

ರಾಜ್ಯದಲ್ಲಿ ಅಪರಿಚಿತ ಶವಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೃತದೇಹಗಳ ಗುರುತು ಪತ್ತೆಹಚ್ಚಲು ಆಧಾರ್ ಬಯೋಮೆಟ್ರಿಕ್ ಡೇಟಾ ಬಳಸಲು ಪೊಲೀಸರಿಗೆ ಅನುಮತಿ ಸಿಕ್ಕಿದೆ. ಶವ ಪತ್ತೆಯಾದ 72 ಗಂಟೆಗಳಲ್ಲಿ ಲಭ್ಯ ಸಾಕ್ಷ್ಯಾಧಾರದಲ್ಲಿ ಗುರುತು ಪತ್ತೆಹಚ್ಚಲು ಸಾಧ್ಯವಾಗದಿದ್ದರಷ್ಟೇ ಆಧಾರ್ ಮಾಹಿತಿ ಬಳಸಬೇಕೆಂದು ಷರತ್ತು ವಿಧಿಸಲಾಗಿದೆ.
ಕೇಂದ್ರ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಅನ್ವಯ ಆಧಾರ್ ಕಾಯ್ದೆ 2016ರ ಸೆಕ್ಷನ್ 33ರ ಪ್ರಕಾರ ಆಧಾರ್ ಮಾಹಿತಿ ಬಳಸಲು ಪೊಲೀಸರಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಇದರಿಂದ ಕ್ರಿಮಿನಲ್ ಪ್ರಕರಣಗಳ ತ್ವರಿತ ತನಿಖೆಗೂ ಪೊಲೀಸರಿಗೆ ನೆರವಾಗಲಿದೆ. ಇದೇ ವೇಳೆ ಆಧಾರ್ ಮಾಹಿತಿ ಬಳಸಲು ಕಟ್ಟುನಿಟ್ಟಿನ ನಿಯಮಗಳನ್ನೂ ಕೇಂದ್ರ ಸರ್ಕಾರ ರೂಪಿಸಿದ್ದು, ಆ ಮಾರ್ಗಸೂಚಿ ಪಾಲಿಸುವ ಮುಖೇನ ಆಧಾರ್ ಬಯೋಮೆಟ್ರಿಕ್ ಡೇಟಾ ಬಳಸುವಂತೆ ರಾಜ್ಯದ ಪೊಲೀಸರಿಗೆ ಲಿಖಿತ ಸೂಚನೆ ಕೊಡಲಾಗಿದೆ. ಆಧಾರ್ ಬಯೋಮೆಟ್ರಿಕ್ ಮಾಹಿತಿ ಬಳಕೆಗೂ ಮುನ್ನ ತನಿಖಾಧಿಕಾರಿಗಳು ಕೆಲವೊಂದು ಸಾಂಪ್ರದಾಯಿಕ ವಿಧಾನಗಳಿಂದ ಮೃತದೇಹಗಳ ಗುರುತು ಪತ್ತೆಹಚ್ಚಲು ಪ್ರಯತ್ನಿಸಬೇಕು.