್ರೂಡ್ ತೈಲ ಬೆಲೆ 4.1% ಕುಸಿದು 83.75 ಡಾಲರ್ಗೆ ತಲುಪಿದೆ. ಇದು ಇನ್ನೂ ಕಡಿಮೆಯಾಗುವ ಸಾಧ್ಯತೆಯಿದೆ.
ಭಾರತಕ್ಕೆ ಲಾಭ: ಭಾರತದಲ್ಲಿ ಯುದ್ಧದ ಕಾರಣದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲೀಟರ್ಗೆ 7.5 ರೂಪಾಯಿಗಳಷ್ಟು ಹೆಚ್ಚಾಗಿವೆ. ಕಚ್ಚಾ ತೈಲ ಬೆಲೆ ಇಳಿಕೆಯಾಗುವುದರಿಂದ ಭಾರತದಲ್ಲಿ ಇಂಧನ ಬೆಲೆಗಳು ಕಡಿಮೆಯಾಗಲಿದ್ದು, ತೈಲ ಕಂಪನಿಗಳ ನಷ್ಟವೂ ತಪ್ಪಲಿದೆ. ಅಂತೆಯೇ ಎಲ್ಪಿಜಿ ದರಗಳೂ ಇಳಿಕೆಯಾಗಬಹುದು. ಯುದ್ಧದ ಕಾರಣದಿಂದ ಡಾಲರ್ ಎದುರು ರೂಪಾಯಿ ಮೌಲ್ಯ 95.41ಕ್ಕೆ ಕುಸಿದಿತ್ತು, ಈಗ ಅದು ಮತ್ತೆ ಚೇತರಿಸಿಕೊಳ್ಳಲಿದೆ.
ಚಾಬಹಾರ್ ಬಂದರು ಅಭಿವೃದ್ಧಿ: ಇರಾನ್ ಮೇಲಿನ ಜಾಗತಿಕ ನಿರ್ಬಂಧಗಳು ಸಡಿಲಗೊಳ್ಳುವುದರಿಂದ ಭಾರತ-ಇರಾನ್ ಜಂಟಿಯಾಗಿ ಅಭಿವೃದ್ಧಿಪಡಿ ಸುತ್ತಿರುವ ಚಾಬಹಾರ್ ಬಂದರು ಮೂಲಕ ಮಧ್ಯ ಏಷ್ಯಾ ಮತ್ತು ಅಫ್ಘಾನಿಸ್ತಾನಕ್ಕೆ ಭಾರತೀಯ ಸರಕುಗಳ ರಫ್ತು ವ್ಯಾಪಾರ ಮತ್ತೆ ಚುರುಕುಗೊಳ್ಳಲಿದೆ.
ಈ ಒಪ್ಪಂದ ಮುರಿದುಬೀಳಲು ಮೂರು ಪ್ರಮುಖ ಅಪಾಯಗಳಿವೆ.
ಇಸ್ರೇಲ್ನ ಮುಂದಿನ ಹೆಜ್ಜೆ: ಜೂನ್ 19ರ ಜಿನೆವಾ ಒಪ್ಪಂದಕ್ಕೂ ಮುನ್ನವೇ ಇಸ್ರೇಲ್ ಲೆಬನಾನ್ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸಿದರೆ, ಇರಾನ್ ಒಪ್ಪಂದ ದಿಂದ ಹಿಂದೆ ಸರಿದು ಮತ್ತೆ ಹೊಮುಜ್ ಜಲಸಂಧಿಯನ್ನು ಮುಚ್ಚಬಹುದು.
ಪರಮಾಣು ಯೋಜನೆ: ಇರಾನ್ ಪರಮಾಣು ಯೋಜನೆಯ ಬಗ್ಗೆ ಸದ್ಯಕ್ಕೆ ಚರ್ಚೆಗೆ ಮಾತ್ರ ಒಪ್ಪಿದೆ. ಆದರೆ ಅಮೆರಿಕವು ಇರಾನ್ ತನ್ನ ಎಲ್ಲ ಯುರೇನಿಯಂ ಅನ್ನು ಹಸ್ತಾಂತರಿಸಬೇಕು ಮತ್ತು ಪರಮಾಣು ಯೋಜನೆಯನ್ನು ಸಂಪೂರ್ಣ ನಿಲ್ಲಿಸಬೇಕು ಎಂದು ಪಟ್ಟು ಹಿಡಿದರೆ ಒಪ್ಪಂದ ಮುರಿದುಬೀಳಬಹುದು.
ಇರಾನ್ನ ಆಂತರಿಕ ರಾಜಕೀಯ: ಇರಾನ್ನ ಹಲವು ನಗರಗಳಲ್ಲಿ ಪ್ರಸ್ತುತ ಆಡಳಿತ ವಿರೋಧಿ ಪ್ರತಿಭಟನೆಗಳು ನಡೆಯುತ್ತಿವೆ. ಇರಾನ್ನ ಕಠಿಣಪಂಥೀಯರು ಈ ಒಪ್ಪಂದವನ್ನು ‘ಅಮೆರಿಕದ ಮುಂದೆ ಮಂಡಿಯೂರುವುದು’ ಎಂದು ಭಾವಿಸಿದ್ದು, ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚಾದರೆ ಒಪ್ಪಂದಕ್ಕೆ ಧಕ್ಕೆಯಾಗಬಹುದು. ಆದಾಗ್ಯೂ, ಪ್ರಸ್ತುತ ಉಭಯ ದೇಶಗಳೂ ಆರ್ಥಿಕವಾಗಿ ಮತ್ತು ಮಿಲಿಟರಿ ಪರವಾಗಿ ಯುದ್ಧವನ್ನು ಮುಂದುವರಿಸುವ ಸ್ಥಿತಿಯಲ್ಲಿಲ್ಲದ ಕಾರಣ, ಈ ಒಪ್ಪಂದವು ಅಂತಿಮವಾಗಿ ಯಶಸ್ವಿಯಾಗಬಹುದು ಎಂದು ಬಹುತೇಕ ರಾಜತಾಂತ್ರಿಕ ತಜ್ಞರು ಆಶಿಸಿದ್ದಾರೆ.