ಸಂಘಟನೆ ಆಯ್ತು, ಈಗ ಸಂಪುಟ ಸರ್ಜರಿ..? 12 ಸಚಿವ ಸ್ಥಾನಗಳ ಮೇಲೆ ಎಲ್ಲರ ಕಣ್ಣು: ಯಾರಿಗೆ ಸಿಗಲಿದೆ ಮಂತ್ರಿ ಭಾಗ್ಯ..? | Central Cabinet Reshuffle

Central Cabinet Reshuffle | ಸಂಘಟನೆ ಆಯ್ತು, ಈಗ ಸಂಪುಟ ಸರ್ಜರಿ..?
Central Cabinet Reshuffle | ಸಂಘಟನೆ ಆಯ್ತು, ಈಗ ಸಂಪುಟ ಸರ್ಜರಿ..?
Published on

ಭಾರತೀಯ ಜನತಾ ಪಕ್ಷದ ನೂತನ ರಾಷ್ಟ್ರೀಯ ಪದಾಧಿಕಾರಿಗಳ ತಂಡದ ಪ್ರಕಟಣೆಯ ಬೆನ್ನಲ್ಲೇ, ಕೇಂದ್ರ ಸಚಿವ ಸಂಪುಟದ ಪುನಾರಚನೆಯ (Central Cabinet Reshuffle) ಕುರಿತಾದ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿದ್ದು, ನೂತನ ಜವಾಬ್ದಾರಿ ವಹಿಸಿಕೊಂಡಿರುವ ನಾಯಕರು ಸಂಘಟನಾತ್ಮಕ ಕಾರ್ಯಗಳಲ್ಲಿ ನಿರತರಾಗಲಿದ್ದು, ಖಾಲಿ ಇರುವ ಸ್ಥಾನಗಳಿಗೆ ಹೊಸ ಮೈತ್ರಿಪಕ್ಷಗಳ ನಾಯಕರು ಹಾಗೂ ಯುವ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸದ್ಯ ಪ್ರಧಾನಮಂತ್ರಿ ಸೇರಿದಂತೆ ಕೇಂದ್ರ ಸಚಿವ ಸಂಪುಟದಲ್ಲಿ 69 ಸದಸ್ಯರಿದ್ದಾರೆ. ಸಂವಿಧಾನದ ವಿಧಿ 75(1A) ಪ್ರಕಾರ ಸಚಿವ ಸಂಪುಟದ ಗರಿಷ್ಠ ಸಂಖ್ಯಾಬಲ 81 ಇರಬಹುದು. ಅಂದರೆ ಪ್ರಸ್ತುತ 12 ಸಚಿವ ಸ್ಥಾನಗಳು ಖಾಲಿಯಿವೆ. ಮುಂಬರುವ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದರೊಂದಿಗೆ ಹಲವು ಇಲಾಖೆಗಳನ್ನು ನಿರ್ವಹಿಸುತ್ತಿರುವ ಸಚಿವರ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು ಕೂಡ ನಾಯಕತ್ವದ ಉದ್ದೇಶವಾಗಿದೆ.

ಸಂಪುಟದಲ್ಲಿ ಈಗಾಗಲೇ ಕೆಲವು ಪ್ರಮುಖ ಬದಲಾವಣೆಗಳು ನಡೆದಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಯುವಜನರ ಪ್ರತಿಭಟನೆಯ ನಡುವೆ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮತ್ತು ರೈಲ್ವೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿದ್ದರಿಂದ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಇತ್ತೀಚೆಗೆ ಪಕ್ಷದ ಸಂಘಟನಾತ್ಮಕ ಜವಾಬ್ದಾರಿ ಪಡೆದ ಸಚಿವರು ಮುಂದಿನ ದಿನಗಳಲ್ಲಿ ಸಂಪುಟದಿಂದ ಹೊರಬರಲಿದ್ದಾರೆ ಎನ್ನಲಾಗುತ್ತಿದ್ದು, ರಾಜ್ಯ ಸಚಿವರಾಗಿದ್ದ ಹರ್ಷ ಮಲ್ಹೋತ್ರಾ ಮತ್ತು ಪಂಕಜ್ ಚೌಧರಿ ಅವರಿಗೆ ಇತ್ತೀಚೆಗೆ ದೆಹಲಿ ಮತ್ತು ಉತ್ತರ ಪ್ರದೇಶ ಬಿಜೆಪಿ ಘಟಕಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ನೇತೃತ್ವದ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಪಕ್ಷದ ರಾಷ್ಟ್ರೀಯ ಕೋಶಾಧಿಕಾರಿ ಹುದ್ದೆ ನೀಡಲಾಗಿದೆ. ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಬಿ. ಎಲ್. ವರ್ಮಾ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಳ್ಳಲಿದೆ. ಕಾರ್ಯಕ್ಷಮತೆಯ ಆಧಾರದ ಮೇಲೆಯೂ ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ.
ಬಿಜೆಪಿಯು ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ತತ್ವವನ್ನು ಅನುಸರಿಸುತ್ತಿದ್ದು, ಸಚಿವಸ್ಥಾನದ ರೇಸ್‌ನಲ್ಲಿದ್ದ ಸ್ಮೃತಿ ಇರಾನಿ, ವಿನೋದ್ ತಾವ್ಡೆ, ಸತೀಶ್ ಪೂನಿಯಾ ಮತ್ತು ತರುಣ್ ಚುಗ್ ಅವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಯಾರಿಗೆಲ್ಲಾ ಲಕ್​ ಕುಲಾಯಿಸಬಹುದು...?

