_1778691977160.webp?w=480&auto=format%2Ccompress&fit=max)
_1778691977160.webp?w=480&auto=format%2Ccompress&fit=max)
ಈ ಹದಿನೈದು ದಿನಗಳಲ್ಲೇ ಜಗತ್ತನ್ನು ಬೆಳಗಿದ ಎರಡು ಮಹಾನ್ ಜ್ಯೋತಿಗಳು ಉದ್ಭವಿಸಿದ್ದು. ಅವರೇ ಭಗವಾನ್ ಬುದ್ಧ ಮತ್ತು ಜಗ ಬೆಳಗಿದ ಸೂರ್ಯ ಶ್ರೀಮಚ್ಛಂಕರಾಚಾರ್ಯರು. ನಮ್ಮ ಕರ್ನಾಟಕದವರೇ ಆದ ಶ್ರೀ ಬಸವೇಶ್ವರರೂ ಇದೇ ಕಾಲದಲ್ಲಿ ಜನ್ಮವೆತ್ತಿದವರು ಎಂಬುದು ಗಮನೀಯ. ಒಬ್ಬೊಬ್ಬರ ಕಾಲ, ಕಾರ್ಯವೈಖರಿ ಭಿನ್ನಭಿನ್ನವೆಂದು ತೋರಿದರೂ ಅದು ಹೊರನೋಟಕ್ಕೆ ಮಾತ್ರ! ಆಂತರಿಕವಾಗಿ ಅವರೆಲ್ಲರ ಜೀವನವು, ಉದ್ದೇಶವೂ ಒಂದೇ ಆಗಿತ್ತು ಎಂಬುದು ಸರ್ವವೇದ್ಯ. ಶಂಕರರು ವೇದಗಳ ಸಾರವಾದ ಉಪನಿಷತ್ ತತ್ವಗಳನ್ನು ಸರ್ವರ ಸ್ವತ್ತಾಗಿಸಲು ಭಾಷ್ಯಗಳನ್ನು ಬರೆದ ಪ್ರಪ್ರಥಮರಾದರೆ, ಬುದ್ಧ ಅವುಗಳ ಸಾರವನ್ನು ಜನರಾಡುವ ಭಾಷೆಯಲ್ಲೇ ಅರುಹಿ ಅವರೆಲ್ಲ ನೀತಿವಂತರಾಗಿ ಬದುಕಬೇಕಾದ ಬದ್ಧತೆಯನ್ನು ನೀಡಿದ. ಶಂಕರರು ವೇದಾಂತವನ್ನು ಪ್ರಶ್ನಾತೀತ, ಸದೃಢ, ಸಾರ್ವಕಾಲಿಕ, ಸಾರ್ವತ್ರಿಕ, ವೈಜ್ಞಾನಿಕ ತತ್ವಗಳ ಪರಾಕಾಷ್ಠೆಯನ್ನು ಮುಟ್ಟಿದ ತಾತ್ವಿಕ ಸಮುದ್ರವನ್ನಾಗಿಸಿ ಹಿಂದೂ ಸಂಸ್ಕೃತಿಗೆ ಭದ್ರಬುನಾದಿಯನ್ನು ಒದಗಿಸಿದರೆ, ಮುಂದೆ ಬಂದ ಶ್ರೀ ರಾಮಾನುಜ, ಬಸವೇಶ್ವರರು, ಕಬೀರ ಇತ್ಯಾದಿಗಳು ಇದರ ಮೇಲೆ ಸಾಮಾಜಿಕ ಸೌಧಗಳನ್ನು ನಿರ್ಮಿಸ ಹೊರಟರು. ಶಂಕರರು ಬೌದ್ಧಿಕ ನೆಲೆಗಟ್ಟಿಗೆ ಮತ್ತು ಬುದ್ಧ ನೈತಿಕ ನೆಲೆಗಟ್ಟಿಗೆ ಒತ್ತು ನೀಡಿದ್ದುದರಿಂದ ಅವರೀರ್ವರ ಧೋರಣೆ, ದೃಷ್ಟಿಕೋನಗಳು ಪೂರಕಶಕ್ತಿಗಳಾಗಿ ಕಂಗೊಳಿಸುತ್ತವೆ.
