ನಟ ಮೋಹನ್ ಲಾಲ್‌ಗೆ ಮಾತೃ ವಿಯೋಗ: ವಯೋಸಹಜ ಕಾಯಿಲೆಯಿಂದ ಅಸುನೀಗಿದ ಶಾಂತಕುಮಾರಿ..Mohanlal

Mohanlal
Mohanlal
Published on
ಕೇರಳ: ಮಲಯಾಳಂ ಚಿತ್ರರಂಗದ ನಟ ಮೋಹನ್ ಲಾಲ್ ( Mohanlal ) ತಾಯಿ ಶಾಂತಕುಮಾರಿ ( 86)  (Santhakumari) ಅವರು ನಿಧನರಾಗಿದ್ದಾರೆ.
86 ವರ್ಷ ವಯಸ್ಸಿನ ಶಾಂತಕುಮಾರಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಸುಮಾರು ಹತ್ತು ವರ್ಷಗಳಿಂದ ಪಾರ್ಶ್ವವಾಯು ಮತ್ತು ಆರೋಗ್ಯ ಸಮಸ್ಯೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಮಧ್ಯಾಹ್ನ ಕೊಚ್ಚಿಯ ಎಲಮಕ್ಕರದಲ್ಲಿರುವ ಮೋಹನ್ ಲಾಲ್ ಅವರ ಮನೆಯಲ್ಲಿ ಅವರು ಕೊನೆಯುಸಿರೆಳೆದರು. ಅಂತ್ಯಕ್ರಿಯೆ ಬುಧವಾರ ನಡೆಯಲಿದೆ. 
ತಾಯಿಯ ಮರಣದ ಸುದ್ದಿ ತಿಳಿದ ನಂತರ ಮೋಹನ್ ಲಾಲ್ ಎರ್ನಾಕುಲಂನಲ್ಲಿರುವ ತಮ್ಮ ಮನೆಗೆ ತಲುಪಿದರು. ಶಾಂತಕುಮಾರಿ ಅವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ತಿರುವನಂತಪುರಕ್ಕೆ ಕೊಂಡೊಯ್ಯಲಾಗುವುದು ಎಂದು ವರದಿಯಾಗಿದೆ. 

ಮಗನ ಸಾಧನೆಯ ಹಿಂದಿನ ಶಕ್ತಿ

ಮೋಹನ್ ಲಾಲ್ ಅವರು ತಮ್ಮ ತಾಯಿಯೊಂದಿಗೆ ಅತ್ಯಂತ ಆಪ್ತ ಒಡನಾಟ ಹೊಂದಿದ್ದರು. "ನನ್ನ ಬದುಕಿನ ಪ್ರತಿ ಯಶಸ್ಸಿನಲ್ಲೂ ತಾಯಿಯ ಆಶೀರ್ವಾದವಿದೆ" ಎಂದು ಅವರು ಸದಾ ಹೇಳುತ್ತಿದ್ದರು. ಇತ್ತೀಚೆಗೆ ತಮಗೆ 'ದಾದಾಸಾಹೇಬ್ ಫಾಲ್ಕೆ' ಗೌರವ ಸಂದಾಗ, ಪ್ರಶಸ್ತಿ ಸ್ವೀಕರಿಸಿ ದೆಹಲಿಯಿಂದ ಬಂದ ಕೂಡಲೇ ಅವರು ಮೊದಲು ಮಾಡಿದ್ದು ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದದ್ದು. ಅಮ್ಮನ ಮೇಲಿರುವ ಅಪಾರ ಭಕ್ತಿಯಿಂದಲೇ ಮೋಹನ್ ಲಾಲ್ ಅವರು ತಮ್ಮ ಹೆತ್ತವರ ಹೆಸರಿನಲ್ಲಿ 'ವಿಶ್ವಶಾಂತಿ ಫೌಂಡೇಶನ್' ಎಂಬ ಸೇವಾ ಸಂಸ್ಥೆಯನ್ನು ಆರಂಭಿಸಿದ್ದರು.

ಜೀವನ ಪಯಣ

ಪತ್ತನಂತಿಟ್ಟ ಜಿಲ್ಲೆಯ ಇಲಂತೂರು ಗ್ರಾಮದ ಮೂಲದವರಾದ ಶಾಂತಕುಮಾರಿ ಅವರು ನಿವೃತ್ತ ಕಾನೂನು ಕಾರ್ಯದರ್ಶಿ ದಿವಂಗತ ವಿಶ್ವನಾಥನ್ ನಾಯರ್ ಅವರ ಪತ್ನಿ. ತಮ್ಮ ಪತಿಯ ಕೆಲಸದ ನಿಮಿತ್ತ ತಿರುವನಂತಪುರಕ್ಕೆ ಸ್ಥಳಾಂತರಗೊಂಡಿದ್ದ ಇವರು, ಜೀವನದ ಬಹುಭಾಗವನ್ನು ಅಲ್ಲಿಯೇ ಕಳೆದಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಾರ್ಶ್ವವಾಯು ಮತ್ತು ನರಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆಗಾಗಿ ಮೋಹನ್ ಲಾಲ್ ಅವರು ಕೊಚ್ಚಿಯ ತಮ್ಮ ಮನೆಗೆ ಕರೆತಂದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net