ಆಸಿಡ್ ದಾಳಿ ಪ್ರಕರಣ: ಪರಿಹಾರ ನೀಡದಿದ್ದರೆ ಅರೋಪಿಯ ಆಸ್ತಿ ಹರಾಜು ಹಾಕಲು ಸುಪ್ರೀಂ ಸಲಹೆ | Acid Attack
ಸಾಂದರ್ಭಿಕ ಚಿತ್ರ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಆಸಿಡ್ ದಾಳಿ ಪ್ರಕರಣ ತಡೆಯಲು ಸುಪ್ರೀಂ ಸೂಚನೆ
ಆಸಿಡ್ ದಾಳಿ ಮಾಡಿದವನ ಆಸ್ತಿ ಮಾರಿ ಸಂತ್ರಸ್ತೆಗೆ ಪರಿಹಾರ ನೀಡಿ ಎಂದ ಸುಪ್ರೀಂ
ವಿಧಿಸುವ ಶಿಕ್ಷೆಗಳು ಕಠಿಣವಾಗಿದ್ದರೆ ಮಾತ್ರ ಅಪರಾಧದ ಪ್ರಮಾಣ ಕಡಿಮೆ ಮಾಡಲು ಸಾಧ್ಯ : ಸಿಜೆಐ
ನವದೆಹಲಿ: ಆಸಿಡ್ ದಾಳಿ (Acid Attack) ಪ್ರಕರಣಗಳನ್ನು ನಿಯಂತ್ರಿಸಲು ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಸಂತ್ರಸ್ತರಿಗೆ ಆರೋಪಿಗಳು ಪರಿಹಾರ ನೀಡಲು ಸಾಧ್ಯವಾಗದ ಸಂದರ್ಭದಲ್ಲಿ ಅವರ ಆಸ್ತಿಯನ್ನು ಜಪ್ತಿ ಮಾಡಿ ಹರಾಜು ಹಾಕಬಹುದು ಎಂದು ಸಲಹೆ ನೀಡಿದೆ.
ಆಸಿಡ್ ದಾಳಿ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರ ನ್ಯಾಯಪೀಠ, ಇಂತಹ ಪ್ರಕರಣಗಳಲ್ಲಿ ವಿಧಿಸುವ ಶಿಕ್ಷೆಗಳು ಕಠಿಣವಾಗಿದ್ದರೆ ಮಾತ್ರ ಅಪರಾಧದ ಪ್ರಮಾಣ ಕಡಿಮೆ ಮಾಡಲು ಸಾಧ್ಯವೆಂದು ಹೇಳಿದೆ.
ಪ್ರಕರಣದ ವಿಚಾರಣೆಯ ವೇಳೆ, ಆರೋಪಿ ಪರಿಹಾರ ಹಣ ನೀಡಲು ಸಾಧ್ಯವಿಲ್ಲದಿದ್ದರೆ, ಅವನ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡಿ ಹರಾಜು ಹಾಕಿ ಪೀಡಿತರಿಗೆ ಹಣ ನೀಡುವುದರಲ್ಲಿ ತಪ್ಪೇನಿದೆ? ಎಂದು ಮುಖ್ಯ ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದರು. ಆಸಿಡ್ ದಾಳಿ ಪ್ರಕರಣಗಳಿಗೆ ಸಾಮಾನ್ಯ ಕಾನೂನು ಕ್ರಮಗಳಿಗಿಂತ ಕಠಿಣವಾದ ಶಿಕ್ಷೆಯ ಅಗತ್ಯವಿದೆ ಎಂದು ಅವರು ಹೇಳಿದರು.
ಆಸಿಡ್ ದಾಳಿ ರೀತಿಯ ನೀಚ ಕೆಲಸಮಾಡಿರುವ ಆರೋಪಿಗಳನ್ನು ಸುಧಾರಣೆ ಮಾಡುವ ಬದಲು ಅವರಿಗೂ ಇದೇ ರೀತಿಯ ನೋವುಂಟು ಮಾಡುವ ಕ್ರಮ ಕೈಗೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ, ದೇಶಾದ್ಯಂತ ನಡೆದ ಆಸಿಡ್ ದಾಳಿ ಪ್ರಕರಣಗಳ ಕುರಿತು ಸಮಗ್ರ ಮಾಹಿತಿಯನ್ನು ನಾಲ್ಕು ವಾರಗಳೊಳಗೆ ಸಲ್ಲಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೀಠ ನಿರ್ದೇಶನ ನೀಡಿದೆ.
ವರ್ಷವಾರು ಪ್ರಕರಣಗಳ ಸಂಖ್ಯೆ, ಚಾರ್ಜ್ಶೀಟ್ ಸಲ್ಲಿಕೆಯ ಸ್ಥಿತಿ, ತೀರ್ಪು ಬಂದ ಹಾಗೂ ಬಾಕಿ ಇರುವ ಪ್ರಕರಣಗಳ ವಿವರಗಳ ಜೊತೆಗೆ, ಸಂತ್ರಸ್ತರ ಶೈಕ್ಷಣಿಕ ಅರ್ಹತೆ, ಉದ್ಯೋಗ, ವೈವಾಹಿಕ ಸ್ಥಿತಿ, ವೈದ್ಯಕೀಯ ಚಿಕಿತ್ಸೆ, ವೆಚ್ಚಗಳು ಹಾಗೂ ಪುನರ್ವಸತಿ ಯೋಜನೆಗಳ ಮಾಹಿತಿಯನ್ನೂ ನೀಡಬೇಕೆಂದು ಆದೇಶಿಸಿದೆ.
ಆಸಿಡ್ ದಾಳಿ ಪ್ರಕರಣಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಲು ಹೊಸ ಕಾಯಿದೆ ಜಾರಿ ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಗಮನಿಸುವಂತೆ ಕೇಂದ್ರ ಸರ್ಕಾರಕ್ಕೆ ಸಿಜೆಐ ಸೂಚಿಸಿದರು,(ಏಜನ್ಸೀಸ್).