ಎಐ ಶಿಕ್ಷಕಿ ಸೋಫಿ ಪರಿಚಯಿಸಿದ ಆದಿತ್ಯ ಕುಮಾರ್​! ವಿದ್ಯಾರ್ಥಿಯ ಪ್ರತಿಭೆ ಮೆಚ್ಚಿದ ಶಾಲಾ ಮಂಡಳಿ, ನೆಟ್ಟಿಗರಿಂದ ಪ್ರಶಂಸೆ

ಎಐ ಚಾಲಿತ ಶಿಕ್ಷಕಿ ಸೋಫಿ
ಎಐ ಚಾಲಿತ ಶಿಕ್ಷಕಿ ಸೋಫಿ
Published on

ಪ್ರಮುಖ ಮುಖ್ಯಾಂಶಗಳು

  • ಎಐ ಶಿಕ್ಷಕಿ ಸೃಷ್ಟಿಸಿದ ವಿದ್ಯಾರ್ಥಿ
  • 17 ವರ್ಷದ ವಿದ್ಯಾರ್ಥಿ ಆದಿತ್ಯ ಕುಮಾರ್
  • ಸೋಫಿ ಎಂಬ AI ಚಾಲಿತ ಶಿಕ್ಷಕಿಯಿಂದ ಪಾಠ
ಉತ್ತರ ಪ್ರದೇಶ: ಎಲ್ಲರಂತೆ ಸಹಪಾಠಿಗಳೊಡನೆ ತರಗತಿಯಲ್ಲಿ ಪಾಠ ಕೇಳಿ, ಆಟೋಟಗಳಲ್ಲಿ ಭಾಗವಹಿಸುತ್ತಿದ್ದ 17 ವರ್ಷದ ವಿದ್ಯಾರ್ಥಿ ಆದಿತ್ಯ ಕುಮಾರ್​, ಇದೀಗ ತನ್ನ ಪ್ರತಿಭೆಯನ್ನು ಎಐ ಚಾಲಿತ ಶಿಕ್ಷಕಿಯನ್ನು ತಯಾರಿಸುವ ಮೂಲಕ ಅನಾವರಣಗೊಳಿಸಿರುವುದು ಸದ್ಯ ಹಲವರ ಮೆಚ್ಚುಗೆ, ಪ್ರಶಂಸೆಗೆ ಕಾರಣವಾಗಿದೆ.
ಕೃತಕ ಬುದ್ಧಿಮತ್ತೆ ಶಿಕ್ಷಕಿಯನ್ನು ಸೃಷ್ಟಿಸಿದ ಆದಿತ್ಯ, ಪ್ರತಿಭೆ ಅನ್ನೋದು ಯಾರೊಬ್ಬರ ಸಂಪತ್ತಲ್ಲ ಎಂಬುದನ್ನು ಈ ಮೂಲಕ ಸಾಬೀತುಪಡಿಸಿದ್ದಾನೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ ಮೂಲದ ಆದಿತ್ಯ ಕುಮಾರ್, ಸೋಫಿ ಎಂಬ ಎಐ ಆಧಾರಿತ ಶಿಕ್ಷಕಿಯನ್ನು ಕಾರ್ಯರೂಪಕ್ಕೆ ತಂದಿದ್ದಾನೆ. ತರಗತಿಯಲ್ಲಿ ಮಕ್ಕಳಿಗೆ ಬೋಧನೆ ಮಾಡುವ ಹಾಗೂ ಕೇಳಿದ ಪ್ರಶ್ನೆಗೆ ಉತ್ತರಿಸುವ ಸಾಮರ್ಥ್ಯವನ್ನು ಸೋಫಿ ಒಳಗೊಂಡಿದೆ.
ತರಗತಿಯಲ್ಲಿ ಎಐ ಟೀಚರ್​ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಝಲಕ್​ ನೀಡಿರುವ ಆದಿತ್ಯ, ಅದರ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ಹಲವರ ಹುಬ್ಬೇರಿಸಿದೆ. ಆದಿತ್ಯ ಕುಮಾರ್ ಎಂದು ಗುರುತಿಸಲಾದ ವಿದ್ಯಾರ್ಥಿ ಶಿವ ಚರಣ್ ಇಂಟರ್ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಎಎನ್​ಐ ಹಂಚಿಕೊಂಡ ವಿಡಿಯೊದಲ್ಲಿ, ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (LLM) ಚಿಪ್‌ಸೆಟ್ ಬಳಸಿ ರಚಿಸಲಾದ AI ಶಿಕ್ಷಕಿ ತನ್ನನ್ನು ತಾನೇ ಪರಿಚಯಿಸಿಕೊಂಡು, ಆದಿತ್ಯ ಕೇಳಿದ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಕುರಿತು ಮಾತನಾಡಿದ ಆದಿತ್ಯ, "ಈ ರೋಬೋಟ್ ತಯಾರಿಸಲು ನಾನು ಎಲ್​ಎಲ್​ಎಂ ಚಿಪ್‌ಸೆಟ್ ಬಳಸಿದ್ದೇನೆ. ಇದನ್ನು ರೋಬೋಟ್‌ಗಳನ್ನು ತಯಾರಿಸುವ ದೊಡ್ಡ ಕಂಪನಿಗಳು ಸಹ ಬಳಸುತ್ತವೆ. ಇದು ವಿದ್ಯಾರ್ಥಿಗಳ ಅನುಮಾನಗಳನ್ನು ಬಗೆಹರಿಸುತ್ತದೆ. ಸದ್ಯಕ್ಕೆ ಈ ಎಐ ರೋಬೋಟ್​ ಕೇವಲ ಮಾತನಾಡುತ್ತೆ. ಆದರೆ, ಮುಂದಿನ ದಿನಗಳಲ್ಲಿ ನಾವಿದನ್ನು ಬರೆಯಲು ಕೂಡ ಸಾಧ್ಯವಾಗುವಂತೆ ರೂಪಿಸುತ್ತಿದ್ದೇವೆ" ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net