_1787681160856.webp?w=480&auto=format%2Ccompress&fit=max)
_1787681160856.webp?w=480&auto=format%2Ccompress&fit=max)
ಸಕ್ಕರೆ ಬೆಲೆ ಏರಿಕೆಯ ಬಿಸಿಯ ನಡುವೆಯೇ ಈರುಳ್ಳಿ ಈಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಆ 24ರಂದು ದೇಶದ ಸರಾಸರಿ ಚಿಲ್ಲರೆ ಈರುಳ್ಳಿ ಬೆಲೆ ಕೆಜಿಗೆ -ಠಿ;43.53ಕ್ಕೆ ಏರಿದ್ದು, ಒಂದು ವರ್ಷದ ಹಿಂದಿನ -ಠಿ;27ರ ಮಟ್ಟಕ್ಕೆ ಹೋಲಿಸಿದರೆ ಶೇಕಡ 59ರಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಕೆಜಿಗೆ ಸುಮಾರು -ಠಿ;65, ಚೆನ್ನೈನಲ್ಲಿ -ಠಿ;58ರಷ್ಟಾಗಿದೆ. ಕಳೆದ ಒಂದೇ ತಿಂಗಳಲ್ಲಿ ದೇಶದಲ್ಲಿ ಸರಾಸರಿ ಬೆಲೆ ಶೇಕಡ 19ರಷ್ಟು ಏರಿದೆ. ಇದಕ್ಕೆ ಕಾರಣವೇನು? ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ? ಈ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.
ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಗೆ ಒಂದೇ ಕಾರಣವಿಲ್ಲ. ಇದು ಮುಖ್ಯವಾಗಿ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರದ ಪರಿಣಾಮ. ದೇಶದಲ್ಲಿ ಪ್ರತಿ ವರ್ಷವೂ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಸಾಮಾನ್ಯವಾಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತದೆ. ಬೇಸಿಗೆ ಈರುಳ್ಳಿ ಮಾರುಕಟ್ಟೆಗೆ ಬರುವ ಪ್ರಮಾಣ ಕಡಿಮೆಯಾಗಿ, ಹೊಸ ಮುಂಗಾರು ಬೆಳೆ ಆವಕವಾಗುವ ಅವಧಿಯಲ್ಲಿ ತಾತ್ಕಾಲಿಕವಾಗಿ ಪೂರೈಕೆ ಕೊರತೆ ಉಂಟಾಗುವುದು ಸಹಜ. ಆದರೆ ಈ ಬಾರಿ ಹವಾಮಾನ ವೈಪರೀತ್ಯದ ಸಮಸ್ಯೆಯೂ ಸೇರಿಕೊಂಡಿದೆ. ನಾಸಿಕ್ನಂತಹ ಪ್ರಮುಖ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೇಸಿಗೆಯ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ನಾಸಿಕ್ ಜಿಲ್ಲೆಯಲ್ಲಿ 2025-26ರ ಬೇಸಿಗೆ ಈರುಳ್ಳಿ ಬೆಳೆ ಪ್ರದೇಶವೇ 2.51 ಲಕ್ಷ ಹೆಕ್ಟೇರ್ನಿಂದ 2.25 ಲಕ್ಷ ಹೆಕ್ಟೇರ್ಗೆ ಇಳಿದಿದೆ. ಉತ್ಪಾದನೆ ಶೇಕಡ 29ರಷ್ಟು ಕುಸಿಯುತ್ತದೆಂದು ಏಪ್ರಿಲ್ನಲ್ಲೇ ವರದಿಯಾಗಿತ್ತು. ಮತ್ತೊಂದೆಡೆ, ಮುಂಗಾರಿನ ಈರುಳ್ಳಿ ಬಿತ್ತನೆಗೂ ಮಳೆ ವಿಳಂಬ ಅಡ್ಡಿಯಾಯಿತು. ಪರಿಣಾಮವಾಗಿ, ಮುಂದಿನ ತಿಂಗಳುಗಳಲ್ಲಿನ ಪೂರೈಕೆ ಬಗ್ಗೆಯೂ ಆತಂಕ ಮೂಡಿದೆ.
