ಪ್ರಧಾನಿ ಮೋದಿ ಆಪ್ತ ಸಲಹೆಗಾರ ಬಂಗಾಳದ ಮುಂದಿನ ಹಣಕಾಸು ಸಚಿವ..? ಯಾರು ಈ ಸಂಜೀವ್ ಸನ್ಯಾಲ್..? | Sanjeev Sanyal

 Sanjeev Sanyal | ಜನಪ್ರಿಯ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್
Sanjeev Sanyal | ಜನಪ್ರಿಯ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್
Published on
Sanjeev Sanyal: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ರಾಜ್ಯದ ಆರ್ಥಿಕತೆಯನ್ನು ಮುನ್ನಡೆಸಲು ಹಣಕಾಸು ತಜ್ಞರೊಬ್ಬರ ಅಗತ್ಯವಿದೆ ಎಂಬ ಚರ್ಚೆಗಳು ಜೋರಾಗಿವೆ.
ಬಂಗಾಳದ ಆರ್ಥಿಕತೆಯನ್ನು ಮುನ್ನಡೆಸಲು ಬಿಜೆಪಿಗೆ ಆರ್ಥಿಕ ತಜ್ಞರ ಕೊರತೆಯಿದೆ ಎಂಬ ಊಹಾಪೋಹಗಳ ನಡುವೆ, ಜನಪ್ರಿಯ ಅರ್ಥಶಾಸ್ತ್ರಜ್ಞ ಸಂಜೀವ್ ಸನ್ಯಾಲ್ ಮೇ 9 ರಂದು ಹಂಚಿಕೊಂಡಿರುವ ಒಂದು ಪೋಸ್ಟ್ ರಾಜ್ಯದ ಮಂತ್ರಿ ಮಂಡಲ ಸೇರಬಹುದು ಎಂಬ ಸುಳಿವನ್ನು ನೀಡಿದೆ. ಸನ್ಯಾಲ್ ಸ್ವತಃ ಬಂಗಾಳಿ ಮೂಲದವರಾಗಿದ್ದು, ಅವರ ಕುಟುಂಬಕ್ಕೂ ರಾಜ್ಯಕ್ಕೂ ದೊಡ್ದ ನಂಟಿದೆ.
ಸದ್ಯ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಕೇವಲ ಐದು ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದ್ದು, ಸುವೇಂದು ಅವರೇ ಗೃಹ, ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ವಾಣಿಜ್ಯದ ಜೊತೆಗೆ ಪ್ರಮುಖವಾದ ಹಣಕಾಸು ಖಾತೆಯನ್ನು ಸದ್ಯಕ್ಕೆ ನಿಭಾಯಿಸುತ್ತಿದ್ದಾರೆ. ಉನ್ನತ ಮಟ್ಟದ ಆರ್ಥಿಕ ಪರಿಣತಿ ಹೊಂದಿರುವ ಶಾಸಕರ ಕೊರತೆ ಬಿಜೆಪಿಯನ್ನು ಸಂದಿಗ್ಧತೆಗೆ ತಳ್ಳಿದೆ.
ಬಿಜೆಪಿಗೆ ಇದು ಹೊಸದೇನಲ್ಲ...
ಈ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (ಇಎಸಿ) ಸದಸ್ಯರಾಗಿರುವ ಸನ್ಯಾಲ್ ಹಣಕಾಸು ಸಚಿವರಾಗಲು ಮುಂಚೂಣಿಯಲ್ಲಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಕೇಂದ್ರ ಸಚಿವರಾದ ಎಸ್. ಜೈಶಂಕರ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರಂತೆ ಅನುಭವಿ ಅಧಿಕಾರಿಗಳನ್ನು ರಾಜಕೀಯ ಪಾತ್ರಗಳಿಗೆ ತರುವ ಸಂಪ್ರದಾಯವನ್ನು ಬಿಜೆಪಿ ಅನುಸರಿಸುತ್ತಿರುವುದರಿಂದ ಸನ್ಯಾಲ್ ಆಯ್ಕೆಯಾದರು ಅಚ್ಚರಿಪಡಬೇಕಿಲ್ಲ.
ಸುವೇಂದು ಪ್ರಮಾಣವಚನ ಸಮಾರಂಭದಲ್ಲಿ ಸನ್ಯಾಲ್ ಸಾಂಪ್ರದಾಯಿಕ ಬಂಗಾಳಿ ಧೋತಿ-ಕುರ್ತಾದಲ್ಲಿ ಕಾಣಿಸಿಕೊಂಡಿದ್ದು ಮತ್ತು ಅವರ ಪತ್ನಿ ಸ್ಮಿತಾ ಬರೂವಾ ಅವರು ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಟ್ವೀಟ್ ಮಾಡಿದ್ದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಸನ್ಯಾಲ್ 1970 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿ, ಆಕ್ಸ್‌ಫರ್ಡ್‌ನಲ್ಲಿ ರೋಡ್ಸ್ ಸ್ಕಾಲರ್ ಆಗಿ ಶಿಕ್ಷಣ ಮುಗಿಸಿ, ನಂತರ ಡಾಯ್ಚ ಬ್ಯಾಂಕ್ ಮತ್ತು ಭಾರತ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಅಗಾಧ ಅನುಭವ ಹೊಂದಿದ್ದಾರೆ.

ಕೊಲ್ಕತ್ತಾದ ಈ ಸ್ಥಿತಿಗೆ ನಾನೇ ಜೀವಂತ ಸಾಕ್ಷಿ!

