ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಆ ಪಕ್ಷವು ಎಲ್ಲಾ ಹಂತಗಳಲ್ಲೂ ಕುಸಿಯತೊಡಗಿದೆ. ಬಂಗಾಳದ ವಿಧಾನಸಭೆಯಲ್ಲಿ ಟಿಎಂಸಿ ಮೊದಲ ಬಾರಿಗೆ ಈ ಮಟ್ಟದ ಭಿನ್ನಮತ ಕಂಡಿತಾದರೂ, ಇದರ ತೀವ್ರ ಸ್ವರೂಪದ ಅಲೆಗಳು ಈಗ ಸಂಸತ್ತಿನಲ್ಲಿ ಪ್ರತಿಧ್ವನಿಸಲು ಆರಂಭಿಸಿವೆ. ಮಮತಾ ಬ್ಯಾನರ್ಜಿ ಪಕ್ಷದ ಒಟ್ಟು 28 ಲೋಕಸಭಾ ಸಂಸದರ ಪೈಕಿ 20 ಸಂಸದರು ಪಕ್ಷದಿಂದ ಹೊರಬಂದು, ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಎಂಬ ಸಣ್ಣ ಪಕ್ಷದೊಂದಿಗೆ ತಮ್ಮ ಬಣವನ್ನು ವಿಲೀನಗೊಳಿಸಿದ್ದಾರೆ. ಈ ಹಿಂದೆ ತ್ರಿಪುರಾದ ಚುನಾವಣಾ ಕಣಕ್ಕೆ ಇಳಿದು ಧೂಳೀಪಟವಾಗಿದ್ದ ಈ ಅನಾಮಧೇಯ ಪಕ್ಷ, ಈಗ ಟಿಎಂಸಿ ಬಂಡಾಯ ಸಂಸದರ ಸೇರ್ಪಡೆಯಿಂದಾಗಿ ನೇರವಾಗಿ ಸಂಸತ್ತನ್ನು ಪ್ರವೇಶಿಸುತ್ತಿರುವುದಲ್ಲದೆ, ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಪಾಲಾಗುತ್ತಿದೆ.