ಈ ಗಾಯ ನನ್ನ ಕಥೆ ಹೇಳುತ್ತೆ!...ಯುಎಸ್‌ ಆಸ್ಪತ್ರೆಯಿಂದ ಅಭಿಷೇಕ್ ಪೋಸ್ಟ್; ಇದು ಐಷಾರಾಮಿ ಪ್ರವಾಸ ಎಂದ ಋತಬ್ರತ! | Abhishek Banerjee

Abhishek Banerjee | ಈ ಗಾಯ ನನ್ನ ಕಥೆ ಹೇಳುತ್ತೆ!...ಯುಎಸ್‌ ಆಸ್ಪತ್ರೆಯಿಂದ ಅಭಿಷೇಕ್ ಪೋಸ್ಟ್
Abhishek Banerjee | ಈ ಗಾಯ ನನ್ನ ಕಥೆ ಹೇಳುತ್ತೆ!...ಯುಎಸ್‌ ಆಸ್ಪತ್ರೆಯಿಂದ ಅಭಿಷೇಕ್ ಪೋಸ್ಟ್
Published on
ಕೋಲ್ಕತ್ತಾ: ಅಮೆರಿಕದಲ್ಲಿ ಕಣ್ಣಿನ ಚಿಕಿತ್ಸೆ ಪಡೆಯುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಮತ್ತು ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರು ತಮ್ಮ ಗಾಯಗೊಂಡ ಕಣ್ಣಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿರುವ ಅಭಿಷೇಕ್​, ಈ ಕಲೆಯು ನಾನು ಏನನ್ನೋ ಎದುರಿಸಿ ಬಂದಿದ್ದೇನೆ ಎಂದು ಹೇಳುತ್ತದೆ. ಆದರೆ ನನ್ನ ಕಣ್ಣುಗಳು ನಾನು ಇಷ್ಟಕ್ಕೇ ಮುಗಿದಿಲ್ಲ ಎಂಬುದನ್ನು ತಿಳಿಸುತ್ತವೆ ಎಂಬ ಸಂದೇಶ ಬರೆದುಕೊಂಡಿದ್ದಾರೆ. ಅವರ ಚಿಕಿತ್ಸೆಯ ಬಗ್ಗೆ ಹೆಚ್ಚಿನ ವಿವರಗಳಿಲ್ಲದ ಈ ಪೋಸ್ಟ್ ರಾಜಕೀಯ ವಿರೋಧಿಗಳ ತೀವ್ರ ಟೀಕೆಗೆ ಗುರಿಯಾಗಿದ್ದು, ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಅವರ ನಿರ್ಧಾರ ಮತ್ತು ಫೋಟೋದ ಹಿಂದಿನ ಉದ್ದೇಶವನ್ನು ವಿರೋಧ ಪಕ್ಷಗಳು ಪ್ರಶ್ನಿಸಿವೆ.

ಮತ್ತೆ ಮುನ್ನೆಲೆಗೆ ಬಂತು ಕಣ್ಣಿನ ಗಾಯದ ಕಥೆ!...

ಅಭಿಷೇಕ್ ಬ್ಯಾನರ್ಜಿ ಅವರ ಕಣ್ಣಿನ ಸಮಸ್ಯೆ 2016 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಪ್ರಾರಂಭವಾಗಿದ್ದು, ಅಂದಿನಿಂದ ಅವರು ಹಲವು ಶಸ್ತ್ರಚಿಕಿತ್ಸೆಗಳು ಹಾಗೂ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಿದ್ದಾರೆ.
ಅವರ ಈ ಇತ್ತೀಚಿನ ಅಮೆರಿಕ ಪ್ರವಾಸವೂ ಅದೇ ಚಿಕಿತ್ಸೆಯ ಭಾಗವಾಗಿದೆ. ಸೆಪ್ಟೆಂಬರ್ ಆರಂಭದಲ್ಲಿ ಅಮೆರಿಕಕ್ಕೆ ತೆರಳಿರುವ ಅವರು, ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆ ಪಡೆದಿದ್ದ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಫೋಟೋದಲ್ಲಿ ಕಣ್ಣಿನ ಸುತ್ತಲಿನ ಗಾಯದ ಕಲೆ ಕಾಣಿಸುತ್ತಿದೆಯಾದರೂ, ಯಾವುದೇ ವಿಸ್ತೃತ ವೈದ್ಯಕೀಯ ಮಾಹಿತಿಯನ್ನು ನೀಡಲಾಗಿಲ್ಲ. ಆದರೆ, ಅವರ ಸಂದೇಶವು ರಾಜಕೀಯ ಚರ್ಚೆಗೆ ವಸ್ತುವಾಗಿದೆ.

ರಾಜ್ಯಕ್ಕೆ ಮಾಡುವ ಅಪಮಾನ: ಅಗ್ನಿಮಿತ್ರ ಪಾಲ್!..

