

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ದಾಳಿ.
ಮೂರು ಸರಣಿ ವಿಡಿಯೋಗಳನ್ನು ಹಂಚಿಕೊಂಡು ಕಿಡಿಕಾರಿದ ಅಭಿಷೇಕ್ ಬ್ಯಾನರ್ಜಿ.
ನ್ಯಾಯಾಂಗ, ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಟೀಕೆ ವ್ಯಕ್ತ.
ಕೋಲ್ಕತ್ತಾ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ತಡರಾತ್ರಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ, ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. 'ಬಿಜೆಪಿ ಗೂಂಡಾಗಳು ನಡು ರಾತ್ರಿ 2 ಗಂಟೆಯಲ್ಲಿ ದಾಳಿ ಮಾಡಿದ್ದಾರೆ. 6 ತಿಂಗಳಲ್ಲಿ ಮಾಡುತ್ತಿರುವ ಏಳನೇ ದಾಳಿ ಇದು' ಎಂದು ಬರೆದುಕೊಂಡಿದ್ದಾರೆ.
ಕೋಲ್ಕತ್ತಾ ಪೊಲೀಸರು, ನ್ಯಾಯಾಧೀಶರು, ಬಿಜೆಪಿ ಸರ್ಕಾರವನ್ನು ಉಲ್ಲೇಖಿಸಿ ಅಭಿಷೇಕ್ ಬ್ಯಾನರ್ಜಿ ಅವರು ಮಾಡಿರುವ ಟ್ವೀಟ್ ಭಾರಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ತರಹೇವಾರಿ ಕಾಮೆಂಟ್ಗಳು ಕೇಳಿಬಂದಿವೆ.
ಐದಕ್ಕೂ ಹೆಚ್ಚು ಜನರು ಅಭಿಷೇಕ್ ಅವರ ಮನೆಯ ಮುಂದೆ ಓಡಾಡಿಕೊಂಡು ದಾಂಧಲೆ ಮಾಡಿರುವುದು ವಿಡಿಯೋದಲ್ಲಿ ಇದೆ. ನಿವಾಸದ ಮುಂದಿರುವ ಟೆಂಟ್ಗಳನ್ನು ಹರಿದು ಹಾಕಿದ್ದಾರೆ. ದೊಣ್ಣೆಗಳಿಂದ ಗೇಟ್ಗಳಿಗೆ, ನಿವಾಸಕ್ಕೆ ಕಟ್ಟಲಾದ ಬ್ಯಾನರ್ಗೆ ಹೊಡೆದಿರುವ ದೃಶ್ಯವು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಮತ್ತೊಂದು ವಿಡಿಯೋದಲ್ಲಿ ಏಳಕ್ಕೂ ಹೆಚ್ಚು ವ್ಯಕ್ತಿಗಳು ಇದ್ದು, ಅವರನ್ನು ಪೊಲೀಸರು ತಡೆಯಲು ಯತ್ನಿಸುತ್ತಿರುವುದು, ಅಲ್ಲಿಂದ ಕರೆದೊಯ್ಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಇದೆ.
'2 ದಿನಗಳ ಕಾಲ ವೀಡಿಯೊ ಬಿಡುಗಡೆ ಮಾಡಿದ ನಂತರ, ಕೋಲ್ಕತ್ತಾ ಪೊಲೀಸರ ಕಣ್ಣೆದುರೇ ರಾತ್ರಿ 2 ಗಂಟೆಗೆ ನನ್ನ ಮನೆಯ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ. ದೃಶ್ಯಾವಳಿಗಳನ್ನು ನೀವೇ ನೋಡಿ. ಚುನಾಯಿತ ಸಂಸತ್ ಸದಸ್ಯರಿಗೇ ಇಂತಹ ಸ್ಥಿತಿ ಎದುರಾದರೆ, ಪಶ್ಚಿಮ ಬಂಗಾಳದ ಸಾಮಾನ್ಯ ಜನರ ಪರಿಸ್ಥಿತಿ ಹೇಗಾಗಬಹುದು ಚಿಂತಿಸಿ' ಎಂದು ಮನವರಿಕೆ ಮಾಡಿಸಿದ್ದಾರೆ.
'ಕಳೆದ ಆರು ತಿಂಗಳಲ್ಲಿ ನನ್ನ ಪ್ರಾಣದ ಮೇಲೆ ನಡೆದಿರುವ ಏಳನೇ ದಾಳಿ ಇದು. ಆದರೂ ಯಾವುದೇ ಪೊಲೀಸ್ ಕ್ರಮವಾಗಲಿ ಅಥವಾ ನ್ಯಾಯಾಂಗದ ಮಧ್ಯಸ್ಥಿಕೆಯಾಗಲಿ ನಡೆದಿಲ್ಲ.ನ್ಯಾಯಾಂಗವು ಕಣ್ಣುಮುಚ್ಚಿ ಕುಳಿತಿರುವುದರಿಂದ ಗೂಂಡಾಗಳು ಬೇಕಾಬಿಟ್ಟಿ ಓಡಾಡಿಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ. ನ್ಯಾಯಾಧೀಶರೇ ನೀವು ಮೂಕ ವೀಕ್ಷಕರಾಗಿ ಉಳಿದಿದ್ದಕ್ಕಾಗಿ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಕೋಲ್ಕತ್ತಾ ಪೊಲೀಸ್ ಅವರನ್ನು ಟ್ಯಾಗ್ ಮಾಡಿರುವ ಅವರು, 'ಈ ವ್ಯಕ್ತಿಗಳ ಗುರುತು ಮತ್ತು ಅವರನ್ನು ಕಳುಹಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಶಂಕಿತ ಪಿತೂರಿಯ ಹಿಂದಿನ ದುಷ್ಟ ಉದ್ದೇಶವನ್ನು ತನಿಖೆ ಮಾಡಬೇಕು' ಎಂದು ಮನವಿ ಮಾಡಿಕೊಂಡಿದ್ದಾರೆ
ಕೋಲ್ಕತ್ತಾ ಪೊಲೀಸರ ಕಣ್ಣೆದುರೇ ರಾತ್ರಿ 2 ಗಂಟೆಗೆ ಬಿಜೆಪಿ ಗೂಂಡಾಗಳು ನನ್ನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಹೀಗೆಲ್ಲ ನಡೆಯುತ್ತಿರುವಾಗ ಮೂಕ ವೀಕ್ಷಕರಾಗಿ ಉಳಿದಿದ್ದಕ್ಕಾಗಿ ಕೋಲ್ಕತ್ತಾ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು.
ನಾನು ಶೀಘ್ರದಲ್ಲೇ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತೇನೆ. ಕಳೆದ ಎರಡು ದಿನಗಳಿಂದ ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಕಚೇರಿ ಹಾಗೂ ನಿವಾಸದ ಮೇಲೆ ಕಣ್ಗಾವಲು ನಡೆಸುತ್ತಿದ್ದಾರೆ. ಅವರ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ ಕೆಳಗೆ ನಮೂದಿಸಲಾಗಿದೆ. ಪ್ರಶ್ನಿಸಿದಾಗ, ಅವರು ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಬರೆದುಕೊಂಡಿದ್ದಾರೆ.
ರಾಜ್ಯ ಪೊಲೀಸರು ಚುನಾಯಿತ ಸಂಸತ್ ಸದಸ್ಯರ ಕಚೇರಿ ಮತ್ತು ನಿವಾಸದ ಸುತ್ತ ಏಕೆ ಬೇಹುಗಾರಿಕೆ ನಡೆಸುತ್ತಿದ್ದಾರೆ? ಈ ಕಣ್ಗಾವಲಿಗೆ ಯಾರು ಅಧಿಕಾರ ನೀಡಿದ್ದಾರೆ ಮತ್ತು ಯಾವ ಉದ್ದೇಶಕ್ಕಾಗಿ ಎಂದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ, (ಏಜೆನ್ಸೀಸ್).