ಸಂಪುಟ ಪುನಾರಚನೆಯ ಸಂದರ್ಭದಲ್ಲಿ ವಯಸ್ಸಿನ ಮಾನದಂಡವೂ ಮುಖ್ಯವಾಗಲಿದ್ದು, ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ ಶೇ. 65 ಕ್ಕೂ ಹೆಚ್ಚು ಸಚಿವರು 51-70 ವಯೋಮಾನದವರಾಗಿದ್ದರೆ, ಶೇ. 24 ರಷ್ಟು ಸಚಿವರು 31-50 ವಯೋಮಾನದವರಾಗಿದ್ದರು. ಪ್ರಸ್ತುತ, ಕನಿಷ್ಠ 12 ಕ್ಯಾಬಿನೆಟ್ ಮತ್ತು ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವರು 70 ವರ್ಷ ಮೇಲ್ಪಟ್ಟವರಾಗಿದ್ದಾರೆ. ಬಿಹಾರದ ಹೆಚ್‌ಎಎಂ ಪಕ್ಷದ ಜಿತನ್ ರಾಮ್ ಮಾಂಝಿ ಅತ್ಯಂತ ಹಿರಿಯ ಸಚಿವರಾಗಿದ್ದರೆ, ಆಂಧ್ರಪ್ರದೇಶದ ಟಿಡಿಪಿ ಪಕ್ಷದ ಕೆ. ರಾಮ್ ಮೋಹನ್ ನಾಯ್ಡು ಅತ್ಯಂತ ಕಿರಿಯ ಸಚಿವರಾಗಿದ್ದಾರೆ. ಮುಂಬರುವ ಪುನಾರಚನೆಯಲ್ಲಿ ಯುವಕರು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
ಪ್ರಸ್ತುತ ವಿರೋಧ ಪಕ್ಷ ಕಾಂಗ್ರೆಸ್ ಆಡಳಿತದಲ್ಲಿರುವ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಿಂದ ನೂತನ ಸಚಿವರ ಸೇರ್ಪಡೆಯನ್ನು ಪರಿಗಣಿಸಲಾಗುತ್ತಿದ್ದು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಅವಕಾಶ ಸಿಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿರುವ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ಗೂ ಪ್ರಾತಿನಿಧ್ಯದ ಆದ್ಯತೆ ನೀಡಲಾಗುತ್ತದೆ.

ಮೈತ್ರಿಕೂಟಗಳ ವಿಸ್ತರಣೆ!...

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಹೆಚ್ಚಿನ ಸಂಸದರ ಬಲವನ್ನು ಹೊಂದಿದ್ದು, ಅವರ ಪುತ್ರ ಶ್ರೀಕಾಂತ್ ಶಿಂಧೆ ಹೆಸರು ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನದ ರೇಸ್‌ನಲ್ಲಿದೆ. ಎನ್‌ಸಿಪಿಯ ಶರದ್ ಪವಾರ್ ಬಣದೊಂದಿಗೆ ಸೇರ್ಪಡೆಯಾದರೆ ಅದಕ್ಕೂ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಾಗಬಹುದು.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಬಿಜೆಪಿಗೆ ಸೇರ್ಪಡೆಗೊಂಡ ನಾಯಕರ ಪೈಕಿ ಸಂದೀಪ್ ಪಾಠಕ್ ಅವರಿಗೆ ಈಗಾಗಲೇ ಪಕ್ಷದ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಇದೇ ವೇಳೆ ರಾಘವ್ ಚಢ್ಡಾ ಸೇರಿದಂತೆ ಪ್ರಮುಖ ಮುಖಗಳಿಗೆ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಶಿರೋಮಣಿ ಅಕಾಲಿದಳ ಮತ್ತೆ ಎನ್‌ಡಿಎ ಮೈತ್ರಿಕೂಟಕ್ಕೆ ಮರಳುವ ಸಾಧ್ಯತೆಯಿದ್ದು, ಹರ್ಸಿಮ್ರತ್ ಕೌರ್ ಬಾದಲ್ ಮತ್ತೆ ಸಂಪುಟಕ್ಕೆ ಸೇರ್ಪಡೆಯಾಗಬಹುದು.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಹೊರಬಂದು ಎನ್‌ಸಿಪಿಐ ಬೆಂಬಲಿಸಿರುವ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಸಂಸದರ ಗುಂಪಿಗೂ ಅವಕಾಶ ಸಿಗುವ ಲಕ್ಷಣಗಳಿವೆ. ಸಿಎಂ ವಿಜಯ್ ನೇತೃತ್ವದ ಟಿವಿಕೆ ಜೊತೆ ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿರುವ ಕಾರಣ ಅಸಮಾಧಾನಗೊಂಡಿರುವ ಡಿಎಂಕೆ ಕೂಡ ಎನ್‌ಡಿಎ ಕೂಟವನ್ನು ಸೇರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.