ಬೌದ್ಧ ಧರ್ಮದ ಆಧಾರವೂ ಉಪನಿಷತ್ತೇ! ಅಷ್ಟೇ ಏಕೆ, ಭಾರತೀಯ ಸಂಜಾತ ಯಾವ ಧರ್ಮವೂ, ಇಲ್ಲಿಯವರೆಗೆ ಹುಟ್ಟಿರುವ ಇನ್ನು ಮುಂದೆ ಹುಟ್ಟುವ ಯಾವ ದರ್ಶನವೂ, ಇನ್ನೂ ಮುಂದೆ ಹೋಗಿ ಹೇಳಬೇಕೆಂದರೆ ಪ್ರಪಂಚದ ಯಾವ ಮೂಲೆಯಲ್ಲೂ ಹುಟ್ಟುವ ಯಾವ ಧರ್ಮವೂ ವೇದಾಂತದ ಚೌಕಟ್ಟಿನ ಆಚೆ ಇರಲಾರದು. ಇದು ಎಂದಿಗೂ ಸತ್ಯ, ಸಮರ್ಥನೀಯ! ಕಾರಣ ಇಷ್ಟೇ—ಪೂರ್ಣ ಸತ್ಯವನ್ನು ಉಪನಿಷತ್ಕಾರರು ಈಗಾಗಲೇ ಅರಿತು ಅದರ ವಿಸ್ತಾರವನ್ನು ಇಂದ್ರಿಯ, ಬೌದ್ಧಿಕ ಮತ್ತು ಅನುಭಾವ ಈ ಮೂರೂ ಸ್ತರಗಳಲ್ಲಿ ಅನುಭವಿಸಿ ಅದರ ಸಂಪೂರ್ಣ ಪರಿಚಯವನ್ನು ಮಾಡಿಕೊಂಡಿದ್ದಾರಲ್ಲದೆ, ಅದನ್ನು ವ್ಯಕ್ತರೂಪಕ್ಕೆ ತರುವ, ಒದಗಬಲ್ಲ ಎಲ್ಲಾ ವ್ಯಾಪ್ತಿಯನ್ನೂ ಸಂಪೂರ್ಣವಾಗಿ ಬಳಸಿಕೊಂಡುಬಿಟ್ಟಿದ್ದಾರೆ. ಈ ಉದ್ದೇಶಕ್ಕಾಗಿಯೇ ಒಂದು ವಿಶಿಷ್ಟ ಭಾಷೆಯೇ ನಿರ್ಮಿತವಾಯಿತು, ಅದೇ ಸಂಸ್ಕೃತ.
ಈ ಸತ್ಯಗಳ ಪರಿಚಯವನ್ನೇ ಜ್ಞಾನ ಎಂದು ಕರೆಯುವುದು. ಇಡೀ ಜೀವನದ ಅರ್ಥ ನಿಂತಿರುವುದೇ ಈ ಜ್ಞಾನ ನಮ್ಮಲ್ಲಿ ಎಷ್ಟಿದೆ ಎನ್ನುವುದರ ಮೇಲೆ. ಬುದ್ಧ, ಶಂಕರರು ಈ ಜ್ಞಾನವನ್ನು ತಾವೇ ಅನುಭವಿಸಿ ಸುಮ್ಮನಾಗದೆ ಎಲ್ಲರಿಗೂ ಇದನ್ನು ಹಂಚುವ ವ್ರತವನ್ನು ಕೈಗೊಂಡರು. ಜ್ಞಾನ ಉನ್ನತವಾದಷ್ಟೂ ಅದನ್ನು ಅರಿಯುವ ಮನಸ್ಸೂ ಅಷ್ಟೇ ಶಕ್ತಿಯುತವಾಗಬೇಕಾಗುತ್ತದೆ. ಈ ಕಾರ್ಯಕ್ಕೆ ಮನಸ್ಸನ್ನು ಸಜ್ಜುಗೊಳಿಸಬೇಕಾದ ಸವಾಲು ಮನುಷ್ಯನ ಜೀವನದಲ್ಲೇ ಅತ್ಯಂತ ಕಠಿಣ ಸವಾಲುಗಳಲ್ಲೊಂದು. ಆದ್ದರಿಂದಲೇ ಈ ಜ್ಞಾನವನ್ನು ಶ್ರೇಣಿಗೊಳಪಡಿಸಬೇಕಾದ ಅನಿವಾರ್ಯತೆ. ಅದೊಂದು ಬೃಹತ್ ಪ್ರಕ್ರಿಯೆ, ಮನುಷ್ಯನ ಉದ್ಧಾರದ ಮಾರ್ಗದಲ್ಲಿ ಅತ್ಯಂತ ಮಹತ್ವವಾದದ್ದು. ಈ ಮಹತ್ವಪೂರ್ಣ ಪ್ರಕ್ರಿಯೆಯನ್ನು ಸರ್ವರಿಗೂ ಕೈಗೆಟಕುವಂತೆ ಮಾಡಲು ಈ ಮಹಾನ್ ವ್ಯಕ್ತಿಗಳು ಕೈಗೊಂಡ ಕ್ರಮಗಳನ್ನು ನೋಡಿಯೇ, ಅವರ ಪರಿಶ್ರಮ, ತ್ಯಾಗಗಳನ್ನು ನೋಡಿಯೇ ನಾವು ಅವರನ್ನು ಮಹಾತ್ಮರೆಂದು ಪರಿಗಣಿಸಿರುವುದು ಮತ್ತು ಅವರ ಆರಾಧನೆಯಲ್ಲಿ ತೊಡಗಿರುವುದು.
