ಹೆಸರಿಗೆ ಧಕ್ಕೆ ತರುವ ಆರೋಪ; ತಮ್ಮ ಹೆಸರಿನ ಫೇಸ್‌ಬುಕ್ ಫ್ಯಾನ್ಸ್ ಖಾತೆ ವಿರುದ್ಧ ದೂರು ನೀಡಿದ ಸೌರವ್ ಗಂಗೂಲಿ | Sourav Ganguly
ಸೌರವ್ ಗಂಗೂಲಿ
Published on:
Copied
Follow Us
ಕೋಲ್ಕತ್ತಾ: ತಮ್ಮ ಹೆಸರಿಗೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಿ ಫೇಸ್ಬುಕ್ನ ತಮ್ಮ ಹೆಸರಿನಲ್ಲಿರುವ ಫ್ಯಾನ್ಸ್ ಖಾತೆ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಇಂದು(ಜೂ. 16) ಕೋಲ್ಕತ್ತಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಠಾಕೂರ್ಪುಕುರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸೌರವ್ ಗಂಗೂಲಿ ಫ್ಯಾನ್ಸ್ ಎಂಬ ಫೇಸ್‌ಬುಕ್ ಖಾತೆ ತಮಗೆ ಸಂಬಂಧವಿಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಜೊತೆಗೆ ಸ್ಪೋರ್ಟ್ಸ್‌ವಿಕಿ ಎಂಬ ಮತ್ತೊಂದು ಖಾತೆಯ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಫೇಸ್‌ಬುಕ್ ಪುಟದಲ್ಲಿ ತಮ್ಮ ಖ್ಯಾತಿಗೆ ಧಕ್ಕೆ ತರುವ ರೀತಿಯಲ್ಲಿ ಮತ್ತು ತಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ರೀತಿಯಲ್ಲಿ ನಿರಂತರವಾಗಿ ಪೋಸ್ಟ್ ಮಾಡುತ್ತಿರುವುದಾಗಿ ಗಂಗೂಲಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ನನಗೆ ಸಮಸ್ಯೆ ಹೆಚ್ಚುತ್ತಿದೆ, ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಹೆಸರಿನಲ್ಲಿ ಫೇಸ್‌ಬುಕ್ ಪುಟವನ್ನು ನಿರ್ವಹಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ (ಏಜೆನ್ಸೀಸ್).