ಪಂಜಾಬ್ ಚುನಾವಣೆ: ಮೊದಲ ಪಟ್ಟಿ ರಿಲೀಸ್ ಮಾಡಿದ ಆಪ್​​: ಭದ್ರಕೋಟೆಯಿಂದಲೇ ಸಿಎಂ ಮಾನ್ ಸ್ಪರ್ಧೆ..ಜೈಲುಪಾಲಾಗಿರುವ ವ್ಯಕ್ತಿಗೂ ಟಿಕೆಟ್!​ | AAP First List

ಭದ್ರಕೋಟೆಯಿಂದಲೇ ಸಿಎಂ ಮಾನ್ ಸ್ಪರ್ಧೆ
ಭದ್ರಕೋಟೆಯಿಂದಲೇ ಸಿಎಂ ಮಾನ್ ಸ್ಪರ್ಧೆ
Published on: 

ಚಂಡೀಗಢ: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷವು ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಮೊದಲ ಹಂತದಲ್ಲಿ 40 ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ( AAP First List) ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮತ್ತೊಮ್ಮೆ ತಮ್ಮ ಭದ್ರಕೋಟೆಯಾದ ಧೂರಿ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದು, ಲುಧಿಯಾನ ಪಶ್ಚಿಮದಿಂದ ಜೈಲಿನಲ್ಲಿರುವ ಶಾಸಕ ಸಂಜೀವ್ ಅರೋರಾಗೆ ಟಿಕೆಟ್​ ನೀಡಲಾಗಿದೆ.

ಕಳೆದ 2022ರ ವಿಧಾನಸಭಾ ಚುನಾವಣೆಯಲ್ಲಿ ಭಗವಂತ್ ಮಾನ್ ಅವರು ಇದೇ ಧೂರಿ ಕ್ಷೇತ್ರದಿಂದ 58,206 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕ, ಭಗವಂತ್ ಮಾನ್ ಅವರು ಪಂಜಾಬ್‌ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಸಾರ್ವಜನಿಕ ಸಮೀಕ್ಷೆಗೆ ಆಧ್ಯತೆ!

ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಕುರಿತು ಮಾತನಾಡಿದ ಮುಖ್ಯಮಂತ್ರಿ ಭಗವಂತ್ ಮಾನ್, ಪಕ್ಷದ ಉನ್ನತ ಮಟ್ಟದ ನಾಯಕರೊಂದಿಗೆ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಕೇವಲ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಸೀಮಿತವಾಗದೆ, ಸಾರ್ವಜನಿಕ ಸಮೀಕ್ಷೆಗಳು ಹಾಗೂ ತಳಮಟ್ಟದಿಂದ ಜನರಿಂದ ಬಂದ ಸಕಾರಾತ್ಮಕ ಪ್ರತಿಕ್ರಿಯೆಯ ಆಧಾರದ ಮೇರೆಗೆ 40 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ. ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಪಟ್ಟಿಯನ್ನು ಜನರಿಗೆ ಮುಕ್ತವಾಗಿ ಲಭ್ಯವಾಗಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

Attachment
PDF
aam-aadmi-party-punjab-elections-candidate-list
Preview

ಇತರ ರಾಜಕೀಯ ಪಕ್ಷಗಳು, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲಕ್ಕೀಡಾಗಿ ಕೊನೆ ಕ್ಷಣದವರೆಗೂ ಕಾಯುತ್ತದೆ ಎಂದು ವ್ಯಂಗ್ಯವಾಡಿದ ಮಾನ್, ಎಎಪಿ ಅತ್ಯಂತ ವಿಶ್ವಾಸದಿಂದ ಮುಂಚಿತವಾಗಿಯೇ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದೆ ಎಂದರು. ಮುಂಚಿತವಾಗಿ ಅಭ್ಯರ್ಥಿಗಳನ್ನು ಘೋಷಿಸುವುದರಿಂದ ಅವರಿಗೆ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಸಮಯಾವಕಾಶ ಸಿಗುತ್ತದೆ ಮತ್ತು ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಹೊಸಮುಖಗಳಿಗೆ ಮಣೆ!..