ಮೇ 4 ರಂದು ಚುನಾವಣಾ ಫಲಿತಾಂಶಗಳು ಪ್ರಕಟವಾದಾಗಿನಿಂದ, ಸಂಜೀವ್ ಸನ್ಯಾಲ್ ಬಂಗಾಳದ ಆರ್ಥಿಕ ಕುಸಿತ ಮತ್ತು ಪ್ರಸ್ತುತ ಎದುರಾಗಿರುವ ಸಮಸ್ಯೆಯಿಂದ ರಾಜ್ಯವನ್ನು ಹೇಗೆ ಹೊರತರುವುದು ಎಂಬುದರ ಕುರಿತು ವಿವಿಧ ಮಾಧ್ಯಮ ಸಂಸ್ಥೆಗಳಿಗೆ ಹಲವಾರು ಸಂದರ್ಶನಗಳನ್ನು ನೀಡಿದ್ದಾರೆ ಮತ್ತು ಲೇಖನಗಳನ್ನು ಬರೆದಿದ್ದಾರೆ. ರಿಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು, ಕೋಲ್ಕತ್ತಾ ತಾನಾಗಿಯೇ ಸಾಯಲಿಲ್ಲ, ಅದನ್ನು ಕೊಲ್ಲಲಾಯಿತು ಮತ್ತು ನಾನು ಅದಕ್ಕೆ ಸಾಕ್ಷಿಯಾಗಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇದರ ಜೊತೆಗೆ, ಬಂಗಾಳದ ಸದ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆಯೂ ಧ್ವನಿ ಎತ್ತಿರುವ ಅವರು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆಪ್ತ ಸಹಾಯಕ ಚಂದ್ರನಾಥ್ ರಥರ ಹತ್ಯೆ ಹಾಗೂ ರಾಜ್ಯದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಐವರು ಬಿಜೆಪಿ ಕಾರ್ಯಕರ್ತರು ಗಾಯಗೊಂಡ ಘಟನೆಗಳ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ ಈ ಸನ್ಯಾಲ್​

ಇದಷ್ಟೇ ಅಲ್ಲದೆ, ಅವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸಚೀಂದ್ರ ನಾಥ್ ಸನ್ಯಾಲ್​ರ ಮೊಮ್ಮಗ ಮತ್ತು ಅವರ ಮುತ್ತಜ್ಜ ನಳಿನಾಕ್ಷ ಸನ್ಯಾಲ್ ಅವಿಭಜಿತ ಬಂಗಾಳ ವಿಧಾನಸಭೆಯ ಕಾಂಗ್ರೆಸ್ ಮುಖ್ಯ ಸಚೇತಕರಾಗಿದ್ದರು ಎನ್ನಲಾಗಿದೆ.
ಬಂಗಾಳದ ಆರ್ಥಿಕ ಸ್ಥಿತಿ ಸದ್ಯಕ್ಕೆ ಹೇಳಿಕೊಳ್ಳುವ ಸ್ತಿತಿಯಲ್ಲಿಲ್ಲ ಎಂದು ಮೂಲಗಳು ತಿಳಿಸಿದ್ದು, ದೇಶದ ಜಿಡಿಪಿಯಲ್ಲಿ ರಾಜ್ಯದ ಪಾಲು ಶೇ. 10.5 ರಿಂದ ಈಗ ಶೇ. 5.6 ಕ್ಕೆ ಕುಸಿದಿದೆ. ಕೈಗಾರಿಕೆಗಳ ಮುಚ್ಚುವಿಕೆ, ಯುವ ಪ್ರತಿಭೆಗಳ ವಲಸೆ ಮತ್ತು 7.7 ಲಕ್ಷ ಕೋಟಿ ರೂಪಾಯಿಗಳ ಸಾಲದ ಹೊರೆ ಹೊಸ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಸುವೇಂದು ಅಧಿಕಾರಿ ನಂದಿಗ್ರಾಮ ಸ್ಥಾನವನ್ನು ಬಿಟ್ಟು ಭಬಾನಿಪುರವನ್ನು ಉಳಿಸಿಕೊಂಡರೆ, ಸನ್ಯಾಲ್​ರನ್ನು ನಂದಿಗ್ರಾಮದಿಂದ ಉಪಚುನಾವಣೆಯಲ್ಲಿ ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಮಾಜಿ ಶಾಸಕ ಅಶೋಕ್ ಲಾಹಿರಿ ಅವರ ಹೆಸರು ಕೇಳಿಬಂದಿದ್ದರೂ, ಅವರು ನೀತಿ ಆಯೋಗದ ಉಪಾಧ್ಯಕ್ಷರಾಗಿರುವುದರಿಂದ ಸನ್ಯಾಲ್ ಅವರೇ ಈ ಜವಾಬ್ದಾರಿಗೆ ಪ್ರಮುಖ ಆಯ್ಕೆಯಾಗುವ ಲಕ್ಷಣಗಳಿವೆ. ಮಣ್ಣಿನ ಮಗನಾಗಿ ಸನ್ಯಾಲ್ ಬಂಗಾಳದ ಆರ್ಥಿಕ ಪುನರುಜ್ಜೀವನಕ್ಕೆ ನಾಂದಿ ಹಾಡುತ್ತಾರೆಯೇ ಎನ್ನುವುದನ್ನು ಕೆಲ ತಿಂಗಳುಗಳ ಕಾಲ ಕಾದು ನೋಡಬೇಕಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net