ಕೆಲವು ನಗರಗಳು ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ಏರಿಕೆ ಅತ್ಯಂತ ತೀವ್ರವಾಗಿದೆ. ಜುಲೈ ಅಂತ್ಯದ ವೇಳೆಗೆ ದೇಶದಲ್ಲಿ ಸರಾಸರಿ ಚಿಲ್ಲರೆ ಬೆಲೆ ಕೆಜಿಗೆ -ಠಿ;36-37ರ ಮಟ್ಟದಲ್ಲಿದ್ದ ಬೆಲೆ ಆ. 22ರ ವೇಳೆಗೆ -ಠಿ;41.64ಕ್ಕೇರಿತ್ತು. ಆ. 24ರಂದು -ಠಿ;43.53 ಆಯಿತು. ಅಂದರೆ ಒಂದು ತಿಂಗಳಲ್ಲಿ ಸುಮಾರು ಶೇಕಡ 19ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಇದ್ದ ಬೆಲೆಗೆ ಹೋಲಿಸಿದರೆ ಏರಿಕೆ ಪ್ರಮಾಣ ಶೇಕಡ 59ರಷ್ಟಾಗಿದೆ. ಆದರೆ ಕೆಲವು ನಗರಗಳಲ್ಲಿ ಚಿತ್ರಣ ಇನ್ನೂ ಹೆಚ್ಚು ಗಂಭೀರವಾಗಿದೆ. ದೆಹಲಿಯಲ್ಲಿ ಈರುಳ್ಳಿ ಕೆಜಿಗೆ -ಠಿ;65ಕ್ಕೆ ತಲುಪಿದ್ದರೆ, ಚೆನ್ನೈನಲ್ಲಿ -ಠಿ;58ರಷ್ಟಿದೆ. ಕೆಲವು ಚಿಲ್ಲರೆ ಮಾರುಕಟ್ಟೆಗಳಲ್ಲಿ -ಠಿ;60ರ ಗಡಿ ದಾಟಿದೆ. ನಾಸಿಕ್ನ ಲಸಲಗಾಂವ್ ಸಗಟು ಮಾರುಕಟ್ಟೆಯಲ್ಲೂ ಪೂರೈಕೆ ಕಡಿಮೆಯಾಗಿರುವ ಪರಿಣಾಮ ಆ. 25ರಂದು ಬೆಲೆ ಕ್ವಿಂಟಲ್ಗೆ -ಠಿ;4,250ಕ್ಕಿಂತ ಮೇಲೇರಿದೆ. ದೇಶದ ಪ್ರಮುಖ ಈರುಳ್ಳಿ ಮಾರುಕಟ್ಟೆಯಾದ ಇಲ್ಲಿ ಆವಕ ಕಡಿಮೆಯಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಈಗ ರೈಲನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ‘ಕಾಂದಾ’ ಎಂದರೆ ಮರಾಠಿಯಲ್ಲಿ ಈರುಳ್ಳಿ. ನಾಸಿಕ್ ದೇಶದ ಪ್ರಮುಖ ಈರುಳ್ಳಿ ಉತ್ಪಾದನಾ ಪ್ರದೇಶ. ಅಲ್ಲಿರುವ ಬಫರ್ ದಾಸ್ತಾನಿನಿಂದ ಈರುಳ್ಳಿಯನ್ನು ರೈಲುಗಳ ಮೂಲಕ, ಬೆಲೆ ಹೆಚ್ಚಿರುವ ನಗರಗಳಿಗೆ ವೇಗವಾಗಿ ಸಾಗಿಸುವ ಯೋಜನೆಯೇ ‘ಕಾಂದಾ ಎಕ್ಸ್ಪ್ರೆಸ್’. ಆ. 24ರಿಂದ ಈ ವಿಶೇಷ ಯೋಜನೆ ಆರಂಭವಾಗಿದೆ. ನಾಸಿಕ್ನಿಂದ ದೆಹಲಿ, ಚೆನ್ನೈ, ಕೊಚ್ಚಿ, ಗುವಾಹಟಿಯಂತಹ ಪ್ರಮುಖ ನಗರಗಳಿಗೆ ಈರುಳ್ಳಿಯನ್ನು ತಲುಪಿಸಲಾಗುತ್ತಿದೆ. ಉದ್ದೇಶ ಸರಳ- ಯಾವ ನಗರದಲ್ಲಿ ಪೂರೈಕೆ ಕಡಿಮೆಯಾಗಿ ಬೆಲೆ ಏರಿದೆಯೋ ಅಲ್ಲಿಗೆ ಕಡಿಮೆ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಈರುಳ್ಳಿಯನ್ನು ತಲುಪಿಸುವುದು. ಈಗ 86 ರೈಲುಗಳಲ್ಲಿ ಈರುಳ್ಳಿ ಹೋಗುತ್ತಿದೆ. ರಸ್ತೆ ಮಾರ್ಗಕ್ಕೆ ಹೋಲಿಸಿದರೆ ರೈಲಿನಲ್ಲಿ ಭಾರಿ ಪ್ರಮಾಣದಲ್ಲಿ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸಾಗಿಸಲು ಸಾಧ್ಯ.
ಕೇಂದ್ರದ ಬಳಿ ಸುಮಾರು 1.21 ಲಕ್ಷ ಟನ್ಗಳ ಈರುಳ್ಳಿ ಬಫರ್ ದಾಸ್ತಾನು ಇದೆ. ಬೆಲೆ ಹೆಚ್ಚಾದಾಗ ಸರ್ಕಾರ ಈ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆಯನ್ನು ಸ್ಥಿಮಿತಕ್ಕೆ ತರುತ್ತದೆ. ಬಫರ್ ಎಂದರೆ ರೈತರಿಂದ ಅಥವಾ ಉತ್ಪಾದನಾ ಪ್ರದೇಶಗಳಿಂದ ಸರ್ಕಾರ ಮುಂಚಿತವಾಗಿ ಖರೀದಿಸಿ ಇಟ್ಟುಕೊಂಡಿರುವ ದಾಸ್ತಾನು. ಸಾಮಾನ್ಯ ಪರಿಸ್ಥಿತಿಯಲ್ಲಿ ಅದನ್ನು ಮಾರುಕಟ್ಟೆಗೆ ಬಿಡುವುದಿಲ್ಲ. ಪೂರೈಕೆ ಕುಸಿದು ಬೆಲೆ ತೀವ್ರವಾಗಿ ಏರಿದಾಗ ಮಾತ್ರ ದಾಸ್ತಾನು ಬಿಡುಗಡೆ ಮಾಡಲಾಗುತ್ತದೆ.
ಚಿಲ್ಲರೆ ಮಾರುಕಟ್ಟೆಯಲ್ಲೂ ನೇರ ಮಧ್ಯಪ್ರವೇಶಕ್ಕೆ ಕೇಂದ್ರ ಸಿದ್ಧವಾಗಿದೆ. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಸಣ್ಣಸಣ್ಣ ವಾಹನಗಳ ಮೂಲಕ ಕೆಜಿಗೆ -ಠಿ;35ರ ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಲು ಮುಂದಾಗಿದೆ. ಇದರಿಂದ ಚಿಲ್ಲರೆ ಮಾರಾಟ ಬೆಲೆ ಕಡಿಮೆ ಮಾಡುವುದು ಖಾಸಗಿಯವರಿಗೆ ಅನಿವಾರ್ಯವಾಗುತ್ತದೆ.
ರಫ್ತು ನೀತಿಯೂ ಕಾರಣವೇ?