ಕೆಲಸದ ಒತ್ತಡ ಕಡಿಮೆ ಮಾಡುವ ಯತ್ನ

ಪ್ರಸ್ತುತ 14 ಸಚಿವರು ಒಂದಕ್ಕಿಂತ ಹೆಚ್ಚು ಇಲಾಖೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಪುನಾರಚನೆಯಲ್ಲಿ ಈ ಕೆಲಸದ ಒತ್ತಡವನ್ನು ಮರುಹಂಚಿಕೆ ಮಾಡುತ್ತಾರೆ ಎನ್ನಲಾಗಿದೆ.
ಅಮಿತ್ ಷಾ ಅವರು ಗೃಹ ಮತ್ತು ಸಹಕಾರ ಇಲಾಖೆ, ಜೆ. ಪಿ. ನಡ್ಡಾ ಅವರು ಆರೋಗ್ಯ, ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ, ಶಿವರಾಜ್ ಸಿಂಗ್ ಚೌಹಾಣ್ ಅವರು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಮನೋಹರ್ ಲಾಲ್ ಖಟ್ಟರ್ ಅವರು ವಸತಿ, ನಗರ ವ್ಯವಹಾರಗಳು ಮತ್ತು ವಿದ್ಯುತ್ ಇಲಾಖೆ, ಹೆಚ್. ಡಿ. ಕುಮಾರಸ್ವಾಮಿ ಅವರು ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ, ರಾಜೀವ್ ರಂಜನ್ ಸಿಂಗ್ ಲಲನ್ ಅವರು ಪಂಚಾಯತ್ ರಾಜ್, ಮೀನುಗಾರಿಕೆ ಮತ್ತು ಪಶುಸಂಗೋಪನೆ ಇಲಾಖೆ, ಪ್ರಲ್ಹಾದ್ ಜೋಶಿ ಅವರು ಗ್ರಾಹಕ ವ್ಯವಹಾರಗಳು, ಆಹಾರ, ನವೀಕರಿಸಬಹುದಾದ ಇಂಧನ ಹಾಗೂ ಶಿಕ್ಷಣ ಇಲಾಖೆ, ಅಶ್ವಿನಿ ವೈಷ್ಣವ್ ಅವರು ರೈಲ್ವೆ, ಮಾಹಿತಿ ಪ್ರಸಾರ ಮತ್ತು ಐಟಿ ಇಲಾಖೆ, ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಂಪರ್ಕ ಮತ್ತು ಈಶಾನ್ಯ ಪ್ರದೇಶ ಅಭಿವೃದ್ಧಿ ಇಲಾಖೆ, ಗಜೇಂದ್ರ ಸಿಂಗ್ ಶೇಖಾವತ್ ಅವರು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಇಲಾಖೆ, ಕಿರಣ್ ರಿಜಿಜು ಅವರು ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ, ಮನ್ಸುಖ್ ಮಾಂಡವೀಯ ಅವರು ಕಾರ್ಮಿಕ ಮತ್ತು ಕ್ರೀಡಾ ಇಲಾಖೆ ಹಾಗೂ ಜಿ. ಕಿಷನ್ ರೆಡ್ಡಿ ಅವರು ಕಲ್ಲಿದ್ದಲು ಮತ್ತು ಗಣಿ ಇಲಾಖೆಗಳನ್ನು ನಿರ್ವಹಿಸುತ್ತಿದ್ದು, ಈ ಇಲಾಖೆಗಳ ಮರುಹಂಚಿಕೆ ನಡೆಯುವ ಸಾಧ್ಯತೆ ದಟ್ಟವಾಗಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net