ಬುದ್ಧನಿಂದಲೇ ಭಾರತದ ಇತಿಹಾಸ ಪ್ರಾರಂಭವಾಯಿತು (ಕನಿಷ್ಠ ಪಕ್ಷ ಗಂಭೀರವಾಗಿ ಪರಿಗಣಿಸಬಹುದಾದ ಅರ್ಥದಲ್ಲಿ) ಎನ್ನುವುದು ಕೆಲವರ ಅಭಿಮತ. ಬುದ್ಧನಂತಹ ವ್ಯಕ್ತಿಯೊಬ್ಬನ ಅವಶ್ಯಕತೆ ಆ ಕಾಲದಲ್ಲಿ ಸಾಕಷ್ಟು ಇದ್ದುದನ್ನು ನೋಡಿದಾಗ ಮತ್ತು ಬುದ್ಧ ಒಬ್ಬ ಸಂನ್ಯಾಸಿ ಹಾಗೂ ಮೋಕ್ಷಮಾರ್ಗ ಪ್ರವರ್ತಕ ಎಂಬುದನ್ನು ನೋಡಿದಾಗ, ಸಂನ್ಯಾಸ ಇಲ್ಲವೇ ಮೋಕ್ಷ (ನಿರ್ವಾಣ) ಒಬ್ಬ ವ್ಯಕ್ತಿ ಅಥವಾ ಸಮಾಜಕ್ಕೆ ಅವಶ್ಯಕ ಮಟ್ಟವನ್ನು ತಲುಪುವುದು ಯಾವಾಗ ಎನ್ನುವ ಪ್ರಶ್ನೆ ಏಳುತ್ತದೆ. ಭಾರತೀಯ ಚಿಂತನೆಯಲ್ಲಿ ಮಹತ್ವಪೂರ್ಣವಾದ ಹಲವಾರು ಅಂಶಗಳು, ಚಿಂತನೆಗಳು, ಸಾಧನೆಗಳು ಬುದ್ಧೋತ್ತರ ಕಾಲದಲ್ಲಿ ವೈಜ್ಞಾನಿಕ ಆಧಾರದ ಮೇಲೆ ಎಲ್ಲಿಯೂ ಸೇರಿಸುವುದಕ್ಕೆ ಸಾಧ್ಯವಿಲ್ಲದಿದ್ದಾಗ ಅವು ಬುದ್ಧಪೂರ್ವ ಭಾರತದ್ದು ಎಂದೇ ಹೇಳಬೇಕಾಗುತ್ತದೆ. ಇದು ಬುದ್ಧಪೂರ್ವ ಸಂಗತಿಗಳಿಗೆ ದಿಕ್ಸೂಚಿಯಾಗುತ್ತದೆ.