ದೇಶದಲ್ಲಿ ಬೆಲೆ ಕುಸಿದಾಗ ರೈತರಿಗೆ ಉತ್ತಮ ಬೆಲೆ ಸಿಗಲು ರಫ್ತು ನೆರವಾಗುತ್ತದೆ. ಆದರೆ ದೇಶೀಯ ಪೂರೈಕೆ ಕಡಿಮೆಯಾದಾಗ ರಫ್ತು ಹೆಚ್ಚಾದರೆ ಒಳನಾಡಿನಲ್ಲಿ ಬೆಲೆ ಏರುತ್ತದೆ. ಆದ್ದರಿಂದ ಕಳೆದ ಕೆಲವು ವರ್ಷಗಳಲ್ಲಿ ಭಾರತ ಈರುಳ್ಳಿ ರಫ್ತಿನ ಮೇಲೆ ಕೆಲವೊಮ್ಮೆ ನಿರ್ಬಂಧ, ಹಲವೊಮ್ಮೆ ಸುಂಕ, ಇನ್ನೊಮ್ಮೆ ಸಡಿಲಿಕೆ ಎಂಬ ನೀತಿಗಳನ್ನು ಅನುಸರಿಸಿದೆ. ಇದು ರೈತರು ಮತ್ತು ವ್ಯಾಪಾರಿಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ದೀರ್ಘಾವಧಿಯಲ್ಲಿ ಕೇವಲ ರಫ್ತು ನಿಷೇಧ ಅಥವಾ ಬಫರ್ ದಾಸ್ತಾನು ಮಾತ್ರ ಪರಿಹಾರವಲ್ಲ. ಉತ್ತಮ ಸಂಗ್ರಹಣಾ ವ್ಯವಸ್ಥೆ, ಬೆಳೆ ಪ್ರದೇಶದ ಮುನ್ಸೂಚನೆ, ಮಾರುಕಟ್ಟೆ ಮಾಹಿತಿ, ಸ್ಥಿರವಾದ ರಫ್ತು ನೀತಿ ಅಗತ್ಯ.
ಗ್ರಾಹಕರಿಗೆ ಈರುಳ್ಳಿ ಸರಿಯಾದ ಬೆಲೆಗೆ ಸಿಗುವುದನ್ನು ಖಚಿತಪಡಿಸಿ ಕೊಳ್ಳುವುದರ ಜತೆಗೆ ಈರುಳ್ಳಿ ಬೆಳೆಗಾರರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ ಸವಾಲು ಕೂಡ ಸರ್ಕಾರದ ಮುಂದಿದೆ. ಬೇಸಿಗೆಯಲ್ಲಿ ಈರುಳ್ಳಿ ಆವಕ ಹೆಚ್ಚಾದಾಗ ಮಹಾರಾಷ್ಟ್ರದ ಹಲವು ರೈತರು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಿಸಿದ್ದರು. ಮೇ ತಿಂಗಳಲ್ಲಿ ಬೆಲೆ ಕುಸಿತದಿಂದ ರೈತರು ಈರುಳ್ಳಿಯನ್ನು ಎಸೆಯುವ ಸ್ಥಿತಿಯೂ ಉಂಟಾಗಿತ್ತು. ಇದು ಈರುಳ್ಳಿ ಮಾರುಕಟ್ಟೆಯ ವಿಚಿತ್ರ ಸ್ವರೂಪಕ್ಕೆ ಸಾಕ್ಷಿ. ಒಮ್ಮೆ ಕಾಲಕಸ; ಇನ್ನೊಮ್ಮೆ ಕೆಜಿಗೆ -ಠಿ;60! ಮಧ್ಯದಲ್ಲಿ ಸಂಗ್ರಹಣೆ, ಸಾಗಣೆ, ಹಾಳಾಗುವುದು, ದಲ್ಲಾಳಿ ಮತ್ತು ಮಾರುಕಟ್ಟೆ ವೆಚ್ಚಗಳು ಕೂಡ ಬೆಲೆ ವ್ಯತ್ಯಾಸಕ್ಕೆ ಕಾರಣವಾಗುತ್ತವೆ. ಬಫರ್ ದಾಸ್ತಾನು ಹೆಚ್ಚಿಸಲು ಸರ್ಕಾರ ಈರುಳ್ಳಿ ಖರೀದಿ ಬೆಲೆಯನ್ನೂ ಹೆಚ್ಚಿಸಿದೆ. ಜುಲೈ 4ರಿಂದ ಬೆಲೆ ಸ್ಥಿರೀಕರಣ ದಾಸ್ತಾನಿಗಾಗಿ ಈರುಳ್ಳಿ ಖರೀದಿ ಬೆಲೆಯನ್ನು ಕ್ವಿಂಟಲ್ಗೆ -ಠಿ;1,875ರಿಂದ -ಠಿ;2,125ಕ್ಕೆ, ಅಂದರೆ ಶೇಕಡ 13ರಷ್ಟು ಹೆಚ್ಚಿಸಲಾಗಿದೆ.
