ಅಸ್ಸಾಂನಲ್ಲಿ ಬಹುಪತ್ನಿತ್ವ ನಿಷೇಧ ಮಸೂದೆ (Assam Prohibition of Polygamy Bill, 2025) ನವೆಂಬರ್ 27ರಂದು ಅಂಗೀಕಾರಗೊಂಡಿದೆ. ರಾಜ್ಯಪಾಲರ ಅಂಕಿತದ ಬಳಿಕ ಕಾನೂನಾಗಿ ಜಾರಿಯಾಗಲಿದೆ. ಬಹುಪತ್ನಿತ್ವವನ್ನು ಅಪರಾಧ ಎಂದು ಪರಿಗಣಿಸಿ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಮಸೂದೆಯಲ್ಲಿ ಕಲ್ಪಿಸಲಾಗಿದೆ. ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಸಂವಿಧಾನದ ಆರನೆಯ ಪರಿಚ್ಛೇದದಡಿ ಬರುವ ಪ್ರದೇಶಗಳನ್ನು ಈ ಮಸೂದೆಯಿಂದ ಹೊರಗಿಡಲಾಗಿದೆ. "ಈ ಮಸೂದೆಯು ಇಸ್ಲಾಂಗೆ ವಿರುದ್ಧವಾಗಿಲ್ಲ' ಎಂದು ಸ್ಪಷ್ಟಪಡಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಸಮುದಾಯದವರು ಈ ಮಸೂದೆಯ ವ್ಯಾಪ್ತಿಗೆ ಬರಲಿದ್ದಾರೆ. ಮುಖ್ಯವಾಗಿ, ಬಹುವಿವಾಹದ ತಡೆಯಿಂದ ಮಹಿಳಾ ಸಬಲೀಕರಣ ಸಾಧ್ಯವಾಗಲಿದೆ, ಅವರ ಹಕ್ಕುಗಳ ರಕ್ಷಣೆ ಆಗಲಿದೆ' ಎಂದಿದ್ದಾರೆ. ಲವ್ ಜಿಹಾದ್ನ್ನು ಕೂಡ ರಾಜ್ಯದಲ್ಲಿ ಶ್ರೀಘ್ರವೇ ನಿಷೇಧಿಸಲಿರುವುದಾಗಿ ಹೇಳಿದ್ದಾರೆ.