ಬುದ್ಧಪೂರ್ವ ಭಾರತದಲ್ಲಿ ‘ಸಮೃದ್ಧಿ’ ಎಲ್ಲ ಅರ್ಥಗಳಿಂದಲೂ ಶೋಭಿಸುತ್ತಿತ್ತು. ವಿವೇಕಾನಂದರ ಮಾತಿನಲ್ಲಿ ಹೇಳುವುದಾದರೆ ನಾಗರಿಕತೆ ತನ್ನ ತುತ್ತತುದಿಯನ್ನು ಮುಟ್ಟಿತ್ತು. ಹೇರಳ ಸಂಪತ್ತು, ಕಲೆ, ನೃತ್ಯ, ಸಂಗೀತಾದಿಗಳು ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದ್ದವು. ಬುದ್ಧನಿಗಿಂತಲೂ ಕನಿಷ್ಠ ಸಾವಿರ ವರ್ಷ ಮೊದಲು ಬಂದ ಕೃಷ್ಣ, ಗೀತೆಯನ್ನು ನಿರ್ಮಾಣ ಮಾಡಿದ್ದ. ಈ ಗೀತೆ ಉಪನಿಷತ್ತುಗಳ ಸಾರ ಎನ್ನುವುದಾದರೆ ಮತ್ತು ಈ ಉಪನಿಷತ್ತುಗಳು ವೇದದ ಕೊನೆಯ ಭಾಗಗಳು ಎನ್ನುವ ಅರ್ಥವನ್ನು ತಿಳಿದಿದ್ದೇ ಆದರೆ ‘ಪ್ರಬುದ್ಧತೆ’ ಎನ್ನುವುದು ಈ ದೇಶಕ್ಕೆ ಆ ವೇಳೆಗಾಗಲೇ ಹಳೆಯ ಮಾತಾಗಿತ್ತು ಎನ್ನುವುದು ಸರ್ವವೇದ್ಯವಾಗುತ್ತದೆ. ಉಪನಿಷತ್ತುಗಳು ಹುಟ್ಟಿಕೊಂಡಿದ್ದೇ ಸೃಷ್ಟಿಯ ರಹಸ್ಯಗಳ ಅನ್ವೇಷಣಾ ಪ್ರಯತ್ನದ ಕೊನೆಯ ಅಧ್ಯಾಯವಾಗಿ. ವೇದಕಾಲದಲ್ಲಿಯೇ ಭಾರತೀಯ ಋಷಿಗಳಿಗೆ ಈ ಕೆಳಗಿನ ಅಂಶಗಳು ಸ್ಪಷ್ಟವಾಗಿ ಪರಿಚಯವಿದ್ದುದು ಕಂಡುಬರುತ್ತದೆ:
ವಿವಿಧ ವಸ್ತುಗಳ ಮೂಲಸಾಮಗ್ರಿ ಒಂದೇ ಇದ್ದು ಅದರ ವಿಕಸನದ ತರತಮಗಳೇ ನಾವು ಕಾಣುವ ಯಾವುದೇ ರೀತಿಯ ವೈವಿಧ್ಯತೆಗೆ ಆಧಾರ.
ಈ ಮೂಲಸಾಮಗ್ರಿಯನ್ನು ಅಥವಾ ಮೂಲವಸ್ತುವನ್ನೇ ಅವರು ‘ಕಾರಣ’ ಎಂದು ಕರೆದರು. ಈ ಕಾರಣವೇ ವಿವಿಧ ಸನ್ನಿವೇಶಗಳಲ್ಲಿ ವಿವಿಧ ‘ಪರಿಣಾಮ’ಗಳನ್ನು ಹೊಂದುತ್ತದೆ. ವಸ್ತುತಃ ‘ಕಾರಣ’ ಮತ್ತು ‘ಪರಿಣಾಮ’ ಬೇರೆ ಅಲ್ಲ; ಮತ್ತು ಕಾರಣ ಪರಿಣಾಮದಂತೆಯೂ ಹಾಗೂ ಒಂದು ಪರಿಣಾಮ ಮತ್ತೊಂದು ಪರಿಣಾಮದಂತೆಯೂ ಪರಿವರ್ತನೆ ಹೊಂದಬಲ್ಲದೇ ಹೊರತು ವಸ್ತುವಿನ ನಾಶ ಸಾಧ್ಯವೇ ಇಲ್ಲ. ಪ್ರತಿ ವಸ್ತು ಹಾಗೂ ಮನುಷ್ಯ ಕೂಡ ಈ ಕಾರ್ಯ (ಪರಿಣಾಮ)-ಕಾರಣ ನಿಯಮಕ್ಕೆ ಒಳಪಟ್ಟಿದ್ದಾನೆ.