ಪಶ್ಚಿಮ ಬಂಗಾಳದ ಸಚಿವೆ ಅಗ್ನಿಮಿತ್ರ ಪಾಲ್ ಅವರು ಅಭಿಷೇಕ್ ಬ್ಯಾನರ್ಜಿ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿರುವುದನ್ನು ಖಂಡಿಸಿದ್ದು, ಬಂಗಾಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಅತ್ಯುತ್ತಮ ಮೂಲಸೌಕರ್ಯಗಳಿವೆ ಎಂದು ಅವರು ಹೇಳಿಕೊಳ್ಳುತ್ತಿರುವಾಗ ವಿದೇಶಕ್ಕೆ ಹೋಗುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ನೀವು 15 ವರ್ಷಗಳಿಂದ ಆಡಳಿತ ನಡೆಸುತ್ತಿದ್ದೀರಿ. 42 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ ಎಂದು ಹೇಳುತ್ತೀರಿ. ಹಾಗಿದ್ದರೂ ಇಲ್ಲಿ ಯಾವುದೇ ವೈದ್ಯರು ಅಥವಾ ಆಸ್ಪತ್ರೆ ಸೇವೆಗಳಿಲ್ಲ ಎಂಬಂತೆ ಬಂಗಾಳವನ್ನು ವಿದೇಶಕ್ಕೆ ಹೋಗಿ ಏಕೆ ಹಗುರವಾಗಿ ಕಾಣುತ್ತೀರಿ..? ಇದು ನಮ್ಮ ರಾಜ್ಯಕ್ಕೆ ಮಾಡುವ ಅಪಮಾನ ಎಂದು ಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದೇಶಿ ಚಿಕಿತ್ಸೆಗೆ ಸುಪ್ರೀಂ ಕೋರ್ಟ್ ಸಮ್ಮತಿ!...

ಅಭಿಷೇಕ್ ಅವರ ವಿದೇಶ ಪ್ರವಾಸದ ವಿಚಾರವು ಹಿಂದೆ ಕೋಲ್ಕತ್ತಾ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಅನುಮತಿಯಿಲ್ಲದೆ ವಿದೇಶಕ್ಕೆ ತೆರಳದಂತೆ ಇದ್ದ ನಿರ್ಬಂಧವನ್ನು ಸಡಿಲಿಸಲು ಹೈಕೋರ್ಟ್ ನಿರಾಕರಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಆ ಆದೇಶವನ್ನು ಬದಿಗೊತ್ತಿ, ಕಣ್ಣಿನ ಚಿಕಿತ್ಸೆಗಾಗಿ 3 ವಾರಗಳ ಕಾಲ ವಿದೇಶಕ್ಕೆ ತೆರಳಲು ಆಗಸ್ಟ್ 10 ರಂದು ಅನುಮತಿ ನೀಡಿತ್ತು. ಪ್ರವಾಸದ ವಿವರಗಳು, ತಂಗುವ ಸ್ಥಳ, ವೈದ್ಯರು ಮತ್ತು ಆಸ್ಪತ್ರೆಯ ಮಾಹಿತಿ, ಮರಳಿ ಬರುವ ದಿನಾಂಕ ಹಾಗೂ ಫ್ಲೈಟ್ ವಿವರಗಳನ್ನು ಒದಗಿಸಬೇಕೆಂಬ ಷರತ್ತಿನೊಂದಿಗೆ ಈ ಅನುಮತಿ ನೀಡಲಾಗಿತ್ತು.

ಸೆಪ್ಟೆಂಬರ್ 22 ರಂದು ಭಾರತಕ್ಕೆ ವಾಪಸ್!

ಹೈಕೋರ್ಟ್ ಆದೇಶದಂತೆ, ಅಭಿಷೇಕ್ ಬ್ಯಾನರ್ಜಿ ಸೆಪ್ಟೆಂಬರ್ 3 ರಂದು ವಿದೇಶಕ್ಕೆ ತೆರಳಿದ್ದು, ಸೆಪ್ಟೆಂಬರ್ 22 ರಂದು ಭಾರತಕ್ಕೆ ಮರಳಲಿದ್ದಾರೆ. ಅವರು ವಾಪಸ್ ಬಂದ ತಕ್ಷಣ ತನಿಖಾ ಸಂಸ್ಥೆಗಳು ಅವರಿಗೆ ನೋಟಿಸ್ ನೀಡಬಹುದು ಮತ್ತು ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ಅಭಿಷೇಕ್ ಬ್ಯಾನರ್ಜಿ ಅಮೆರಿಕದಲ್ಲಿ ತಂಗಿರುವ ಸ್ಥಳದ ಬಗ್ಗೆಯೂ ರಾಜಕೀಯ ಸಮರ ಜೋರಾಗಿದ್ದು, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಋತಬ್ರತ ಬ್ಯಾನರ್ಜಿ, ಅಭಿಷೇಕ್ ನ್ಯೂಜೆರ್ಸಿಯ ಅತ್ಯಂತ ವಿಲಾಸಿ ಪ್ರದೇಶದಲ್ಲಿ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ಕೇಳಿಬರುತ್ತಿದೆ. ಕೇವಲ ಕಣ್ಣಿನ ಚಿಕಿತ್ಸೆಗೆ ಇಂತಹ ಐಷಾರಾಮಿ ವಸತಿಯ ಅಗತ್ಯವೇನಿದೆ..? ಎಂದು ಅವರು ಪ್ರಶ್ನಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net