ಭಾರತ್ ಮಂಟಪದೊಳಗೆ ಒಂದು ಕಥೆ, ಹೊರಗೆ ಇನ್ನೊಂದು ಸಂಚು.. ಎಐ ಸಮ್ಮಿಟ್ ಕೆಡಿಸಲು ಇನ್‌ಫ್ಲುಯೆನ್ಸರ್‌ಗಳಿಗೆ ನೀಡಿದ 'ಸುಪಾರಿ' ಎಷ್ಟು ಗೊತ್ತಾ..? | Congress Paid Campaign

Congress Paid Campaign | ಕಾಂಗ್ರೆಸ್​ ಕಾರ್ಯಕರ್ತರ ಅರಬೆತ್ತಲೆ ಪ್ರತಿಭಟನೆ
Congress Paid Campaign | ಕಾಂಗ್ರೆಸ್​ ಕಾರ್ಯಕರ್ತರ ಅರಬೆತ್ತಲೆ ಪ್ರತಿಭಟನೆ
Published on
Congress Paid Campaign: ಇತ್ತೀಚೆಗೆ ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆಯಲ್ಲಿ ಯೂತ್​ ಕಾಂಗ್ರೆಸ್ ಸದಸ್ಯರು ನಡೆಸಿದ ಅರಬೆತ್ತಲೆ ಪ್ರತಿಭಟನೆ ಎರಡು ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಅನೇಕರನ್ನು ಈಗಾಗಲೇ ಬಂಧಿಸಲಾಗಿದೆ.
ಸದ್ಯ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಕಾಂಗ್ರೆಸ್​​ ಪಕ್ಷ ಸಾಮಾಜಿಕ ಜಾಲತಾಣದ ಸಂಘಟಿತ ಅಭಿಯಾನದ ಮೂಲಕ ಈ ಕಾರ್ಯಕ್ರಮವನ್ನು ಅಪಖ್ಯಾತಿಗೊಳಿಸಲು ಅಪಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಯೋಜಿತ ಪಿತೂರಿಯ ಭಾಗವಾಗಿ ಕಾಂಗ್ರೆಸ್, ಎಐ ಶೃಂಗಸಭೆಯ ಬಗ್ಗೆ ನಕಾರಾತ್ಮಕ ವಿಡಿಯೋಗಳನ್ನು ರಚಿಸಲು ಮತ್ತು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ ಹಣವನ್ನು ನೀಡುತ್ತಿದೆ ಎನ್ನುವುದು ಬಿಜೆಪಿ ನಾಯಕರ ದೂರು. ಕಾಂಗ್ರೆಸ್ ಪಿಆರ್ ತಂಡದ ಸದಸ್ಯರು ಅನೇಕ ಗಣ್ಯರನ್ನು ಸಂಪರ್ಕಿಸಿ, ಶೃಂಗಸಭೆಯನ್ನು ವಿಫಲವೆಂದು ಬಿಂಬಿಸುವ ವಿಷಯಕ್ಕೆ 10,000 ರೂ.ಗಳಿಂದ 40,000 ರೂ.ಗಳವರೆಗೆ ಹಣ ನೀಡಿದ್ದಾರೆ ಎಂದು ಪಕ್ಷ ಆರೋಪಿಸಿದೆ.

ಕಾಂಗ್ರೆಸ್​ ಪಿತೂರಿ ಎಂದ ಬಿಜೆಪಿ

ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಪ್ರಭಾವಿಗಳಿಗೆ ಈ ಕಾರ್ಯಕ್ರಮವನ್ನು ಕೆಟ್ಟದಾಗಿ ಮಾತನಾಡಲು ಹಣ ನೀಡುವ ಮೂಲಕ ಎಐ ಶೃಂಗಸಭೆ ಮತ್ತು ಭಾರತವನ್ನು ಕೆಣಕುವ ಅಭಿಯಾನವನ್ನು ನಡೆಸಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪೂನಾವಾಲಾ, ಕಾಂಗ್ರೆಸ್‌ನ ಮಂತ್ರವೇ ಪೈಸೆ ತಗೊಳ್ಳಿ, ಎಐ ಶೃಂಗಸಭೆ ಮತ್ತು ಭಾರತವನ್ನು ಅಪಖ್ಯಾತಿಗೊಳಿಸಿ ಎಂಬಂತಿದೆ, ಕೈ ನಾಯಕರು ಎಐ ಶೃಂಗಸಭೆಯ ಬಗ್ಗೆ ಕೆಟ್ಟದಾಗಿ ಮಾತನಾಡಲು ಹಣ ನೀಡುತ್ತಿದ್ದಾರೆಯೇ.? ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ದೇಶವನ್ನೇ ವಿರೋಧಿಸುತ್ತಿದ್ದೀರಾ? ಆ ಶರ್ಟ್‌ಲೆಸ್ (ಅರಬೆತ್ತಲೆ) ಕೃತ್ಯದ ಬಳಿಕ ಈಗ ಇದೇನಾ ನಿಮ್ಮ ಮುಂದಿನ ನಡೆ..? ಎಂದು ಕುಟುಕಿದ್ದಾರೆ.
ಹಲವಾರು ಪ್ರಭಾವಿಗಳು ತಮಗೆ ಅಂತಹ ಕೊಡುಗೆಗಳು ಬಂದಿವೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಇದಾದ ಬಳಿಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಇಂಟರ್ನೆಟ್​​ನಲ್ಲಿ ಹಂಚಿಕೊಂಡಿರುವ ವಿಡಿಯೋಗಳಲ್ಲಿ, ಕಾಂಗ್ರೆಸ್‌ಗೆ ಸಂಬಂಧಿಸಿದ ವ್ಯಕ್ತಿಗಳು ಈ ಕಾರ್ಯಕ್ರಮವನ್ನು ಟೀಕಿಸುವ ಸ್ಕ್ರಿಪ್ಟ್ ಮಾಡಿದ ವಿಷಯವನ್ನು ಹೇಳುವಂತೆ ಮನವಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಅವರಲ್ಲಿ ಕೆಲವರು ಹಣಕಾಸಿನ ವ್ಯವಹಾರಗಳ ಪುರಾವೆಯಾಗಿ ಚಾಟ್ ಸಂದೇಶಗಳು ಮತ್ತು ಆಡಿಯೊ ರೆಕಾರ್ಡಿಂಗ್‌ಗಳನ್ನು ಇಟ್ಟುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಹಿನ್ನಲೆ

ಶೃಂಗಸಭೆಯ ವೇಳೆ ಒಳನುಗ್ಗಿದ ಯೂತ್​ ಕಾಂಗ್ರೆಸ್ ಕಾರ್ಯಕರ್ತರು, ತಮ್ಮ ಶರ್ಟ್‌ಗಳನ್ನು ಕಳಚಿ ಪ್ರಧಾನಿ ಮೋದಿ ಕಾಂಪ್ರಮೈಸ್ಡ್ ಎಂಬ ಸ್ಲೋಗನ್ ಇರುವ ಟಿ-ಶರ್ಟ್‌ಗಳನ್ನು ಪ್ರದರ್ಶಿಸಿದರು. ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದಲ್ಲಿ ಭಾರತದ ಡೇಟಾವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಅವರು ಈ ವಿನೂತನ ಪ್ರತಿಭಟನೆ ನಡೆಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net