ಸನಾತನ ಧರ್ಮಕ್ಕೆ ಅಪಮಾನ ಆರೋಪ; ರಾಹುಲ್ ಗಾಂಧಿ, ಪಪ್ಪು ಯಾದವ್, ಅವದೇಶ್ ಪ್ರಸಾದ್ ವಿರುದ್ಧ ಎಫ್​ಐಆರ್ | FIR

ಪ್ರತಿಪಕ್ಷಗಳ ಅಣಕು ಪ್ರದರ್ಶನದ ಚಿತ್ರ
ಪ್ರತಿಪಕ್ಷಗಳ ಅಣಕು ಪ್ರದರ್ಶನದ ಚಿತ್ರ
Published on
ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮ ಆರೋಪವನ್ನು ಖಂಡಿಸಿ ಶುಕ್ರವಾರ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷಗಳು ನಡೆಸಿದ ಅಣಕು ಪ್ರದರ್ಶನದಲ್ಲಿ ಸನಾತನ ಧರ್ಮವನ್ನು ಅವಮಾನಿಸಲಾಗಿದೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದ್ದು, ಶನಿವಾರ(ಆ. 01) ವಾರಾಣಸಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಂಸದ ಪಪ್ಪು ಯಾದವ್ ಹಾಗೂ ಎಸ್​ಪಿ ಸಂಸದ ಅವಧೇಶ್ ಪ್ರಸಾದ್ ವಿರುದ್ಧ ಎಫ್​ಐಆರ್(FIR) ದಾಖಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕಾಶಿ ವಲಯದ ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸ್ವಾಲ್, ಲೋಕಸಭಾ ಸಂಸದರಾದ ರಾಹುಲ್ ಗಾಂಧಿ, ಪಪ್ಪು ಯಾದವ್ ಹಾಗೂ ಅವಧೇಶ್ ಪ್ರಸಾದ್ ಅವರು ಸಂಸತ್ತಿನಲ್ಲಿ ಸನಾತನ ಧರ್ಮವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕೆಲವು ಸನ್ಯಾಸಿಗಳು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ಔಪಚಾರಿಕ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಪ್ಪು ಯಾದವ್ ಎಂದೇ ಜನಪ್ರಿಯರಾಗಿರುವ ರಾಜೇಶ್ ರಂಜನ್ ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದರಾಗಿದ್ದರೆ, ಅವಧೇಶ್ ಪ್ರಸಾದ್ ಉತ್ತರ ಪ್ರದೇಶದ ಫೈಜಾಬಾದ್ ಸ್ಥಾನದಿಂದ ಸಮಾಜವಾದಿ ಪಕ್ಷದ ಸಂಸದರಾಗಿದ್ದಾರೆ.

ಸಂಸತ್​​ನಲ್ಲಿ ನಿನ್ನೆ ನಡೆದಿದ್ದೇನು..?

ಶುಕ್ರವಾರ ಸಂಸತ್ ಭವನದ ಆವರಣವು ವಿಶಿಷ್ಟ ಪ್ರತಿಭಟನೆಗೆ ಸಾಕ್ಷಿಯಾಯಿತು. ವಿರೋಧ ಪಕ್ಷದ ಸಂಸದರು ರಾಮಮಂದಿರದ ದೇಣಿಗೆ ಕಳ್ಳತನ ಆರೋಪವನ್ನು ಪ್ರತಿಬಿಂಬಿಸುವ ಬೀದಿ ನಾಟಕ ಮಾದರಿಯನ್ನು ಬಳಸಿಕೊಂಡರು. ಚಂದಾ ಚೋರ, ಗದ್ದಿ ಚೋಡ್, ಜವಾಬ್ ತುಮ್ಕೋ ದೇನಾ ಹೋಗಾ ಮತ್ತು ಅಮಿತ್ ಷಾ, ಸದನಕ್ಕೆ ಬನ್ನಿ! ಎಂಬ ಘೋಷಣೆಗಳು ಸಂಸತ್ತಿನ ಆವರಣದಲ್ಲಿ ಕೇಳಿ ಬಂದವು.

ಈ ಬೀದಿ ನಾಟಕದಲ್ಲಿ ಪೂರ್ಣಿಯಾ ಸಂಸದ ಪಪ್ಪು ಯಾದವ್ ಅರ್ಚಕನಂತೆ ಕೇಸರಿ ವಸ್ತ್ರ ಧರಿಸಿ, ಶ್ರೀರಾಮನ ಚಿತ್ರವನ್ನು ಹಿಡಿದು ಭಕ್ತರಿಂದ ಕಾಣಿಕೆ ಸ್ವೀಕರಿಸುವ ಪಾತ್ರ ವಹಿಸಿದ್ದರು. ನಾಟಕದ ಭಾಗವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಸಂಸದರು ಕಾಣಿಕೆ ಪೆಟ್ಟಿಗೆಗೆ ಹಣ ಹಾಕಿದರು. ಆದರೆ ಅರ್ಚಕನ ಪಾತ್ರದಲ್ಲಿದ್ದ ಪಪ್ಪು ಯಾದವ್, ಆ ಹಣವನ್ನು ಕಾಣಿಕೆ ಪೆಟ್ಟಿಗೆಗೆ ಹಾಕುವ ಬದಲು ತಮ್ಮ ಜೇಬಿಗೆ ಇಳಿಸಿಕೊಳ್ಳುವ ಮೂಲಕ ದೇಣಿಗೆ ಅಕ್ರಮವನ್ನು ಸಾಂಕೇತಿಕವಾಗಿ ಪ್ರದರ್ಶಿಸಿದರು. ಇದನ್ನು ಕಂಡ ಸಮಾಜವಾದಿ ಪಕ್ಷದ ಸಂಸದರೊಬ್ಬರು ಭಕ್ತನಾಗಿ ನಟಿಸಿ, ಆ ಅಕ್ರಮವನ್ನು ಪ್ರಶ್ನಿಸುವ ಸನ್ನಿವೇಶ ಮೂಡಿಬಂತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net