ಕಾಂದಾ ಎಕ್ಸ್ಪ್ರೆಸ್ ಮತ್ತು ಬಫರ್ ದಾಸ್ತಾನು ಬಿಡುಗಡೆಯ ಕ್ರಮಗಳು ಪೂರೈಕೆ ಸಮಸ್ಯೆಯನ್ನು ಸದ್ಯಕ್ಕೆ ಪರಿಹರಿಸಬಹುದು. ಆದರೆ ಬೆಲೆ ಎಷ್ಟು ವೇಗವಾಗಿ ಇಳಿಯುತ್ತದೆ ಎಂಬುದು ನಾಸಿಕ್ ಮತ್ತು ಇತರ ಉತ್ಪಾದನಾ ಕೇಂದ್ರಗಳಿಂದ ಮಾರುಕಟ್ಟೆಗೆ ಎಷ್ಟು ಈರುಳ್ಳಿ ಬರುತ್ತದೆ ಎಂಬುದರ ಮೇಲೆ ಅವಲಂಬಿತ. ಮುಂದಿನ ಕೆಲವು ವಾರಗಳು ನಿರ್ಣಾಯಕ. ಮುಂಗಾರು ಬೆಳೆ ಮಾರುಕಟ್ಟೆಗೆ ಬರುವವರೆಗೆ ಪೂರೈಕೆ ಬಿಗಿಯಾಗಿಯೇ ಉಳಿದರೆ ಬೆಲೆ ಮತ್ತೆ ಏರಿಕೆಯಾಗಬಹುದು. ಮುಂಗಾರು ವಿಳಂಬದಿಂದ ಮುಂದಿನ ಬೆಳೆಯ ಮೇಲೂ ಪರಿಣಾಮವಾದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು.
ದೇಶದಲ್ಲಿ ಈರುಳ್ಳಿಯನ್ನು ಬರೀ ಅಡುಗೆ ಮನೆ ಪದಾರ್ಥವೆಂದು ನಿರ್ಲಕ್ಷಿಸುವಂತಿಲ್ಲ. ಅದರ ಬೆಲೆ ಏರಿದರೆ ನೇರವಾಗಿ ಎಲ್ಲರ ಜೇಬಿಗೆ ಕೈಹಾಕಿದಂತೆ. ಟೊಮ್ಯಾಟೊ, ಆಲೂಗಡ್ಡೆ, ಎಣ್ಣೆ ಮುಂತಾದ ವಸ್ತುಗಳ ಬೆಲೆ ಏರಿಕೆಯೊಂದಿಗೆ ಈರುಳ್ಳಿ ಕೂಡ ದುಬಾರಿಯಾದರೆ ದೈನಂದಿನ ಆಹಾರ ವೆಚ್ಚವೂ ಹೆಚ್ಚಾಗುತ್ತದೆ. ಇದು ಅಧಿಕಾರಸ್ಥರಿಗೆ ‘ನುಂಗಲಾರದ ತುತ್ತು’. ಸರ್ಕಾರವನ್ನು ಹಣಿ ಯಲು ವಿರೋಧ ಪಕ್ಷಗಳಿಗೂ ಒಳ್ಳೆಯ ‘ಆಹಾರ’.