ಈ ಬಾರಿ ಬಿಡುಗಡೆಯಾಗಿರುವ ಮೊದಲ ಪಟ್ಟಿಯಲ್ಲಿ ಹಿರಿಯ ನಾಯಕರು, ಹಾಲಿ ಸಚಿವರು ಹಾಗೂ ಶಾಸಕರಿಗೆ ಮಾತ್ರವಲ್ಲದೆ, ರಾಜಕೀಯಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ಅನೇಕ ಹೊಸಮುಖಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಪಕ್ಷದ ಈ ನಿರ್ಧಾರವು ಯುವ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮೊದಲ ಪಟ್ಟಿಯಲ್ಲಿ ಘೋಷಿಸಲಾದ ಪ್ರಮುಖ ವ್ಯಕ್ತಿಗಳು ಮತ್ತು ಅವರ ಕ್ಷೇತ್ರಗಳ ವಿವರಗಳು ಹೀಗಿವೆ.

  1. ಭಗವಂತ್ ಮಾನ್ (ಮುಖ್ಯಮಂತ್ರಿ): ಧೂರಿ (Dhuri) ಕ್ಷೇತ್ರ

  2. ಕುಲ್ತಾರ್ ಸಿಂಗ್ ಸಂದ್ವಾನ್ (ವಿಧಾನಸಭಾ ಸ್ಪೀಕರ್): ಕೋಟ್‌ಕಪುರ (Kotkapura) ಕ್ಷೇತ್ರ

  3. ಕುಲ್ದೀಪ್ ಸಿಂಗ್ ಧಾಲಿವಾಲ್: ಅಜ್ನಾಲಾ (Ajnala) ಕ್ಷೇತ್ರ

  4. ಡಾ. ಇಂದರ್‌ಬೀರ್ ಸಿಂಗ್ ನಿಜ್ಜರ್: ಅಮೃತಸರ ದಕ್ಷಿಣ (Amritsar South) ಕ್ಷೇತ್ರ

  5. ಸಂಜೀವ್ ಅರೋರಾ: ಲುಧಿಯಾನ ಪಶ್ಚಿಮ (Ludhiana West) ಕ್ಷೇತ್ರ

  6. ಚೌಧರಿ ಮದನ್ ಲಾಲ್ ಬಗ್ಗಾ: ಲುಧಿಯಾನ ಉತ್ತರ (Ludhiana North) ಕ್ಷೇತ್ರ

  7. ಅಜಿತ್‌ಪಾಲ್ ಸಿಂಗ್ ಕೊಹ್ಲಿ: ಪಟಿಯಾಲ (Patiala) ಕ್ಷೇತ್ರ

ಒಟ್ಟು 117 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬ್ ವಿಧಾನಸಭೆಗೆ 2027ರ ಆರಂಭದಲ್ಲಿ ಚುನಾವಣೆ ನಡೆಯಲಿದೆ. ಉಳಿದ ಎಲ್ಲಾ ರಾಜಕೀಯ ಪಕ್ಷಗಳಿಗಿಂತಲೂ ಮುಂಚಿತವಾಗಿ ಮೊದಲ ಪಟ್ಟಿಯನ್ನು ಪ್ರಕಟಿಸುವ ಮೂಲಕ ಎಎಪಿ ತನ್ನ ರಾಜಕೀಯ ಬದ್ಧತೆಯನ್ನು ಪ್ರದರ್ಶಿಸಿದೆ. ಕಳೆದ ಅವಧಿಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳು, ಉಚಿತ ವಿದ್ಯುತ್, ಮೊಹಲ್ಲಾ ಕ್ಲಿನಿಕ್‌ಗಳು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಕ್ರಮಗಳನ್ನು ಮುಂದಿಟ್ಟುಕೊಂಡು ಪಕ್ಷವು ಮತಯಾಚನೆ ಮಾಡಲಿದೆ. ಮುಂಚಿತವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ವಿರೋಧ ಪಕ್ಷಗಳಾದ ಕಾಂಗ್ರೆಸ್, ಅಕಾಲಿ ದಳ ಹಾಗೂ ಬಿಜೆಪಿ ಪಕ್ಷಗಳ ಮೇಲೆ ಒತ್ತಡವನ್ನು ಹೆಚ್ಚಿಸಿರುವುದಂತು ಸುಳ್ಳಲ್ಲ. ಈ ಘೋಷಣೆಯು ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಸ್ಪಷ್ಟ ಮೇಲುಗೈ ತಂದುಕೊಡಲಿದೆಯೇ ಎಂಬುದನ್ನು ಇನ್ನಷ್ಟೆ ಕಾದು ನೋಡಬೇಕಿದೆ(ಏಜೆನ್ಸೀಸ್​).