ಮಾನವನ ಬಗೆಗಿನ ರಹಸ್ಯ ಅರಿಯದೆ ವಿಶ್ವದ ರಹಸ್ಯ ಪೂರ್ಣವಾಗಿ ತಿಳಿದಂತೆ ಆಗುವುದಿಲ್ಲ. ಏಕೆಂದರೆ ಮಾನವ ವಿಶ್ವದ ಒಂದು ಅವಿಭಾಜ್ಯ ಅಂಗ. ಇದನ್ನು ಅರಿತ ಋಷಿಗಳು ಇಡೀ ಒಂದು ಕಾಲಾವಧಿಯನ್ನೇ ‘ಮಾನವ’ನನ್ನು ಅಧ್ಯಯನ ಮಾಡುವುದಕ್ಕೆ ಮೀಸಲಾಗಿರಿಸಿ ಎಲ್ಲ ರಹಸ್ಯಗಳ ಪರಿಚಯವನ್ನು ಪೂರ್ಣವಾಗಿಸಿಕೊಂಡರು. ಈ ಅನ್ವೇಷಣೆ, ಇದರ ಮಜಲುಗಳು, ವಿಶ್ಲೇಷಣೆಗಳು, ನಿರ್ಧಾರಗಳು, ವಿಶ್ವದ ಶೈಕ್ಷಣಿಕ ಸಂಸ್ಕೃತಿಯ ಇತಿಹಾಸದಲ್ಲಿ ಉತ್ತುಂಗ ಪರ್ವ ಮತ್ತು ಸುವರ್ಣಯುಗ. ಈ ಅರಿವೇ ಉಪನಿಷತ್ತಿನ ವಸ್ತು.
ಸುಮ್ಮನೆ ಅದು ಹೇಗೋ ಘಟನೆಗಳು ನಡೆಯುವುದಿಲ್ಲ. ಪ್ರತಿಯೊಂದೂ ಒಂದು ನಿಯಮಕ್ಕೆ ಅಧೀನವಾಗಿದೆ.
ವಿಶ್ಲೇಷಣೆಯ ಮೂಲಕ ಕಾರ್ಯ, ‘ಕಾರ್ಯ’ದಿಂದ ಕಾರಣ, ‘ಕಾರಣ’ದಿಂದ ‘ಮಹಾಕಾರಣ’ವನ್ನು ಅರಿತರೆ ಮತ್ತು ಈ ಮಹಾಕಾರಣದ ಮೇಲೆ ನಿಯಂತ್ರಣವನ್ನು ಸಾಧಿಸಿದ್ದೇ ಆದರೆ ಪ್ರಕೃತಿಯ ಕಾರ್ಯವಿಧಾನವನ್ನೇ ನಿಯಂತ್ರಿಸಬಹುದು.
ಮೂಲವಸ್ತುವೇ ವಿಕಾಸದ ಪ್ರಕ್ರಿಯೆಯಲ್ಲಿ ತೊಡಗಿ ವಸ್ತುರೂಪದಿಂದ ಸಸ್ಯರೂಪಕ್ಕೂ, ಸಸ್ಯರೂಪದಿಂದ ಪ್ರಾಣಿಸಂಕುಲಕ್ಕೂ ಅಲ್ಲಿಂದ ಮಾನುಷ ಸ್ಥಿತಿ ಮತ್ತು ಮಾನುಷ ಸ್ಥಿತಿಯಿಂದ ಪರಿಪೂರ್ಣ ಸ್ಥಿತಿಯನ್ನು ತಲುಪುತ್ತದೆ. (ಆಧುನಿಕ ಜೀವ ವಿಕಾಸ ತತ್ತ್ವ.)
ಉಪನಿಷತ್ಕಾಲದ ಅನ್ವೇಷಣಾ ಸಾಮರ್ಥ್ಯ, ಅನ್ವೇಷಿತ ಅದ್ಭುತಗಳು ಬೆರಗುಗೊಳಿಸುವ ಸಮರ್ಪಣಾತೀವ್ರತೆ ಇವು ಹೇಗಿತ್ತೆಂಬುದನ್ನು ಪ್ರೊ. ಮ್ಯಾಕ್ಸ್ ಮುಲ್ಲರ್ ಹೀಗೆ ಅರಹುತ್ತಾರೆ:
"It is but surely astonishing that such a system as the Vedanta should have been slowly elaborated by the indefatigable and intrepid thinkers of India thousands of years ago, a system that even now makes us feel giddy, as in mounting the last steps of the swaying spire of a Gothic cathedral. None of our philosophers, not excepting Heraclitus, Plato, Kant or Hegel, h
as ever ventured to erect such a spire, never frightened by storms or lightning. Stone follows on stone after regular succession after once the first step has been made, after once it has been clearly seen that in the beginning there can have been but One, as there will be but One in the end, whether we call it Atman or Brahman."(Three Lectures on the Vedanta Philosophy, London, 1894, p. 7).