ಕರ್ನಾಟಕದ ಈರುಳ್ಳಿ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಯ ಲಕ್ಷಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆ. 21ರ ಎಪಿಎಂಸಿ ದರಗಳ ಪ್ರಕಾರ, ಮಾಲೂರಿನಲ್ಲಿ ಕೆಜಿಗೆ -ಠಿ;50, ಬೆಳಗಾವಿಯಲ್ಲಿ -ಠಿ;45, ಶಿವಮೊಗ್ಗದಲ್ಲಿ -ಠಿ;44, ಹುಬ್ಬಳ್ಳಿಯಲ್ಲಿ -ಠಿ;37 ಮತ್ತು ದಾವಣಗೆರೆಯಲ್ಲಿ -ಠಿ;40, ಗೌರಿಬಿದನೂರಿನಲ್ಲಿ -ಠಿ;25, ಬಂಗಾರಪೇಟೆಯಲ್ಲಿ -ಠಿ;23ರಷ್ಟಿತ್ತು. ಬೆಂಗಳೂರಿನ ಎಪಿಎಂಸಿಯಲ್ಲಿ ಆ. 20ರಂದು ಈರುಳ್ಳಿ ವಿಧಕ್ಕೆ ಅನುಗುಣವಾಗಿ ಕೆಜಿಗೆ -ಠಿ;30-40ರಷ್ಟಿತ್ತು; ಜುಲೈ ಅಂತ್ಯದಲ್ಲಿ ಇದೇ ಮಾರುಕಟ್ಟೆಯಲ್ಲಿ ಸ್ಥಳೀಯ ಈರುಳ್ಳಿ ದರ -ಠಿ;20ರ ಆಸುಪಾಸಿನಲ್ಲಿತ್ತು. ಅಂದರೆ ಕರ್ನಾಟಕದಲ್ಲೂ ಕಳೆದ ಕೆಲವು ವಾರಗಳಲ್ಲಿ ಸಗಟು ಬೆಲೆ ಗಮನಾರ್ಹವಾಗಿ ಏರಿದ್ದು, ಮುಂದಿನ ದಿನಗಳಲ್ಲಿ ಚಿಲ್ಲರೆ ದರವೂ ಏರಿಕೆಯಾಗುವ ಸಾಧ್ಯತೆಯಿದೆ.
ನಾಸಿಕ್ನಿಂದ ಕಾಂದಾ ಎಕ್ಸ್ಪ್ರೆಸ್ ವಿಶೇಷ ರೈಲುಗಳ ಮೂಲಕ ದೇಶದ 5 ಪ್ರಮುಖ ನಗರಗಳಿಗೆ ಈರುಳ್ಳಿ ಪೂರೈಸಲಾಗುತ್ತಿದೆ. ಅದರಲ್ಲಿ ತಲಾ ಸುಮಾರು 40 ಟ್ರಕ್ ಲೋಡ್ಗೆ ಸಮವಾದ ಈರುಳ್ಳಿ ಇದೆ. ಅಗತ್ಯಕ್ಕೆ ಅನುಗುಣವಾಗಿ ಇತರ ನಗರಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು. ಬಫರ್ ದಾಸ್ತಾನಿನ ಈರುಳ್ಳಿಯನ್ನು ಕೆಜಿಗೆ 35 ರೂ. ದರದಲ್ಲಿ ಎನ್ಸಿಸಿಎಫ್, ನಾಫೆಡ್ ಮತ್ತು ಕೇಂದ್ರೀಯ ಭಂಡಾರ್ ಮೂಲಕ ಶೀಘ್ರದಲ್ಲೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
-ಪ್ರಲ್ಹಾದ ಜೋಶಿ ಕೇಂದ್ರ ಆಹಾರ ಸಚಿವ