ಪಾಕ್ ನಂಟು ಆರೋಪ; ಸಿ-ಗ್ರೇಡ್ ಸಿನಿಮಾಗಿಂತ ಹೀನ; ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಗೌರವ್ ಗೊಗೊಯ್ ವಾಗ್ದಾಳಿ | Gaurav Gogoi

ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಗೌರವ್ ಗೊಗೊಯ್​
ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಗೌರವ್ ಗೊಗೊಯ್​
Published on

ಪ್ರಮುಖ ಮುಖ್ಯಾಂಶಗಳು

  • ಗೌರವ್ ಗೊಗೊಯ್ ಮತ್ತು ಅವರ ಪತ್ನಿ ವಿರುದ್ಧ ಪಾಕ್ ನಂಟು ಆರೋಪ
  • ಭಾನುವಾರ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದ ಸಿಎಂ ಹಿಮಂತ ಬಿಸ್ವಾ
  • ಸಿಎಂ ಆರೋಪವನ್ನು ಇದು ಸಿ-ಗ್ರೇಡ್ ಸಿನಿಮಾಗಿಂತ ಹೀನ ಎಂದು ತಿರುಗೇಟು
ಗುವಾಹಟಿ: ಅಸ್ಸಾಂ ಮುಂದಿನ ಚುನಾವಣೆಗೆ ಮುನ್ನವೇ ಬಿಜೆಪಿ-ಕಾಂಗ್ರೆಸ್​ ನಡುವೆ ಮಾತಿನ ಚಾಟಿ ಆರಂಭವಾಗಿದ್ದು, ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ವಿರುದ್ಧ ಸಿಎಂ ಹಿಮಂತ ಬಿಸ್ವಾ ಶರ್ಮಾ ಪಾಕಿಸ್ತಾನದ ನಂಟು ಆರೋಪ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಗೊಗೊಯ್, ಇದು ಸಿ-ಗ್ರೇಡ್ ಸಿನಿಮಾಗಿಂತ ಹೀನ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಹಿಮಂತ ಬಿಸ್ವಾ ಶರ್ಮಾ ಸುದ್ದಿಗೋಷ್ಠಿ ಕುರಿತು ಎಕ್ಸ್​ನಲ್ಲಿ ವಾಗ್ದಾಳಿ ನಡೆಸಿರುವ ಅವರು, ಸಿಎಂ ಆರೋಪಗಳು ಸಿ-ಗ್ರೇಡ್ ಸಿನಿಮಾಗಿಂತ ಕೆಟ್ಟದಾಗಿದೆ. ಅವು ಬುದ್ದಿಹೀನ ಮತ್ತು ನಕಲಿ ಸುದ್ದಿ, ಸಿಎಂ ಚುನಾವಣೆಗೆ ಮುಂಚೆಯೇ ಸೂಪರ್ ಫ್ಲಾಪ್ ಸುದ್ದಿಗೋಷ್ಠಿ ನಡೆಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 
ಸ್ವತಃ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಪತ್ರಕರ್ತರನ್ನು ಸಹ ಮನವೊಲಿಸುವಲ್ಲಿ ಸಿಎಂ ವಿಫಲವಾಗಿದ್ದಾರೆ. ಸಿಎಂ ಶರ್ಮಾ ತನ್ನನ್ನು ತಾನೇ ಮುಜುಗರಕ್ಕೀಡು ಮಾಡಿಕೊಂಡಿದ್ದಾರೆ. ಎರಡೂವರೆ ಗಂಟೆಗಳ ನಂತರವೂ, ಕೊಠಡಿಯಲ್ಲಿದ್ದ ಪತ್ರಕರ್ತರಿಗೆ ಮನವರಿಕೆ ಆಗಲಿಲ್ಲ. ಶತಮಾನದ ಅತ್ಯಂತ ವಿಫಲ ಪತ್ರಿಕಾಗೋಷ್ಠಿಯಲ್ಲಿ ಕುಳಿತುಕೊಳ್ಳಬೇಕಾದ ದೆಹಲಿ ಮತ್ತು ಅಸ್ಸಾಂನ ಪತ್ರಕರ್ತರ ಬಗ್ಗೆ ನನಗೆ ವಿಷಾದವಿದೆ ಎಂದಿದ್ದಾರೆ.
ಅಸ್ಸಾಂನಲ್ಲಿ ಯಾರೂ ಸಿಎಂ ಮಾತುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಿಎಂ ಮತ್ತು ಅವರ ಕುಟುಂಬವು  ರಾಜ್ಯಾದ್ಯಂತ ಸುಮಾರು 12,000 ಬಿಘಾ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂಬ ಆರೋಪಗಳಿಂದ ಬೇರೆಡೆ ಗಮನ ಸೆಳೆಯಲು ಶರ್ಮಾ ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಆ ಭೂಮಿಯನ್ನು ಮರಳಿ ಪಡೆದು ಅದನ್ನು ಬಡವರು ಮತ್ತು ಭೂಹೀನರಿಗೆ ವಿತರಿಸುತ್ತದೆ ಎಂದು ತಿಳಿಸಿದ್ದಾರೆ.

ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದೇನು?

ಭಾನುವಾರ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಶರ್ಮಾ, ಗೌರವ್ ಗೊಗೊಯ್ ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್, ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಜೊತೆ ಸಂಪರ್ಕವನ್ನು ಹೊಂದಿದ್ದಾರೆ. ಭಾರತದ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಹಂಚಿಕೊಂಡಿದ್ದಾರೆ. 2013ರಲ್ಲಿ ಗೊಗೊಯ್ ಪಾಕಿಸ್ತಾನಕ್ಕೆ ಗೌಪ್ಯವಾಗಿ ಭೇಟಿ ನೀಡಿದ್ದರು, ಅಲ್ಲಿ ಪಾಕ್​ ಐಎಸ್ಐನಿಂದ ಕೆಲವು ತರಬೇತಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು.
ಸಿಎಂ ಸುದ್ದಿಗೋಷ್ಠಿ ಬಳಿಕ ಪ್ರತಿಕ್ರಿಯಿಸಿದ್ದ ಗೊಗೊಯ್, ಸಿಎಂ ಶರ್ಮಾ ತಮ್ಮ ಹೇಳಿಕೆಗಳನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಪುರಾವೆಗಳನ್ನು ಮರೆತುಬಿಡಿ, ಅವರು ಪತ್ರಕರ್ತರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಸಹ ಸಾಧ್ಯವಾಗಲಿಲ್ಲ. ಈ ಸಿನಿಮಾ ವಿಫಲವಾಗುತ್ತದೆ ಎಂದು ಮೊದಲೇ ಹೇಳಿದ್ದೆ, ಹಾಗೆ ಆಗಿದೆ ಎಂದು ವ್ಯಂಗ್ಯವಾಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net