ಮೇಲಿನ ಮಾತುಗಳನ್ನು ಕನ್ನಡೀಕರಿಸುವುದಾದರೆ: ‘ವೇದಾಂತದಂತಹ ಅದ್ಭುತ ದರ್ಶನವೊಂದನ್ನು ನಿರ್ಭೀತ, ದಣಿವರಿಯದ ಭಾರತೀಯ ಚಿಂತಕರು ಸಹಸ್ರಾರು ವರ್ಷಗಳ ಹಿಂದೆಯೇ ನಿರ್ಮಿಸಿದ್ದಾರೆಂಬ ವಿಷಯ ನಮ್ಮನ್ನು ಸಖೇದಾಶ್ಚರ್ಯಕ್ಕೆ ಒಳಪಡಿಸುತ್ತದೆ. ಬೃಹತ್ ಗೋಥಿಕ್ ಚರ್ಚಿನ ಕೊನೆಯ ಮೆಟ್ಟಿಲುಗಳನ್ನು ಹತ್ತುವಾಗ ತಲೆಸುತ್ತುವ ಅನುಭವವಾಗುವಂತೆ ಈ ವೇದಾಂತದ ವಿಚಾರ ಈಗಲೂ ಅರ್ಥೈಸುವುದಕ್ಕೆ ಕ್ಲಿಷ್ಟವೇ. ಬಿರುಗಾಳಿ, ಗುಡುಗು, ಸಿಡಿಲುಗಳಿಗೆ ಹೆದರದೆ ಇಂಥ ಅದ್ಭುತ ಚಿಂತನ ಸಾಮಗ್ರಿಯನ್ನು ನಿರ್ಮಿಸಲು ನಮ್ಮ ಪಾಶ್ಚಾತ್ಯ ಪ್ರಪಂಚದ ಯಾರಿಗೂ ಸಾಧ್ಯವಾಗಿಲ್ಲ. ಹಿರಾಕ್ಲಿಟಸ್, ಪ್ಲಾಟೋ, ಕ್ಯಾಂಟ್, ಹೆಗೆಲ್—ಯಾರಿಗೂ ಇದನ್ನು ಸಾಧಿಸಲಾಗಿಲ್ಲ. ವೇದಾಂತವೆಂಬ ಈ ಬೃಹತ್ ಸೌಧದಲ್ಲಿ ಒಂದೊಂದೇ ಕಲ್ಲನ್ನು ಕ್ರಮಬದ್ಧವಾಗಿ ಜೋಡಿಸುತ್ತಾ ಕ್ರಮೇಣ ಸೃಷ್ಟಿಯ ಆದಿಯಲ್ಲಿ ಆತ್ಮ ಅಥವಾ ಬ್ರಹ್ಮ ಎಂಬ 'ಒಂದು' ಇತ್ತು, ಆದ್ದರಿಂದ ಅಂತ್ಯದವರೆಗೂ ಈ ಒಂದೇ ಅಳಿಯದೆ ಸಂರಕ್ಷಿಸಲ್ಪಡುತ್ತದೆ’ ಎಂಬ ತತ್ವವನ್ನು ಅದ್ಭುತವಾಗಿ ಸಾಬೀತುಪಡಿಸಿದ್ದಾರೆ.
ಇದೆಲ್ಲಾ ಪಾಶ್ಚಾತ್ಯ ಚಿಂತಕರಿಗೆ ಅರ್ಥವಾಗುವುದು ಸುಲಭ. ಆದರೆ ಅಧ್ಯಯನದ ಕೊರತೆ, ಪ್ರಜ್ಞಾವಂತಿಕೆಯ ಕೊರತೆ, ವಿಶ್ಲೇಷಣಾ ಸಾಮರ್ಥ್ಯದ ಕೊರತೆ ಇವುಗಳಿಂದ ಕುಸಿದು ಹೋಗಿರುವ, ಮಾತೃಭಾಷೆಯ ಆಚೆಗೆ ಯಾವ ಚಿಂತನೆ ಅಥವಾ ಚಿಂತಕರ ಪರಿಚಯವೇ ಇಲ್ಲದ ಆಧುನಿಕ ಭಾರತೀಯ ಬುದ್ಧಿಜೀವಿಗಳಿಗೆ ವೇದಾಂತ ಇಂದಿಗೂ ಕಬ್ಬಿಣದ ಕಡಲೆಯೇ. ಆದ್ದರಿಂದ ದ್ರಾಕ್ಷಿ ಇಂದಿಗೂ ಹುಳಿಯೇ ಮತ್ತು ತೋಟಗಾರ ಸಮಾಜ ವಿರೋಧಿಯೇ.
(ಮುಂದುವರಿಯುವುದು)
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)